ಕರ್ನಾಟಕದ ಆಹಾರ ಸಚಿವ ಕೆ. ಗೋಪಾಲಯ್ಯರಿಗೆ ಕೊವಿಡ್-19
ಬೆಂಗಳೂರು, ಸಪ್ಟೆಂಬರ್.15: ಕರ್ನಾಟಕದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
"ನನಗೆ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಇಂದು ಮಧ್ಯಾಹ್ನ 4 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ." ಎಂದು ಸ್ವತಃ ಸಚಿವ ಕೆ.ಗೋಪಾಲಯ್ಯನವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ" ಎಂದು ಸಚಿವ ಕೆ.ಗೋಪಾಲಯ್ಯನವರು ವಿನಂತಿಸಿಕೊಂಡಿದ್ದಾರೆ.

ಸೋಮವಾರ ಬೈರತಿ ಬಸವರಾಜ್ ರಿಗೆ ಕೊವಿಡ್-19:
ಕರ್ನಾಟಕದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿರುವ ಕೊಲಿಂಬಿಯಾ ಏಷಿಯಾ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ನಾಲ್ಕು ದಿನಗಳಿಂದ ಸಚಿವ ಬೈರತಿ ಬಸವರಾಜ್ ಅವರು ರಾಯಚೂರು ಪ್ರವಾಸ ಮಾಡಿದ್ದರು. ಸೋಮವಾರ ಬೆಳಗ್ಗೆ ಅವರಿಗೆ ಮೈಕೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾಗಿದ್ದರು. ಕೊವಿಡ್-19 ಸೋಂಕು ತಪಾಸಣೆ ವೇಳೆಯಲ್ಲಿ ಸಚಿವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.












Click it and Unblock the Notifications