ತಿರುಪತಿಯಲ್ಲಿ ಕರ್ನಾಟಕದ 2ಎಕರೆ ಭೂಮಿ ಗೋವಿಂದ!
ಬೆಂಗಳೂರು, ನ.6 : ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ತಿರುಪತಿಯಲ್ಲಿ ಮೀಸಲಿಟ್ಟಿದ್ದ ಜಾಗವನ್ನು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಒತ್ತುವರಿ ಮಾಡಿಕೊಂಡಿದೆ. ತಿರುಪತಿಗೆ ಭೇಟಿ ನೀಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸ್ವತಃ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಟಿ.ಬಿ.ಜಯಚಂದ್ರ, ರಾಜ್ಯದ ಭಕ್ತರ ಅನುಕೂಲಕ್ಕಾಗಿ ತಿರುಪತಿಯಲ್ಲಿ ಮೀಸಲಿಟ್ಟಿದ್ದ ಏಳು ಎಕರೆ ಜಾಗದಲ್ಲಿ ಎರಡು ಎಕರೆಯನ್ನು ಟಿಟಿಡಿ ದೇವಸ್ಥಾನ ಟ್ರಸ್ಟ್ ಮಂಡಳಿ ಒತ್ತುವರಿ ಮಾಡಿಕೊಂಡಿದೆ ಎಂದು ತಿಳಿಸಿದರು. ರಾಜ್ಯದ ಭಕ್ತರ ಅನುಕೂಲಕ್ಕಾಗಿ ಈ ಸ್ಥಳದಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಸಿದ್ಧತೆ ನಡೆದಿತ್ತು ಎಂದರು.

ಕೃಷ್ಣದೇವರಾಯನ ಕಾಲದಿಂದಲೂ ತಿರುಪತಿಯಲ್ಲಿ ಕರ್ನಾಟಕಕ್ಕೆ 7.05 ಎಕರೆ ಮೀಸಲಿಡಲಾಗಿದೆ. ಮೈಸೂರು ಅರಸರ ಕಾಲದಲ್ಲಿಯೂ ಈ ಜಾಗವನ್ನು ಸಂರಕ್ಷಣೆ ಮಾಡಲಾಗಿತ್ತು. ಸದ್ಯ ಟ್ರಸ್ಟ್‌ನವರು ಈ ಸ್ಥಳಕ್ಕೆ ಬೇಲಿ ಹಾಕಿಕೊಂಡಿದ್ದಾರೆ ಎಂದು ಜಯಚಂದ್ರ ಮಾಹಿತಿ ನೀಡಿದರು.
ಈ ಜಾಗ ಕರ್ನಾಟಕಕ್ಕೆ ಸೇರಿದ್ದರೂ 2008ರ ಮಾರ್ಚ್‌ನಲ್ಲಿ ಮಾಡಿಕೊಂಡಿರುವ ಹೊಸ ಒಪ್ಪಂದದಂತೆ 50 ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಈ ಕುರಿತು ಮುಜರಾಯಿ ಸಚಿವರ ಜೊತೆ ಚರ್ಚಿಸುತ್ತೇನೆ. ಒತ್ತುವರಿ ಕುರಿತು ಚರ್ಚಿಸಲು ನ.8ರಂದು ಸಭೆ ಕರೆಯಲಾಗಿದೆ ಎಂದು ಹೇಳಿದರು.
ತಿರುಪತಿ ದೇವಾಲಯದ ಬಳಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇದರ ವಿಚಾರಣೆ ನಡೆಯುತ್ತಿದೆ. ಈ ದೂರು ವಜಾಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ತಿರುಪತಿಯಲ್ಲಿ ರಾಜ್ಯದ ಜಾಗ ಒತ್ತುವರಿಯಾಗಿದೆ ಈ ಕುರಿತು ರಾಜ್ಯ ಸರ್ಕಾರ ಮೌನ ವಹಿಸುವುದಿಲ್ಲ. ಜಾಗ ಸಂರಕ್ಷಿಸಿಕೊಂಡು ಅಲ್ಲಿ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಗೃಹ ನಿರ್ಮಾಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಯಚಂದ್ರ ಹೇಳಿದರು.












Click it and Unblock the Notifications