PSI ನೇಮಕಾತಿ ಅಕ್ರಮ: ಐವರು ಅಭ್ಯರ್ಥಿಗಳು ವಿಚಾರಣೆಗೆ ಗೈರು ಹಾಜರಿ!
ಬೆಂಗಳೂರು, ಏ. 20: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಬುಧವಾರ ಐವರು ಪಿಎಸ್ಐ ಅಭ್ಯರ್ಥಿಗಳು ಸಿಐಡಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಹಾಲ್ ಟಿಕೆಟ್ ಮತ್ತು ಒಎಂಆರ್ ಶೀಟ್ ಕಾರ್ಬನ್ ಹಾಳೆ ಸಮೇತ ವಿಚಾರಣೆಗೆ ಹಾಜರಾಗುವಂತೆ 50 ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ನಲವತ್ತೈದು ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗಿದ್ದು, ಐವರು ಗೈರು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ನೈಜ ಕಾರಣದಿಂದ ಗೈರು ಹಾಜರಾದರೇ, ಇಲ್ಲವೇ ಸಿಐಡಿ ಪೊಲೀಸರಿಂದ ಅನುಮತಿ ಪಡೆದು ಗೈರು ಹಾಜರಾದರೇ ಅಥವಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದು, ಸಿಕ್ಕಿ ಬೀಳುವ ಭೀತಿಯಿಂದ ಗೈರು ಹಾಜರಾದರೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಂತೂ ಹಂತ ಹಂತವಾಗಿ ಪಿಎಸ್ಐ ಆಗಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಇನ್ನು ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಅವಕಾಶ ಕೊಟ್ಟ ಆರೋಪ ಎದುರಿಸುತ್ತಿರುವ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮಾಲಕಿ ದಿವ್ಯ ಹಾಗರಗಿ ಅವರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ಸಾಕ್ಷ ನಾಶಪಡಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಅವರ ಪತಿ ರಾಜೇಶ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೊರ ರಾಜ್ಯದಲ್ಲಿ ದಿವ್ಯಾ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆಕೆಯ ಪತ್ತೆಗಾಗಿ ಒಂದು ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.












Click it and Unblock the Notifications