Kempegowda Airport: 3 ಗಂಟೆ ಮೊದಲೇ ಏರ್‌ಪೋರ್ಟ್ ತಲುಪಲು ಪ್ರಯಾಣಿಕರಿಗೆ ಸೂಚನೆ, ಕಾರಣವೇನು?
ಭಾರತ ಹಾಗೂ ಪಾಕಿಸ್ತಾನ ನಡುವಿನ ದಾಳಿ-ಪ್ರತಿದಾಳಿಗಳು ದೇಶದ ವಿಮಾನ ಸಂಚಾರ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಪ್ರತಿದಾಳಿ ಸಾಧ್ಯತೆಯ ಹಿನ್ನೆಲೆ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿಮಾನ ಹಾರಾಟ ಕೂಡ ರದ್ದಾಗಿವೆ. ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳಿಗೂ ಮುನ್ನವೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಕೋರಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯನ್ನು ಹೆಚ್ಚಿಸಿದ ಕಾರಣ ಈ ಸೂಚನೆಯನ್ನು ನೀಡಿರುವುದಾಗಿ ತಿಳಿಸಿದೆ. ಪ್ರಯಾಣಿಕರು ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ವಿನಂತಿ ಮಾಡಿದೆ.

ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಇರುವುದರಿಂದ ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಿ, ಪರಿಶೀಲಿಸಿ ಎಂದು ಹೇಳಿದೆ.
ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ಟ್ವಿಟರ್ (ಎಕ್ಸ್) ಖಾತೆಗಳ ಮೂಲಕವೂ ಪಡೆಯಬಹುದು ಎಂದು ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಎಲ್ಲ ವಿಮಾನಗಳಿಗೆ ಕಡ್ಡಾಯ ದ್ವಿತೀಯ ಲ್ಯಾಡರ್ ಪಾಯಿಂಟ್ ತಪಾಸಣೆ, ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಗಳಲ್ಲಿ ಹೊರಗಿನವರ ಪ್ರವೇಶ ನಿಷೇಧ ಮತ್ತು ಒಟ್ಟಾರೆ ಭದ್ರತೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಪಾಕಿಸ್ತಾನದ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ 27 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಮುಂಜಾನೆವರೆಗೆ ಸ್ಥಗಿತಗೊಳಿಸಲಾಗಿತ್ತು. ಭಾರತೀಯ ವಿಮಾನಯಾನ ಸಂಸ್ಥೆಗಳು ಗುರುವಾರ ಒಟ್ಟು 430 ವಿಮಾನಗಳ ಹಾರಾಟವನ್ನು ರದ್ದುಪಡಿಸಿದ್ದು, ದೇಶದ ಒಟ್ಟು ವೇಳಾಪಟ್ಟಿಯ ಶೇ 3ರಷ್ಟು ವಿಮಾನಗಳು ಹಾರಾಟ ನಿಲ್ಲಿಸಿವೆ. 27 ವಿಮಾನ ನಿಲ್ದಾಣಗಳನ್ನು ಮೇ 10ರ ವರೆಗೂ ಬಂದ್ ಮಾಡಲಾಗಿದ್ದು, ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಲೂಧಿಯಾನ, ಪಟಿಯಾಲ, ಬಟಿಂಡಾ, ಹಲ್ವಾರ, ಪಠಾಣ್‌ಕೋಟ್, ಶಿಮ್ಲಾ, ಧರ್ಮಶಾಲಾ, ಜೈಸಲ್ಮೇರ್, ಜೋಧ್‌ಪುರ, ಬಿಕಾನೇರ್, ಜಾಮ್‌ನಗರ, ರಾಜ್‌ಕೋಟ್, ಪೋರಬಂದರ್, ಗ್ವಾಲಿಯರ್ ಮತ್ತು ಹಿಂಡನ್ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ವಿಮಾನಯಾನ ಸಂಸ್ಥೆಗಳ ಅಂದಾಜಿನ ಪ್ರಕಾರ ಮೇ 8ರಂದು ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 450 ದೇಶೀಯ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಜಮ್ಮು, ಶ್ರೀನಗರ, ಲೇಹ್, ಅಮೃತಸರ ಮತ್ತು ಶಿಮ್ಲಾ ಸೇರಿದಂತೆ ವಾಯುವ್ಯ ಭಾರತದಾದ್ಯಂತ 20ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಸರ್ಕಾರ ಸ್ಥಗಿತಗೊಳಿಸಿತ್ತು.












Click it and Unblock the Notifications