ಅಬಕಾರಿ ಕಚೇರಿಗಳಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿದ್ದು ಕೇಳಿದ್ರೆ ಶಾಕ್ ಆಗ್ತೀರ
ಬೆಂಗಳೂರಿನ ವಿವಿಧೆಡೆ ಇರುವ ಅಬಕಾರಿ ಕಚೇರಿಗಳ ಮೇಲೆ ನಿನ್ನೆ ಲೋಕಾಯುಕ್ತ ದಾಳಿ ನಡೆದಿದೆ. ಅಬಕಾರಿ ಕಚೇರಿಗಳಲ್ಲಿ ದಾಳಿ ವೇಳೆ ಸಿಕ್ಕಿರುವ ವಸ್ತುಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ದಂಗಾಗಿದ್ದಾರೆ. ಹಲವು ಕಚೇರಿಗಳಲ್ಲಿ ಗಾಂಜಾ ಹಾಗೂ ದಾಖಲೆ ಇಲ್ಲದೆ ಮದ್ಯ ಪತ್ತೆಯಾಗಿದೆ.
ಕೆಲವು ಅಧಿಕಾರಿಗಳ ರೂಂಗಳಲ್ಲೇ ಡ್ರಾಯರ್‌ಗಳಲ್ಲಿ ಗಾಂಜಾ ತುಂಬಿಸಿದ್ದ ಸಿಗರೇಟ್‌ಗಳು ಕೂಡ ಸಿಕ್ಕಿವೆ ಎಂದು ವರದಿಯಾಗಿದೆ. ಅಬಕಾರಿ ಕಚೇರಿಗಳಲ್ಲಿನ ಅವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ಕಿರುಕುಳ ಸಂಬಂಧ ಲೋಕಾಯುಕ್ತಕ್ಕೆ ನೂರಾರು ದೂರುಗಳು ಬಂದಿದ್ದವು. ಹಾಗಾಗಿ ಸ್ವಯಂ ದೂರು ದಾಖಲಿಸಿಕೊಂಡು ನಿನ್ನೆ ಏಕಕಾಲದಲ್ಲಿ 62 ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಯಶವಂತಪುರ ಮತ್ತು ಬ್ಯಾಟರಾಯನಪುರ ಭಾಗದ ಅಬಕಾರಿ ಕಚೇರಿಗಳಲ್ಲಿ ದಾಳಿ ನಡೆದಿದೆ. ಈ ವೇಳೆ ಇಲ್ಲಿನ ಕಚೇರಿಗಳಲ್ಲಿ ಅಧಿಕಾರಿಗಳ ರೂಮುಗಳಲ್ಲೇ ದಾಖಲೆ ಇಲ್ಲದ ಎಣ್ಣೆ ಬಾಟಲಿಗಳು, ಕೆ.ಜಿಗಟ್ಟಲೆ ಗಾಂಜಾ, ಡ್ರಾಯರ್‌ಗಳಲ್ಲಿ ಗಾಂಜಾ ತುಂಬಿಸಿದ್ದ ಸಿಗರೇಟ್‌ಗಳನ್ನು ಕಂಡು ಶಾಕ್ ಆಗಿದ್ದಾರೆ.
ಅಬಕಾರಿ ಅಧಿಕಾರಿಗಳು ಕಚೇರಿಯಲ್ಲೇ ಮದ್ಯ ಸೇವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ಬಾಟಲಿಗಳಲ್ಲಿ ಮದ್ಯ ಪೂರ್ಣವಾಗಿ ಖಾಲಿಯಾಗಿದ್ದು, ಇನ್ನು ಕೆಲವುದರಲ್ಲಿ ಅರ್ಧಂಬರ್ಧ ಎಣ್ಣೆ ಮಿಕ್ಕಿತ್ತು. ಹಾಗಾಗಿ ಅಧಿಕಾರಿಗಳೇ ಇದನ್ನು ಕಚೇರಿಗಳಲ್ಲಿ ಸೇವಿಸಿರುವುದಾಗಿ ಶಂಕಿಸಲಾಗಿದೆ. ಮತ್ತೊಬ್ಬ ಸಿಬ್ಬಂದಿಯ ಬ್ಯಾಗ್‌ನಲ್ಲೂ ಮದ್ಯದ ಬಾಟಲ್ ಪತ್ತೆಯಾಗಿದ್ದು, ಇದನ್ನು ತನ್ನ ಸ್ನೇಹಿತ ನೀಡಿದ್ದಾಗಿ ಹೇಳಿದ್ದಾರಂತೆ.
ಸದ್ಯ ದಾಳಿ ವೇಳೆ ಸಿಕ್ಕಿರುವ ಎಲ್ಲ ಮದ್ಯದ ಬಾಟಲ್, ಗಾಂಜಾ, ಸಿಗರೇಟ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಬಗ್ಗೆ ಸ್ಪಷ್ಟ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನೂ ಕೆಲವು ಕಚೇರಿಗಳಲ್ಲಿ ಅಧಿಕಾರಿಗಳೇ ಇರಲಿಲ್ಲ. ಫೋನ್ ಮಾಡಿದರೂ ಸಂಪರ್ಕಕ್ಕೆ ಬರಲಿಲ್ಲ. ಹಾಗಾಗಿ ಆ ಕಚೇರಿಗಳ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಬ್ಯಾಟರಾಯನಪುರ ಅಬಕಾರಿ ಕಚೇರಿಯಲ್ಲಿ 2 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಸ್ಕೂಟರ್ ಡಿಕ್ಕಿಯೊಂದರಲ್ಲಿ 1 ಲಕ್ಷ ರೂಪಾಯಿ ಕೂಡ ಸಿಕ್ಕಿದೆ. ಆದರೆ ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಅಬಕಾರಿ ಕಚೇರಿಗಳಲ್ಲೂ ದಾಖಲೆಗಳು ಲಭ್ಯವಾಗಿಲ್ಲ. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಅಲ್ಲಿ ಸಿಕ್ಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲವು ಕಚೇರಿಗಳಲ್ಲಿ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನೇ ಪ್ರದರ್ಶಿಸಿಲ್ಲ. ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಲು ಮೊಬೈಲ್ ಸಂಖ್ಯೆಯನ್ನು ಸಹ ಹಾಕಿರಲಿಲ್ಲ. ಈ ಬಗ್ಗೆ ಅಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡು ವಿವರಣೆ ಕೇಳಲಾಗಿದೆ. ನಿನ್ನೆ ಇಡೀ ದಿನ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಕಚೇರಿಗಳನ್ನು ಬೆಂಡೆತ್ತಿದ್ದಾರೆ. ಕಚೇರಿಗಳಲ್ಲಿ ಅಧಿಕಾರಿಗಳ ಅಶಿಸ್ತಿಗೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಅಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದ್ದು, ಬಳಿಕ ಅವರ ವಿರುದ್ಧ ಕ್ರಮ ಜರುಗಿಸಲಿದೆ ಎಂದು ಹೇಳಲಾಗಿದೆ.












Click it and Unblock the Notifications