ಡಿಕೆಶಿ ಜೊತೆ ದಿವ್ಯಾ ಹಾಗರಗಿ ಇರುವ ಫೋಟೊ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು, ಏಪ್ರಿಲ್ 26: ಪಿಎಸ್ಐ ನೇಮಕಾತಿಗೆ ನಡೆಯುವ ಪರೀಕ್ಷೆಯ ಅಕ್ರಮ ವಿಚಾರದಲ್ಲಿ ಸಿಐಡಿ ವಿಚಾರಣೆಯನ್ನು ನಡೆಸುತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರವ ಎಲ್ಲಾ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪರೀಕ್ಷೆಯ ಅಕ್ರಮದಲ್ಲಿ ಜ್ಞಾನಜ್ಯೋತಿ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮಾತ್ರ ನಾಪತ್ತೆಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದು ಬರೋಬ್ಬರಿ 14 ದಿನಗಳು ಕಳೆದರೂ ಪ್ರಮುಖ ಆರೋಪಿ ಎನ್ನಲಾದ ದಿವ್ಯಾ ಹಾಗರಗಿ ಮಾತ್ರ ಸಿಐಡಿಯ ಅಧಿಕಾರಿಗಳಿಗೆ ಚಳ್ಳೇಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದಾರೆ. ಇನ್ನು ಗೃಹಸಚಿವ ಆರಗ ಜ್ಞಾನೇಂದ್ರ ಜೊತೆಗಿನ ಫೋಟೋ ಬಿಡುಗಡೆ ಮಾಡಿದ್ದ ಪ್ರಿಯಾಂಕ್ ಖರ್ಗೆ ಅಲ್ಲೇನು ಬಾದಾಮಿ ಗೊಡಂಬಿ ತಿಂತಿದ್ರ ಎಂದು ವ್ಯಂಗ್ಯ ವಾಡಿದ್ರು.ಇದೀಗ ಬಿಜೆಪಿಯು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ದಿವ್ಯಾ ಹಾಗರಗಿ ಇರುವ ಫೋಟೋವನ್ನು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ.
ಬಿಜೆಪಿ ಕರ್ನಾಟಕ ಏನಂತ ಟ್ವಿಟ್ ಮಾಡಿದ್ದಾರೆ ಗೊತ್ತಾ..?
ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ ನೋಡಿ..!!! ಈ ಚಿತ್ರ ಏನು ಹೇಳುತ್ತದೆ? ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ! ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ? ಎಂದು ಹೇಳಿ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಲಾಗಿದೆ.

ಬಿಜೆಪಿಯ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವೇನು..?
ಸಿಐಡಿ ಅಧಿಕಾರಿಗಳು ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ನೊಟೀಸ್ ನೀಡಿ ಸೂಕ್ತ ಸಾಕ್ಷ್ಯಾಧರಗಳೊಂದಿಗೆ ಬರಲು ಸೂಚಿಸಿತ್ತು. ಇದರಿಂದ ಕೆರಳಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದರು. ಪತ್ರಿಕಾಗೋಷ್ಠಿಯನ್ನು ನಡೆಸಿದ ಶಾಸಕರು ಗೃಹ ಸಚಿವರ ಜೊತೆ ದಿವ್ಯಾ ಹಾಗರಗಿ ಇರುವ ಫೋಟೋವನ್ನು ತೋರಿಸಿ ಗೃಹ ಸಚಿವರು ಬಾದಾಮಿ ಗೋಡಂಬಿ ತಿನ್ನಲು ಹೋಗಿದ್ದರಾ? ಎಂದು ಪ್ರಶ್ನೆ ಮಾಡಿದ್ದರು. ಇದೇ ಕಾರಣಕ್ಕೆ ಬಿಜೆಪಿ ಸಹ ಕೆಪಿಸಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ದಿವ್ಯಾ ಹಾಗರಗಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿ ತೀಕ್ಷ್ಣವಾಗಿಯೇ ಪ್ರತಿಕ್ರಿಯೆಯನ್ನು ನೀಡಿದೆ.
ದಿವ್ಯಾ ಹಾಗರಗಿ ವಿಚಾರಲ್ಲಿ ಆಡಳಿತ ಮತ್ತು ವಿಪಕ್ಷಗಳ ಟ್ವೀಟ್ ವಾರ್..
ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳಿಗೆ ಇನ್ನು ಸಿಕ್ಕಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಕೂಡ ಗೃಹ ಸಚಿವರೇ ದಿವ್ಯಾ ಹಾಗರಗಿಯನ್ನು ರಕ್ಷಿಸುತ್ತಿದ್ದಾರೆ ಎಂದು ಟ್ವಿಟ್ ನಲ್ಲೇ ಕುಕ್ಕಿದೆ. ಇದೇ ಕಾರಣಕ್ಕೆ ಬಿಜೆಪಿಯು ಸಹ ದಿವ್ಯಾ ಹಾಗರಗಿಯ ವಿಚಾರದಲ್ಲಿ ಡಿಕೆಶಿಯವರನ್ನೇ ಟಾರ್ಗೆಟ್ ಮಾಡಿಕೊಂಡು ಟ್ವೀಟ್ ಮಾಡುತ್ತಿದೆ.

ದಿವ್ಯಾ ಹಾಗರಗಿ ಎಲ್ಲಿದ್ದಾರೆ..?
ದಿವ್ಯಾ ಹಾಗರಗಿಯನ್ನು ಬಂಧಿಸಲು ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆದರೆ ದಿವ್ಯಾ ಹಾಗರಗಿಯ ಸುಳಿವು ಮಾತ್ರ ಸಿಕ್ಕಿಲ್ಲ. ರಾಜಕಾರಣಿಗಳು ಮಾತ್ರ ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಪಿಎಸ್ ಐ ಪರೀಕ್ಷೆಯ ಅಕ್ರಮದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಬೇಕಾದರೇ ದಿವ್ಯಾ ಹಾಗರಗಿ ಸಿಗಲೇಬೇಕಿದೆ.

ಮೂರು ಪಕ್ಷಕ್ಕೂ ಬೇಕಾಗಿದ್ದ ದಿವ್ಯಾ ಹಾಗರಗಿ..?
ದಿವ್ಯಾ ಹಾಗರಗಿ ಎಲ್ಲಾ ಪಕ್ಷದ ಮುಖಂಡರಿಗೆ ಬೇಕಾಗಿರುವವರು ಎಂಬ ಮಾತು ಸಹ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ, ದಿವ್ಯಾ ಹಾಗರಗಿ ಈಗ ಆರೋಪಿಯ ಸ್ಥಾನದಲ್ಲಿರುವುದರಿಂದ ತಮಗೆ ಪರಿಚಯವಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.

ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆ, ಸಿಐಡಿಯಿಂದ ಆಕ್ಷೇಪಣೆ ಸಲ್ಲಿಕೆ
ಇನ್ನು ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಪಡೆದು ತನಿಖೆಗೆ ಹಾಜರಾಗುವ ಸಾಧ್ಯತೆಯಿದೆ. ಹೀಗಾಗಿಯೇ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನಿರೀಕ್ಷಣಾ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಸಿಐಡಿ ಆಕ್ಷೇಪಣೆ ಸಹ ಹಾಕಿದ್ದಾರೆ. ದಿವ್ಯಾ ಹಾಗರಗಿಯವರಿಗೆ ನಿರೀಕ್ಷಣಾ ಜಾಮೀನು ಸಿಗುತ್ತೋ ಇಲ್ಲವೋ ಅನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications