ಕನ್ನಡ ಮೀಡಿಯಂನಲ್ಲೇ ಓದಿ 11 ಚಿನ್ನದ ಪದಕ: ಸಾಧಕಿ ಪ್ರೇಮಾಗೆ ಕರವೇ ಸನ್ಮಾನ
ಈಗಿನ ಪೋಷಕರು ತಮ್ಮ ಪ್ರೆಸ್ಟೀಜ್‌ಗಾಗಿ ಮಕ್ಕಳನ್ನು ಇಂಗ್ಲಿಷ್ ಮೀಡಿಯಂನಲ್ಲೇ ಓದಿಸುತ್ತೀವಿ ಎನ್ನುತ್ತಾರೆ. ಇನ್ನು ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ ಕೂಡ ಕ್ಷೀಣಿಸುತ್ತಿದೆ ಎನ್ನುವ ಆತಂಕಕಾರಿ ವಾತಾವರಣದಲ್ಲಿ ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲೇ ಅಪ್ರತಿಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬೀದಿಬದಿ ವ್ಯಾಪಾರಿಯ ಪುತ್ರಿ ಪ್ರೇಮಾ ಎಂಬ ವಿದ್ಯಾರ್ಥಿನಿ ಕನ್ನಡ ಎಂ.ಎ ವಿಭಾಗದಲ್ಲಿ ಬರೋಬ್ಬರಿ 11 ಚಿನ್ನದ ಪದಕ ಪಡೆದಿದ್ದಾರೆ. ಕನ್ನಡ ಮೀಡಿಯಂನಲ್ಲೇ ಪೂರ್ಣ ವ್ಯಾಸಂಗ ಮಾಡಿರುವ ಪ್ರೇಮಾ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಸನ್ಮಾನ ಕೂಡ ಮಾಡಲಾಗಿದೆ.
ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ವಿದ್ಯಾರ್ಥಿನಿ ಪ್ರೇಮಾ ಅವರನ್ನು ತಮ್ಮ ಕಚೇರಿಗೆ ಕರೆಸಿ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ. ಒಂದಲ್ಲ, ಎರಡಲ್ಲ ಈಕೆ ಗಳಿಸಿದ್ದು 11 ಚಿನ್ನದ ಪದಕಗಳು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಹುಡುಗಿ ಪ್ರೇಮಾ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪೂರೈಸಿ ಎಲ್ಲರೂ ನಿಬ್ಬೆರಗಾಗುವಂಥ ಅಚ್ಚರಿಯ ಸಾಧನೆ ಮಾಡಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನೇ ಸಹಕಾರ ಬೇಕಿದ್ದರೂ ಕೇಳು
ನಮ್ಮ ಕಚೇರಿಗೆ ತಂದೆ, ಚಿಕ್ಕಪ್ಪ ಅವರೊಂದಿಗೆ ಬಂದಾಗ ಆಕೆಯ ಕಣ್ಣಲ್ಲಿ ಕಂಡಿದ್ದು ಸ್ವಾಭಿಮಾನದ ಕಿಡಿ, ಸಾಧಿಸುವ ಛಲ ಮತ್ತು ಜ್ಞಾನದ ಹಂಬಲ. ನೀವೇ ಸರ್ ನನ್ನನ್ನು ಮೊದಲು ಕರೆಸಿ ಸನ್ಮಾನ ಮಾಡ್ತಾ ಇರೋದು ಎಂದು ಆಕೆ ಹೇಳಿ ವಿನೀತಳಾದಳು. ನೀನು ಹೊಸ ತಲೆಮಾರಿನ ಯುವಕ, ಯುವತಿಯರಿಗೆ ಪ್ರೇರಣೆಯಾಗುವಂಥವಳು, ನಿನ್ನ ಮುಂದಿನ ಓದಿಗೆ ಏನೇ ಸಹಕಾರ ಬೇಕಿದ್ದರೂ ಕೇಳು ಎಂದು ಆಕೆಗೆ ಹೇಳಿದೆ ಎಂದು ನಾರಾಯಣ ಗೌಡ ಭರವಸೆ ನೀಡಿದ್ದಾರೆ.
ನನಗೆ ಅಪ್ಪ ಅಮ್ಮ, ಶಿಕ್ಷಕರೇ ಸ್ಪೂರ್ತಿ. ಅವರಿಂದಲೇ ನಾನು ಹೆಚ್ಚು ಓದಲು, ಅಂಕ ಪಡೆಯಲು ಸಾಧ್ಯವಾಯಿತು ಎಂದಳು ಆಕೆ. ಅವರ ಅಪ್ಪ ಶರಣಪ್ಪ ಮುದಿಯಪ್ಪ ಮುಕ್ಕಣ್ಣನವರ್ ತಮ್ಮ ಊರಿನಿಂದ ಬಂದು ಬೆಂಗಳೂರಿನ ಜಾಲಹಳ್ಳಿಯಲ್ಲಿ ನೆಲೆಸಿದ್ದಾರೆ. ಬೀದಿಬದಿಯಲ್ಲಿ ಕೈಗಡಿಯಾರಗಳನ್ನು ಮಾರುತ್ತಾರೆ. ತಾಯಿ ಸಾವಿತ್ರಿ ಹೋಟೆಲ್‌ಗಳಲ್ಲಿ ಚಪಾತಿ ಪೂರೈಸುತ್ತಾರೆ. ಈ ದಂಪತಿ ಮಗಳ ಓದಿಗೆ ಎಂದೂ ಅಡ್ಡಿಯಾಗಲಿಲ್ಲ. ತನ್ನ ಕುಟುಂಬದ ಸಾಮಾಜಿಕ ಹಿನ್ನೆಲೆಯನ್ನೂ ಮೀರಿ ಈಕೆ ಓದುತ್ತಿದ್ದಾಳೆ ಎಂದು ಶ್ಲಾಘಿಸಿದ್ದಾರೆ.
ಪ್ರೇಮಾ ಒಂದನೇ ತರಗತಿಯಿಂದಲೂ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿದ್ದಾಳೆ. ಕನ್ನಡ ಎಂಎ ಪದವಿಯನ್ನು ಪಡೆದಿದ್ದಾಳೆ. ಆಕೆಗೆ ಕನ್ನಡ, ಜಾನಪದ ಆಸಕ್ತಿಯ ವಿಷಯಗಳು. ಸಹಾಯಕಿ ಪ್ರಾಧ್ಯಾಪಕಿಯಾಗುವ ಆಸೆ ಆಕೆಗಿದೆ. ಸದ್ಯಕ್ಕೆ ಬಿಎಡ್ ವ್ಯಾಸಂಗವನ್ನೂ ಮಾಡುತ್ತಿದ್ದಾಳೆ. ಪಿಎಚ್.ಡಿ ಮಾಡುವ ಬಯಕೆ ಇದೆ. ಆಕೆಯ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸಿ ಆಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಪರವಾಗಿ ಅಭಿನಂದಿಸಿದೆ ಎಂದಿದ್ದಾರೆ.












Click it and Unblock the Notifications