ರೈಲು ಬಂದರೂ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣ ಖಾಲಿ....ಖಾಲಿ
ಬೆಂಗಳೂರು, ಮೇ 20: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಸೆಳೆಯಲು ರೈಲು ಸೇವೆ ಒದಗಿಸಲಾಗಿತ್ತು. ಆದರೆ ಈಗ ಪರಿಸ್ಥಿತಿಯೇ ಭಿನ್ನವಾಗಿದೆ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣ ಮರುಭೂಮಿಯಂತಾಗಿದೆ. ಪ್ರಯಾಣಿರು ಒಂದು ಕಡೆ ಇರಲಿ, ಟಿಕೆಟ್ ಬೂತ್‌ನಲ್ಲಿ ರೈಲು ಟಿಕೆಟ್ ನೀಡಲು ಸಹ ಯಾವುದೇ ಸಿಬ್ಬಂದಿ ಇಲ್ಲ.
ವಾರದ ಬಹುತೇಕ ದಿನಗಳು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಹಾಲ್ಟ್ ರೈಲ್ವೇ ನಿಲ್ದಾಣ ನಿರ್ಜನವಾಗಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಜನರು ಏಕೆ ರೈಲು ಸೇವೆ ಬಳಕೆ ಮಾಡುವುದಿಲ್ಲ? ಎಂಬ ಪ್ರಶ್ನೆಗೆ ಇನ್ನೂ ರೈಲ್ವೆ ಇಲಾಖೆ ಬಳಿ ಉತ್ತರವಿಲ್ಲ.

ಬಿಐಎಎಲ್ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಸೆಳೆಯಲು ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣ ಅಭಿವೃದ್ಧಿಗೊಳಿಸಿತು. ಕೇವಲ 15 ರೂ.ಗಳಿಗೆ ನಗರದಿಂದ ಏರ್‌ಪೋರ್ಟ್ ತಲುಪಲು ರೈಲು ಸೇವೆ ಸಹಾಯಕವಾಗಿತ್ತು. ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣದಿಂದ 3.5 ಕಿ. ಮೀ. ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಎಷ್ಟು ರೈಲುಗಳ ಸಂಚಾರ?; ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣಕ್ಕೆ 3 ಜೋಡಿ ಮೆಮು ರೈಲುಗಳನ್ನು ಘೋಷಣೆ ಮಾಡಿತ್ತು. ಆದರೆ ಪ್ರಯಾಣಿಕರ ಕೊರತೆ ಕಾರಣ ಒಂದು ರೈಲು ಪ್ರತಿದಿನ ರದ್ದಾಗುತ್ತಿದೆ. ಯಶವಂತಪುರ ಮತ್ತು ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣಕ್ಕೆ ರೈಲು ಸೇವೆ ಇದೆ. ಆದರೆ ಪ್ರಯಾಣಿಕರ ಕೊರತೆ ಇದೆ.
2021ರಲ್ಲಿ ಉದ್ಘಾಟನೆಗೊಂಡ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣ 2025 ಬಂದರೂ ವಿಮಾನ ನಿಲ್ದಾಣದ ಪ್ರಯಾಣಿಕರು, ಏರ್‌ಪೋರ್ಟ್ ಸಿಬ್ಬಂದಿಗಳನ್ನು ಸೆಳೆಯಲು ವಿಫಲವಾಗಿದೆ. ಈಗ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಯಾವುದೇ ಸಿಬ್ಭಂದಿ ಇಲ್ಲ. ರೈಲುಗಳಲ್ಲಿ ಆಗಮಿಸುವ ಪ್ರಯಾಣಿಕರು ಇದರ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರತಿದಿನ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣಕ್ಕೆ ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 30. ಇದು ಸಹ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆಲವು ದಿನ 20ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚಾರವನ್ನು ನಡೆಸುತ್ತಾರೆ.
ಬೆಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಮಾಡುವ ಬಿಐಎಎಲ್ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣವನ್ನು ನಿರ್ವಹಣೆ ಮಾಡುತ್ತಿದೆ. ನಿಲ್ದಾಣ ಸ್ವಚ್ಛವಾಗಿ, ಸುಂದರವಾಗಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಹೆಚ್ಚು ಸಿಬ್ಬಂದಿಗೆ ರೈಲಿನ ವೇಳಾಪಟ್ಟಿ ತಿಳಿದಿಲ್ಲ. ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣದಲ್ಲಿ ಇಳಿದು ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಬಹುದು ಎಂಬ ಕುರಿತು ಮಾಹಿತಿಯೇ ಇಲ್ಲ.
ವಿಮಾನ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣಕ್ಕೆ 20 ನಿಮಿಷದಲ್ಲಿ ಆಗಮಿಸಬಹುದು. ವಿಮಾನ ನಿಲ್ದಾಣದ ಪ್ರಯಾಣಿಕರು, ಸಿಬ್ಬಂದಿಗಳು ವಿಮಾನ ನಿಲ್ದಾಣದಿಂದ ಬಸ್‌ನಲ್ಲಿ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನಗರಕ್ಕೆ ರೈಲಿನಲ್ಲಿ ಬರುವ ಬದಲು ಬಿಎಂಟಿಸಿಯ ವಾಯು ವಜ್ರ ಬಸ್‌ನಲ್ಲಿ ನೇರವಾಗಿ ನಗರಕ್ಕೆ ಬರುತ್ತಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಏರ್‌ಪೋರ್ಟ್ ಹಾಲ್ಟ್ ಸ್ಟೇಷನ್ ನಿಲ್ದಾಣದ ಕುರಿತು ಟ್ವೀಟ್ ಮಾಡಿದ್ದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರು ಕಡಿಮೆ ಖರ್ಚಿನಲ್ಲಿ, ಸಂಚಾರ ದಟ್ಟಣೆಗೆ ಸಿಲುಕದೇ ಸಾಗಲು ಇದು ಅನುಕೂಲವಾಗಿದೆ ಎಂದು ಹೇಳಿದ್ದರು. ಆದರೆ ಪ್ರಯಾಣಿಕರು ಮಾತ್ರ ರೈಲು ಸೇವೆ ಬಳಕೆ ಮಾಡುತ್ತಿಲ್ಲ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಸೆಳೆಯಲು ರೈಲ್ವೆ ಇಲಾಖೆ ಹಲವು ಬಾರಿ ರೈಲು ವೇಳಾಪಟ್ಟಿ ಬದಲಾವಣೆ ಮಾಡಿತ್ತು. ಆದರೆ ವಿಮಾನ ನಿಲ್ದಾಣದ ಪ್ರಯಾಣಿಕರು, ಸಿಬ್ಬಂದಿಗಳನ್ನು ಸೆಳೆಯಲು ರೈಲ್ವೆ ಇಲಾಖೆ ವಿಫಲವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರತಿದಿನ ಸುಮಾರು 500ಕ್ಕೂ ಅಧಿಕ ವಿಮಾನ ಹಾರಾಟ ನಡೆಸುತ್ತದೆ. ಆದರೆ ನಿಲ್ದಾಣಕ್ಕೆ ಬರಲು ಜನರು ರೈಲು ಸೇವೆ ಮಾತ್ರ ಬಳಕೆ ಮಾಡುತ್ತಿಲ್ಲ.












Click it and Unblock the Notifications