ಪಠ್ಯಪುಸ್ತಕ ವಿವಾದ; ಆರ್‌ಎಸ್‌ಎಸ್ ಸಭೆಯಲ್ಲಿ ಶಿಕ್ಷಣ ಸಚಿವರಿಗೇ ಕ್ಲಾಸ್..!
ಬೆಂಗಳೂರು, ಜೂನ್ 06: ರಾಜ್ಯದಲ್ಲಿ ಪಠ್ಯಪುಸ್ತಕ ಗೊಂದಲ ದಿನಕ್ಕೊಂದು ತಿರುವ ಪಡೆಯುತ್ತಿದೆ. ಪಠ್ಯ ಪುಸ್ತಕದಲ್ಲಿ ಯಾವಾಗ ಆರ್‌ಎಸ್ಎಸ್ ಮುಖಂಡರ ಪಾಠ ಸೇರ್ಪಡೆ ಮಾಡಿದರೋ ಅಲ್ಲಿಂದ ವಿವಾದ ಪ್ರಾರಂಭವಾಯ್ತು. ಕುವೆಂಪುರವರು ಬರೆದ ನಾಡಗೀತೆಗೆ ಅವಮಾನ, ಬಸವಣ್ಣರಿಗೆ ಅಪಮಾನ, ಅಂಬೇಡ್ಕರ್‌ರವರಿಗೆ ಅವಮಾನ ಸೇರಿದಂತೆ ಅನಾವಶ್ಯಕವಾಗಿ ಕೆಲವು ಪಠ್ಯ ಸೇರ್ಪಡೆ, ಕೆಲವು ಪಠ್ಯವನ್ನು ಕೈಬಿಟ್ಟಿದ್ದು ವಿವಾದಕ್ಕೆ ಮತ್ತಷ್ಟು ಕಿಚ್ಚನ್ನು ಹಚ್ಚಿತ್ತು. ಆ ಕಿಚ್ಚು ಆರ್‌ಎಸ್‌ಎಸ್‌ನ ಚಡ್ಡಿಗೆ ಬೆಂಕಿ ಹಚ್ಚುವ ತನಕ ಮುಂದುವರೆದು ಬಿಟ್ಟಿತ್ತು. ಇದರ ನಡುವೆ RSS ಚಡ್ಡಿಗೆ ಕಾಂಗ್ರೆಸ್ ಬೆಂಕಿ ಹಚ್ಚುವ ಅಭಿಯಾನ ಪ್ರಾರಂಭಿಸಿದ್ದಾರೆ. ಇದರಿಂದ ಎಚ್ಚೆತ್ತಿರೋ ಆರ್‌ಎಸ್‌ಎಸ್ ಮಹತ್ವದ ಸಭೆಯನ್ನು ನಡೆಸಿದ್ದಾರೆ.
ಪಠ್ಯ ಪರಿಷ್ಕರಣ ಸಮಿತಿ ತೆಗೆದುಕೊಂಡಿರುವ ತೀರ್ಮಾನಗಳು ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರಿಂದ ಸಾಹಿತಿಗಳು ಹಿರಿಯ ಲೇಖಕರು, ಪ್ರಭಾವಿ ಸಮುದಾಯಗಳು ಸರ್ಕಾರದ ವಿರುದ್ದ ನಿಗಿ ನಿಗಿ ಅಂತ ಕೆಂಡ ಕಾರುತ್ತಿವೆ. ಇನ್ನೂ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಕೈ ಪಡೆ ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಹಚ್ಚೋ ಅಭಿಯಾನ ಪ್ರಾರಂಭಿಸಿದ್ದಾರೆ. ಯಾವಾಗ ಈ ಎಲ್ಲಾ ಗೊಂದಲಗಳು ಹೆಚ್ಚಾದವೋ ಕೂಡಲೇ ಎಚ್ಚೆತ್ತ ಪಠ್ಯ ಪರಿಷ್ಕರಣಾ ತಂಡ ಜೊತೆ ಶಿಕ್ಷಣ ಸಚಿವ ನಾಗೇಶ್ ದಿಢೀರ್ ಅಂತ ಆರ್‌ಎಸ್‌ಎಸ್ ಕಚೇರಿಗೆ ಹಾಜರಾಗಿದ್ದರು.

ಗೊಂದಲ ತೆರೆಗೆ ಆರ್‌ಎಸ್‌ಎಸ್ ಯತ್ನ
ಪಠ್ಯಪುಸ್ತಕ ಪರಿಷ್ಕರಣಾ ಗೊಂದಲದಲದಿಂದ ಇಡೀ ಸರ್ಕಾರವೇ ತಲೆ ತಗ್ಗಿಸುವಂತಾಗಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಭವಿಷ್ಯದ ಮೇಲು ಕೂಡಾ ಪರಿಣಾಮ ಬೀರಲಿದೆ. ಇದರಿಂದ ಎಲ್ಲಿಂದ ಸಮಸ್ಯೆ ಪ್ರಾರಂಭವಾಯ್ತೋ. ಅಲ್ಲೇ ಪರಿಹಾರ ಹುಡುಕೋಕೆ ಮುಂದಾಗಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್, ಸಂಸದೆ ಶೋಭಾ, ಕರಂದ್ಲಾಜೆ. ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಂಸದ ಪ್ರತಾಪ್ ಸಿಂಹ, ನಟ ಜಗ್ಗೆಶ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸೇರಿ ಹಲವು ಪ್ರಮುಖ ಸಂಘ ಪರಿವಾರದವರಿಂದ ಪಠ್ಯ ಪುಸ್ತಕ ಪರಿಶೋದನೆ ಮಾಡಲು ಮುಂದಾಗಿದ್ದು. ಚಾಮರಾಜಪೇಟೆ ಯಲ್ಲಿರುವ ಸಂಘ ಪರಿವಾರದ ಕೇಶವ ಶಿಲ್ಪ ಕಚೇರಿಯಲ್ಲಿ ಸತತ 4 ಗಂಟೆಗಳ ಕಾಲ ಸುಧೀರ್ಘ ಸಭೆ ನಡೆಸಲಾಗಿದೆ.

ಶಿಕ್ಷಣ ಸಚಿವರ ಮೇಲೆ ಆರ್‌ಎಸ್‌ಎಸ್ ಗರಂ
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿ ಹಂತದಲ್ಲೂ ಒಂದಲ್ಲಾ ಒಂದು ರೀತಿ ಸಮರ್ಥನೆ ಮಾಡಿಕೊಳ್ಳುತ್ತಲೇ ಬದಿದ್ದಾರೆ. ಆದರೆ ಪಠ್ಯ ಪುಸ್ತಕ ಮಾತ್ರ ಇನ್ನೂ ಸಿದ್ದವಾಗಿಲ್ಲ. ಅದರ ಬೆನ್ನಲ್ಲೇ RSS ಚಡ್ಡಿಗೆ ಯಾವಾಗ ಬೆಂಕಿ ಬಿತ್ತೋ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ RSS ಮುಖಂಡರು ಫುಲ್ ಗರಂ ಆಗಿದ್ದಾರೆ. ನಿಮ್ಮ ನಿರ್ಲಕ್ಷ್ಯ ದಿಂದ ಇಡೀ ಸಂಘ ಪರಿವಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.ಇಷ್ಟೊಂದು ವಿವಾದಕ್ಕೆ ಯಾರು ಕಾರಣ? ನೀವು ತೆಗೆದುಕೊಂಡಂತ ತೀರ್ಮಾನಗಳಿಂದ ಪ್ರಭಾವಿ ಸಮುದಾಯದವರು ಬೇಸರ ಗೊಂಡಿದ್ದಾರೆ.

ಗೊಂದಲಕ್ಕೆ ತೆರೆ ಎಳೆಯಲು ನಿರ್ಧಾರ
ಅಷ್ಟೇ ಅಲ್ಲದೇ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲಾ ಗೊಂದಲಗಳಿಗೂ ಇಂದೇ ತೆರೆ ಎಳೆಯಿರಿ. ಇಲ್ಲವಾದರೇ ಕಾಂಗ್ರೆಸ್‌ನವರು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ತಾರೆ. ಇದಕ್ಕೆ ಅವಕಾಶ ನೀಡೋದು ಬೇಡ ಅಂತ ಆರ್‌ಎಸ್‌ಎಸ್ ಮುಖಂಡರು ಬಿಸಿ ನಾಗೇಶ್ ವಿರುದ್ದ ಬೆಂಕಿಯನ್ನು ಉಗುಳಿದ್ದಾರೆ.

ಗೊಂದಲಕ್ಕೆ ತೆರೆ ಎಳೆಯಲು ಸಭೆಯಲ್ಲಿ ತೀರ್ಮಾನ..?
ಈ ಎಲ್ಲಾ ಗೊಂದಲಗಳಿಂದ ಬಳಲಿ ಬೆಂಡಾದ ಶಿಕ್ಷಣ ಸಚಿವರು ಬೀಸೋ ದೊಣ್ಣೆಯಿಂದ ತಪ್ಪಿಸಿ ಕೊಳ್ಳೋಕೆ ಮುಂದಾಗಿದ್ದಾರೆ.
ಯಾವ ಪಾಠ ಬೇಕೋ ಅದನ್ನೇ ಸೇರಿಸೋಣ, ವಿವಾದವಾಗುವ ಪಾಠಗಳನ್ನ ಕೂಡಲೇ ಪರಿಷ್ಕರಿಸಿ ಕೈ ಬಿಡೋಣ, ಅಂತ ಸಭೆಯಲ್ಲಿ ತೀರ್ಮಾನಗಳನ್ನ ತೆಗೆದುಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಸಭೆಯಲ್ಲಿ ತೆಗೆದು ಕೊಂಡ ತೀರ್ಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಯಾವೊಬ್ಬ ಮುಖಂಡರು ಮುಂದೆ ಬಂದಿಲ್ಲ.












Click it and Unblock the Notifications