ಜೆನರಿಕ್ ಔಷಧಿ ಖರೀದಿಗೆ ಪ್ರತ್ಯೇಕ ನಿಗಮ
ಬೆಂಗಳೂರು, ಜೂ. 12 : ಸರ್ಕಾರಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಔಷಧಿ ಸಿಗುವಂತಾಗಲು ಜೆನರಿಕ್ ಔಷಧಿಗಳ ಖರೀದಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜೆನರಿಕ್ ಔಷಧಿಗಳ ಖರೀದಿಗೆ ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಪ್ರತ್ಯೇಕ ನಿಗಮ ಸ್ಥಾಪಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಚಿಂತನೆ ನಡೆಸಿವೆ ಎಂದು ಹೇಳಿದರು.

ಪ್ರತ್ಯೇಕ ನಿಗಮ ಸ್ಥಾಪನೆಯ ಕುರಿತ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳಿಸಿಕೊಡಲಾಗಿದೆ. ಇಲಾಖೆ ಒಪ್ಪಿಗೆ ನೀಡಿದರೆ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ನಿಗಮ ಸ್ಥಾಪನೆ ಕಾರ್ಯವನ್ನು ಆರಂಭಿಸಲಾಗುವುದು ಎಂದರು.
ಸದ್ಯ ಜೆನರಿಕ್ ಜೌಷಧಿಗಳನ್ನು ಆಯಾ ಸಂಸ್ಥೆಗಳು ಪ್ರತ್ಯೇಕ ಟೆಂಡರ್ ಮೂಲಕ ಖರೀದಿ ಮಾಡುತ್ತಿವೆ. ಆದರೆ, ಜೌಷಧಿ ಖರೀದಿಯಲ್ಲಿ ಶೇಕಡಾ ನೂರರಷ್ಟು ಪಾರದರ್ಶಕತೆ ತರಲು ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಗಮ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಿಗಮ ಆರಂಭವಾದ ಬಳಿಕ ಔಷಧಗಳ ಖರೀದಿದಾಗಿ ಆಸ್ಪತ್ರೆಗಳು ಟೆಂಡರ್ ಕರೆದಾಗ, ಷರತ್ತುಗಳನ್ನು ವಿಧಿಸಿ ಮಾರುಕಟ್ಟೆಯಲ್ಲಿ ವಿಶ್ವಾಸ ಉಳಿಸಿಕೊಂಡಿರುವ ಪ್ರತಿಷ್ಠಿತ ಸಂಸ್ಥೆಗಳಿಗೆ ಮಾತ್ರ ಆದ್ಯತೆ ನೀಡಲಾಗುವುದೆಂದು ಸಚಿವರು ತಿಳಿಸಿದರು.












Click it and Unblock the Notifications