ಕೆಂಪೇಗೌಡರ ಪ್ರತಿಮೆ ಉದ್ಘಾಟನೆ: ಅ.21ರಂದು ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಚಾಲನೆ

ಬೆಂಗಳೂರು, ಅಕ್ಟೋಬರ್ 19: ನವೆಂಬರ್ 11ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟನೆಗೊಳ್ಳಲಿದೆ. ಈ ಸಂಬಂಧ ಅಕ್ಟೋಬರ್ 21ರಿಂದ ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್. ಅಶ್ವಥ್ ನಾರಾಯಣ್, 'ನವೆಂಬರ್ 11ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಸ್ಥಾಪಿಸಲಾದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸಂಬಂಧ ಅ.21ರಿಂದ ನ. 07ರ ವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ' ಎಂದು ತಿಳಿಸಿದರು.

ಅಭಿಯಾನಕ್ಕೆ ಜಿಲ್ಲಾ ಮಟ್ಟದಲ್ಲಿ ಸೂಕ್ತ ಸಮಿತಿಗಳನ್ನು ರಚಿಸಲಾಗಿದೆ. ಮಣ್ಣು ಸಂಗ್ರಹಿಸುವ ರಥಗಳು (ವಾಹನಗಳು) ಆಯಾ ಪ್ರದೇಶ ಇಲ್ಲವೇ ಜಿಲ್ಲೆಗಳನ್ನು ಪ್ರವೇಶಿಸಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು ಎಂದು ಹೇಳಿದರು.

 ರಾಜ್ಯಾದ್ಯಂತ ಮಣ್ಣು ಸಂಗ್ರಹ ರಥ ಸಂಚಾರ

ರಾಜ್ಯಾದ್ಯಂತ ಮಣ್ಣು ಸಂಗ್ರಹ ರಥ ಸಂಚಾರ

ಈ ಅಭಿಯಾನದ ಅಂಗವಾಗಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಪುಣ್ಯಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುವುದು. ಪ್ರತಿಯೊಂದು ರಥದ ಮಾರ್ಗನಕ್ಷೆಯನ್ನೂ ಸಿದ್ಧಪಡಿಸಲಾಗಿದೆ. ಆಯಾ ಜಿಲ್ಲೆಗಳಲ್ಲಿ ಧಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ಹಿರಿಯ ನಾಗರಿಕರು, ಹಾಲು ಉತ್ಪಾದಕರ ಒಕ್ಕೂಟಗಳು, ಕೈಗಾರಿಕಾ ಸಂಘಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

 ಕಾರ್ಯಕ್ರಮ, ಅಭಿಯಾನ ಪಕ್ಷಾತೀತವಾದದ್ದು

ಕಾರ್ಯಕ್ರಮ, ಅಭಿಯಾನ ಪಕ್ಷಾತೀತವಾದದ್ದು

ಸಂಗ್ರಹವಾಗುವ ಈ ಪವಿತ್ರ ಮೃತ್ತಿಕೆಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ 23 ಎಕರೆ ವಿಶಾಲವಾದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ ಕೆಂಪೇಗೌಡ ಥೀಮ್‌ ಪಾರ್ಕ್‌ನಲ್ಲಿ ಬಳಸಿಕೊಳ್ಳಲಾಗುವುದು. ಇಡೀ ಕಾರ್ಯಕ್ರಮ ಮತ್ತು ಅಭಿಯಾನಗಳು ಪಕ್ಷಾತೀತವಾದ ಕಾರ್ಯಕ್ರಮವಾಗಿರಲಿದೆ. ಇಂಥದೊಂದು ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು ಎಂದು ಅವರು ವಿವರಿಸಿದರು.

ಅಭಿಯಾನವನ್ನು ಯಶಸ್ವಿಯಾಗಿ ನಡೆಸಲು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತಿತರ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ಕೊಡಲಾಗಿದೆ. ಇದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಸಹಕಾರ ನೀಡುವಂತೆ ಸೂಚಿಸಲಾಗಿದೆ.

 108 ಅಡಿಯ 'ಪ್ರಗತಿ ಪ್ರತಿಮೆ' ನಾಮಕರಣ

108 ಅಡಿಯ 'ಪ್ರಗತಿ ಪ್ರತಿಮೆ' ನಾಮಕರಣ

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ, 108 ಅಡಿ ಎತ್ತರದ ಪ್ರತಿಮೆಗೆ 'ಪ್ರಗತಿ ಪ್ರತಿಮೆ' ಎಂದು ನಾಮಕರಣ ಮಾಡಲಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಅಲ್ಲಿಯ ಸಂಸ್ಥಾಪಕರ ಪ್ರತಿಮೆ ಇಲ್ಲ. ಇನ್ನು ಮುಂದೆ, ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್‌ದೀಪ್‌, ಸದಸ್ಯರಾದ ತಲಕಾಡು ಚಿಕ್ಕರಂಗೇಗೌಡ, ಗಂಗಹನುಮಯ್ಯ ಉಪಸ್ಥಿತರಿದ್ದರು.

 ಉದ್ಘಾಟನೆ ಕಾರ್ಯಕ್ರಮಗಳಿಗೆ ಎಚ್‌.ಡಿ. ದೇವೇಗೌಡರಿಗೆ ಆಹ್ವಾನ

ಉದ್ಘಾಟನೆ ಕಾರ್ಯಕ್ರಮಗಳಿಗೆ ಎಚ್‌.ಡಿ. ದೇವೇಗೌಡರಿಗೆ ಆಹ್ವಾನ

ಕೆಂಪೇಗೌಡರ ಕಂಚಿನ 'ಪ್ರಗತಿ ಪ್ರತಿಮೆ' ಲೋಕಾರ್ಪಣೆ ಮತ್ತು ಅದರ ಪೂರ್ವಭಾವಿಯಾಗಿ ಅಕ್ಟೋಬರ್ 21ಕ್ಕೆ ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಲಾಯಿತು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಬುಧವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪದ್ಮನಾಭ ನಗರದ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಜೆಡಿಎಸ್ ವರಿಷ್ಠ ಹಾಗೂ ಒಕ್ಕಲಿಗರ ಸಮುದಾಯದ ಹಿರಿಯರು ಆದ ದೇವೇಗೌಡರಿಗೆ ಹೂಗುಚ್ಛ ನೀಡಿ ಸರ್ಕಾರದ ಪರವಾಗಿ ಎರಡು ಕಾರ್ಯಕ್ರಮಗಳಿಗೆ ಅಶ್ವಥ್ ನಾರಾಯಣ್ ಆಮಂತ್ರಿಸಿದರು.

ಇದೇ ವೇಳೆ ದೇವೇಗೌಡರ ಯೋಗಕ್ಷೇಮ ವಿಚಾರಿಸಿದ ಸಚಿವರು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದರು. ನಂತರ ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಇಡೀ ಯೋಜನೆಯ ರೂಪುರೇಷೆಗಳ ಕುರಿತು ದೇವೇಗೌಡ ಅವರಿಗೆ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+