October Rain Report: ಮುಂಗಾರು ಬಳಿಕ ಹಿಂಗಾರಿನಿಂದಲೂ ಮಳೆ ಕೊರತೆ; ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ -40% ಕೊರತೆ
Karnataka October Rain Report: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಬರದ ಗಾಯ ಹಾಕಿದ ಬೆನ್ನಲ್ಲೆ ಭಾರೀ ಮಳೆಯ ನಿರೀಕ್ಷೆ ಇದ್ದ ಹಿಂಗಾರು ಮಳೆ ಸಹ ಗಾಯದ ಮೇಲೆ ಬರೆ ಎಳೆದಿದೆ. ಆರಂಭದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಹಿಂಗಾರು ನಂತರ ದುರ್ಬಲಗೊಂಡ ಪರಿಣಾಮ ಕಳೆದ ಅಕ್ಟೋಬರ್ 31 ದಿನಗಳಲ್ಲಿ ರಾಜ್ಯಕ್ಕೆ ಭಾರೀ ಮಳೆ ಕೊರತೆ ಉಂಟು ಮಾಡಿದೆ.
ರಾಜ್ಯದ 209ರ ತಾಲೂಕುಗಳ ಪೈಕಿ ಬರೋಬ್ಬರಿ 190 ತಾಲೂಕುಗಳು ಅತೀವ ಮಳೆ ಕೊರತೆಗೆ ತುತ್ತಾಗಿವೆ. ಈ ಕೊರತೆಯಲ್ಲಿ ಉತ್ತರ ಒಳನಾಡಿನಲ್ಲಿ ಅತ್ಯಧಿಕ ಮಳೆ ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಉತ್ತಮ ಹಿಂಗಾರು ಮಳೆ ನಿರೀಕ್ಷೆ ಹುಸಿ!
ಜೂನ್ 1 ರಿಂದ ಸೆಪ್ಟಂಬರ್ 30ಕ್ಕೆ ಮುಂಗಾರು ಮಳೆ ಕೊನೆಗೊಳ್ಳುತ್ತಿದ್ದಂತೆ ತೀವ್ರ ಆರ್ಭಟದೊಂದಿಗೆ ಆರಂಭವಾದ ಹಿಂಗಾರು ಮಳೆಯು ವಿವಿಧ ಭಾಗಗಳಲ್ಲಿ ಜೋರಾಗಿ ಸುರಿದಿತ್ತು. ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಬಂದ ಮಳೆಗೆ ಮತ್ತೆ ಜಲಾಶಯಗಳು ಭರ್ತಿಯಾಗಲಿವೆ. ಹಿಂಗಾರು ನಿರೀಕ್ಷೆಯಂತೆ ಆಗಿ ರೈತರು, ನಾಡಿನ ಜನರ ಕೈ ಹಿಡಿಯಲಿದೆ ಎಂದು ಅಂದಾಜಿಸಲಾಗಿತ್ತು. ಈ ನಿರೀಕ್ಷೆ ಮೊದಲ ತಿಂಗಳೇ (ಅಕ್ಟೋಬರ್) ಹುಸಿಯಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಶೇ. -40 ರಷ್ಟು ಕೊರತೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿರುವ ಪ್ರಕಾರ, ರಾಜ್ಯದಲ್ಲಿ ಒಟ್ಟು ಅಕ್ಟೋಬರ್ ತಿಂಗಳಲ್ಲಿ 131 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕು, ಆದರೆ ಆಗಿದ್ದು ಕೇವಲ 78 ಮಿಲಿ ಮೀಟರ್. ಇದರಿಂದಾಗಿ ರಾಜ್ಯಾದ್ಯಂತ ಅಕ್ಟೋಬರ್ ಹಿಂಗಾರು ಮಳೆಯಲ್ಲಿ ಬರೋಬ್ಬರಿ ಶೇ. -40 ರಷ್ಟು ಕೊರತೆ ಉಂಟಾಗಿದೆ.
ಉತ್ತರ ಒಳನಾಡಿನಲ್ಲಿ ಅತ್ಯಧಿಕ (ಶೇ.86) ಮಳೆ ಕೊರತೆ
ದಕ್ಷಿಣ ಒಳನಾಡು ಭಾಗದಲ್ಲಿ ನಿರೀಕ್ಷಿತ 138 ವಾಡಿಕೆ ಮಳೆ ಪೈಕಿ, ಬರೀ104ಮಿಲಿ ಮೀಟರ್ ಮಳೆ ಆಗುವ ಮೂಲಕ -25ರಷ್ಟು ಮಳೆ ಬಿದ್ದಿದೆ. ಮಲೆನಾಡು ಭಾಗದಲ್ಲಿ ವಾಡಿಕೆ 159 ಮಿಲಿ ಮೀಟರ್ ಪೈಕಿ ಕೇವಲ 117 ಮಿಲಿ ಮೀಟರ್ ಆಗಿದೆ. ಮೂರು ಜಿಲ್ಲೆಗಳ ಕರಾವಳಿ ಭಾಗದಲ್ಲಿ 188 ಮಿಲಿ ಮೀಟರ್ ವಾಡಿಕೆ ಮಳೆ ಆಗಬೇಕಿತ್ತು, ಆದರೆ ವಾಸ್ತವದಲ್ಲಿ 144ಮಿಲಿ ಮೀಟರ್ ಮಳೆ ಆಗಿ ಶೇ.23ರಷ್ಟು ಕೊರತೆ ಸೃಷ್ಟಿಸಿದೆ. ಇನ್ನೂ ಉತ್ತರ ಕರ್ನಾಟಕ (ಉತ್ತರ ಒಳನಾಡು) ಭಾಗದಲ್ಲಿ ಅತ್ಯಧಿಕ ಶೇ. 86 ರಷ್ಟು ಮಳೆ ಕೊರತೆ ಆಗಿದೆ. ಇಲ್ಲಿ ವಾಡಿಕೆ 107 ಮಿಲಿ ಮೀಟರ್ ಬರುವ ಬದಲಾಗಿ ಕೇವಲ 15 ಮಿಲಿ ಮೀಟರ್ ಮಳೆ ಆಗಿದೆ. ಇದು ಹಿಂಗಾರು ಬಿತ್ತನೆ ಮಾಡಿದ್ದು, ಬಿತ್ತನೆಗೆ ಸಜ್ಜಾಗಿರುವ ರೈತರಲ್ಲಿ ಆತಂಕ ಹೆಚ್ಚಿಸಿದೆ.
ಅರ್ನಾಬ್ ಚಂಡಮಾರುತದ ಮೇಲೆ ನಿರೀಕ್ಷೆ
ಹೌದು, ಇತ್ತೀಚೆಗೆ ಬಂಗಾಳಕೊಲ್ಲಿಯ ಆಗ್ನೆಯ ಭಾಗದಲ್ಲಿ ಸೃಷ್ಟಿಯಾಗಿದ್ದ ಅರ್ನಾಬ್ ಚಂಡಮಾರುತದ ಮೇಲೆ ಒಂದಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ವಾತಾವರಣದಲ್ಲಿ ತೀವ್ರಸ್ವರೂಪದಲ್ಲಿ ಬದಲಾವಣೆ ಆಗಿದ್ದು, ಇದು ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕಿಗೆ ಕಾರಣವಾಗಲಿದೆ ಎಂದು ನಂಬಲಾಗಿತ್ತು. ಆದರೆ ಈ ಚಂಡಮಾರುತದ ಬಿರುಗಾಳಿಯು ಆಂಧ್ರಪ್ರದೇಶದತ್ತ ಬೀಸಿತು. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣಹವೆ ಮುಂದುವರಿದಿದೆ.
ಮುಂದಿನ ಒಂದೆರಡು ದಿನಗಳಲ್ಲಿ ಕರಾವಳಿ, ಮಲೆನಾಡು ಹಾಗೂ ಒಂದೆರಡು ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ, ಕೆಲವೆಡೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Click it and Unblock the Notifications
