ಬೆಂಗಳೂರು KWIN City ಯೋಜನೆ ಅಪ್ಡೇಟ್ಸ್: ಕೇಂದ್ರಕ್ಕೆ ಪತ್ರ ಬರೆದ ಎಂ.ಬಿ ಪಾಟೀಲ್
ಬೆಂಗಳೂರು, ನವೆಂಬರ್ 18: ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ (KWIN City) ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ ಸಂಬಂಧ ಕೇಂದ್ರಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಔಷಧ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು (ನೈಪರ್) ಮಂಜೂರು ಮಾಡಬೇಕಾದ ಜರೂರಿದೆ. ಆ ಕೇಂದ್ರವನ್ನು ಉದ್ದೇಶಿತ ಬೆಂಗಳೂರು ಕ್ವಿನ್ ಸಿಟಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸೋಮವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಔಷಧ ಮತ್ತು ಬಯೋಟೆಕ್ ತಯಾರಿಕಾ ಕಂಪನಿಗಳ ಮುಖ್ಯಸ್ಥರ ಜತೆಗಿನ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ಫಾರ್ಮಾ ಕಂಪನಿಗಳ ಸಲಹೆ ಮೇರೆಗೆ ಸಚಿವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಇರುವ ಉತ್ತಮ ಫಾರ್ಮಾ ಕಾರ್ಯಪರಿಸರದಿಂದಾಗಿ ಕೇವಲ ನೆರೆ ರಾಜ್ಯಗಳೊಂದಿಗೆ ಸ್ಪರ್ಧೆ ಅಷ್ಟೇ ಅಲ್ಲ ಚೀನಾ ಜತೆಗೂ ಮಾಡಬಹುದಾಗಿದೆ ಎಂದು ಹಲವು ಉದ್ಯಮಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಫಾರ್ಮಾ ಮೇಲೆ ಹೂಡಿಕೆ ಮಾಡುವ ಕಂಪನಿಗಳಿಗೆ ನಮ್ಮ ಸರ್ಕಾರ ಎಲ್ಲ ವಿಧದ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಈ ಮೂಲಕ ಮುಕ್ತ ಆಹ್ವಾನ ನೀಡಿದರು.
ನೂರಾರು ಎಕ್ರೆ ಕೈಗಾರಿಕೆ ಭೂಮಿ ಲಭ್ಯ
ರಾಜ್ಯದಲ್ಲಿ ಚೆನ್ನೈ- ಬೆಂಗಳೂರು ಬಿಜಿನೆಸ್ ಕಾರಿಡಾರಿನಲ್ಲಿ ತುಮಕೂರಿನಲ್ಲಿ 360 ಎಕರೆ, ವಿಜಯಪುರದ ಮುಳವಾಡ ಹಂತ 1 ಮತ್ತು 2ರಲ್ಲಿ 850 ಎಕರೆ, ಯಾದಗಿರಿ ಜಿಲ್ಲೆಯ ಕಡಚೂರಿನಲ್ಲಿ 763 ಎಕರೆ, ಚಿತ್ರದುರ್ಗದ ಯಟಗುರ್ಕಿಯಲ್ಲಿ 764 ಎಕರೆ ಭೂಮಿ ಅಲ್ಲಿಯ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿದೆ. ಜೊತೆಗೆ ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಕೋಲಾರದ ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿ ತಲಾ 1,000 ಎಕರೆ ಜಾಗವಿದೆ. ಔಷಧ ತಯಾರಿಕೆ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ, ತಮ್ಮ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದರು ತಿಳಿಸಿದರು.

ವಸತಿ, ಶಾಲೆ, ಹೋಟೆಲ್, ಸಂಪರ್ಕ ರಸ್ತೆಗಳು ಇಲ್ಲದಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಉದ್ಯಮಿಗಳು ಬೆಂಗಳೂರಿನಿಂದ ಹೊರಗಿನ ಸ್ಥಳಗಳಲ್ಲಿ ಹೂಡಿಕೆ ಮಾಡಿದರೆ ಆಕರ್ಷಕ ರಿಯಾಯಿತಿ ಕೊಡಲಾಗುವುದು. ಜೊತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿ.ಎ. ನಿವೇಶನಗಳಲ್ಲಿ ವಸತಿ/ಶಾಲೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿ-ಕ್ಯಾಂಪ್ ಮಾದರಿಯಲ್ಲಿ ಶೈಕ್ಷಣಿಕ ಅನುಕೂಲ ಕಲ್ಪಿಸುವುದನ್ನು ಚಿಂತಿಸಲಾಗುವುದು. ಜೊತೆಗೆ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮೋದನೆಗಳ ತ್ವರಿತ ಗತಿಯಲ್ಲಿ ನೀಡುವಂತೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ಬದಲಾವಣೆ ಕಣ್ಣಿಗೆ ಕಾಣಲಿದೆ ಎಂದು ಭರವಸೆ ನೀಡಿದರು.
ಔಷಧ ತಯಾರಿಕಾ ಕ್ಷೇತ್ರದಲ್ಲಿ ಈಗ ಕೃತಕ ಬುದ್ಧಿಮತ್ತೆ (AI) ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದನ್ನು ಉದಾಸೀನ ಮಾಡಬಾರದು. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಫಾರ್ಮಾ ವಲಯದವರು ಆರು ತಿಂಗಳಿಗೊಮ್ಮೆಯಾದರೂ ಒಂದು ಸಭೆ ನಡೆಸಿ, ಹೊಸ ಆಗುಹೋಗುಗಳಿಗೆ ತೆರೆದುಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.
ರಾಜ್ಯದಲ್ಲಿ ಉದ್ಯಮಗಳಿಗೆ 1ಕಿಲೋ ಲೀಟರ್ ನೀರಿಗೆ ಕೇವಲ 50 ರೂ. ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ ಇದನ್ನು 120 ರೂ.ಗೆ ಏರಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪನಿಗಳು ಪ್ರತ್ಯೇಕವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಹೊಂದುವ ಬದಲು ಸಾಮೂಹಿಕವಾಗಿ ಮಾಡಿಕೊಂಡರೆ ಮಿತವ್ಯಯ ಸಾಧಿಸಬಹುದು ಎಂದು ಸಚಿವರು ಹೇಳಿದರು.












Click it and Unblock the Notifications