Govt Schools: ಶಾಲೆಗಳಿಗೆ ಸಿಎಸ್ಆರ್ ನೆರವು ನೀಡಲು ಉದ್ಯಮಿಗಳ ಆಹ್ವಾನ! ಹೊಸ ಉಪಕ್ರಮ
ಬೆಂಗಳೂರು: ರಾಜ್ಯದಲ್ಲಿ ಭಾರೀ ಪ್ರಯಾಣದ ಕೈಗಾರಿಕಾ ಹೂಡಿಕೆ, ಹೊಸ ಕೈಗಾರಿಕೆ, ಘಟಕಗಳು ಸ್ಥಾಪನೆ ಆಗುತ್ತಿವೆ. ಸರ್ಕಾರಿ ಶಾಲೆಗಳ ಹಿತ ದೃಷ್ಟಿಯಿಂದ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ 'ನನ್ನ ಶಾಲೆ, ನನ್ನ ಜವಾಬ್ದಾರಿ' ಉಪಕ್ರಮವನ್ನು ಆರಂಭಿಸಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ 'ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಸಿಎಸ್ಆರ್ ಪಾಲುದಾರಿಕೆ' ಕುರಿತು ಬುಧವಾರ ಏರ್ಪಡಿಸಿದ್ದ ಉದ್ಯಮಿಗಳು/ಸಿಇಒಗಳ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಹೂಡಿಕೆಯೊಂದಿಗೆ ಕೈಗಾರಿಕೆಗಳು ಉಜ್ವಲ ಬೆಳವಣಿಗೆಯ ದೂರದೃಷ್ಟಿಯಿಂದ ತಮ್ಮ ಸುತ್ತಮುತ್ತ ಇರುವ ಗ್ರಾಮೀಣ ಮತ್ತು ಸರ್ಕಾರಿ ಶಾಲೆಗಳಿಗೆ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸಿಎಸ್ಆರ್ ನೆರವು ನೀಡಬೇಕು. ಇದೂ ಕೂಡ ಒಂದು ಹೂಡಿಕೆ ಎಂದೇ ತಿಳಿಯಬೇಕು. ಇದಕ್ಕಾಗಿಯೇ ನೂತನ 'ನನ್ನ ಶಾಲೆ, ನನ್ನ ಜವಾಬ್ದಾರಿ' ಉಪಕ್ರಮ ಶುರುಮಾಡಿದ್ದೇವೆ ಎಂದರು.
ಉತ್ತಮ ಶಿಕ್ಷಣಕ್ಕಾಗಿ ಉದ್ಯಮಿಗಳ ಸಹಕಾರ ಅಗತ್ಯ
ಸಭೆಯಲ್ಲಿ ನೆರೆದಿದ್ದ 150ಕ್ಕೂ ಹೆಚ್ಚು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ ಅವರು, ಸರ್ಕಾರದ ಆಸಕ್ತಿಯಿಂದಾಗಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಿಗೆ ಹೊಸ ಹೊಸ ಉದ್ಯಮಗಳು ಬರುತ್ತಿವೆ. ಈ ಮೂಲಕ ಕೈಗಾರಿಕೆ ಮತ್ತು ಶಿಕ್ಷಣ ಎರಡೂ ಜತೆಜತೆಯಾಗಿ ಬೆಳವಣಿಗೆ ಹೊಂದುತ್ತಿವೆ. ರಾಜ್ಯದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಕೊಡುವ ಜವಾಬ್ದಾರಿ ರಾಜ್ಯ ಸರ್ಕಾರ ಹೊತ್ತುಕೊಂಡಿದೆ. ಇದಕ್ಕೆ ಉದ್ಯಮಗಳ ಸಹಕಾರ ಕೂಡ ಬೇಕು ಎಂದು ಅವರು ತಿಳಿಸಿದ್ದಾರೆ.
ಶೈಕ್ಷಣಿಕ ಮೂಲಸೌಕರ್ಯಗಳು
ಶಾಲೆಯಲ್ಲಿ ಆಧುನಿಕ ಕಲಿಕಾ ಪರಿಕರಗಳು, ನೈರ್ಮಲ್ಯ, ತರಬೇತಿ ಪಡೆದ ಶಿಕ್ಷಕರು, ಡಿಜಿಟಲ್ ಕಲಿಕೆ ಎಲ್ಲವೂ ಇರುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ರಾಜ್ಯವು ತಂತ್ರಜ್ಞಾನ ಮತ್ತು ಉತ್ತಮ ಶಿಕ್ಷಣ ಎರಡರಲ್ಲೂ ಅಗ್ರಪಂಕ್ತಿಯಲ್ಲಿದೆ. ಇದರ ಫಲವಾಗಿ ರಾಜ್ಯದಲ್ಲಿ ಇಂದು 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕಾರರು ಸಕ್ರಿಯರಾಗಿದ್ದಾರೆ. ಜತೆಗೆ ಈ ವಲಯದಲ್ಲಿ 1 ಲಕ್ಷ ಪಿಎಚ್.ಡಿ. ಮಹಾಪ್ರಬಂಧಗಳು ಬಂದಿದ್ದು, ದೇಶದ ಒಟ್ಟು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ವಲಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪಾಲನ್ನು ರಾಜ್ಯವೇ ಹೊಂದಿದೆ ಎಂದು ಅವರು ವಿವರಿಸಿದರು.
ನಾಲ್ಕನೇ ಹಂತದ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಮೊದಲಿನಿಂದಲೇ ಎಐ ಮತ್ತು ಐಒಟಿ ಎರಡಕ್ಕೂ ಸಂಬಂಧಿಸಿದಂತೆ ತರಬೇತಿ ಕೊಡುತ್ತಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರವು ಸೀಮನ್ಸ್ ತರಹದ ಅಗ್ರಗಣ್ಯ ಕಂಪನಿಗಳ ಜತೆ ಸಹಭಾಗಿತ್ವ ಏರ್ಪಡಿಸಿಕೊಂಡಿದ್ದೇವೆ. ಸಿಎಸ್ಆರ್ ನಿಧಿಯ ಪರಿಣಾಮಕಾರಿ ಬಳಕೆ ಸುಗಮವಾಗಿಸಲು 'ಕರ್ನಾಟಕ ಉದ್ಯೋಗ ಮಿತ್ರ' ವಿಭಾಗವು ಶಿಕ್ಷಣ ಇಲಾಖೆಯ ಜತೆ ಕೆಲಸ ಮಾಡಲಿದೆ ಎಂದು ಪಾಟೀಲ ಭರವಸೆ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಪಾಲ್ಗೊಂಡಿದ್ದರು.


Click it and Unblock the Notifications
