ಬೆಂಗಳೂರು ರಸ್ತೆ ಗುಂಡಿ ವಿಚಾರ; ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ
ಬೆಂಗಳೂರು, ಜನವರಿ 25; ಬೆಂಗಳೂರು ಮಹಾನಗರದ ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲವಾದ ಬಿಬಿಎಂಪಿ ಕಾರ್ಯ ವೈಖರಿಯನ್ನು ಹೈಕೋರ್ಟ್ ಗುರುವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಚೀಫ್ ಇಂಜಿನಿಯರ್ ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತದೆ, ಆತನೇ ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಕಾರಣ ಎಂದು ಹೇಳಿದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ಇಂಜಿನಿಯರ್ ಖುದ್ದು ಹಾಜರಾಗುವಂತೆ ಬುಲಾವ್ ಹೊರಡಿಸಿದೆ.
2015ರಲ್ಲಿ ಕೋರಮಂಗಲದ ನಿವಾಸಿ ವಿಜಯ್ ಮೆನನ್ ಬೆಂಗಳೂರಿನ ರಸ್ತೆ ದುಸ್ಥಿತಿಗಳ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಬಿಬಿಎಂಪಿ ಪರ ವಕೀಲರು, ಬೆಂಗಳೂರು ನಗರದಲ್ಲಿ ಭಾರೀ ಮಳೆಯ ನಂತರ ಉಂಟಾಗಿದ್ದ ಬಹುತೇಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಗುಂಡಿ ಮುಚ್ಚು ಕಾರ್ಯ ಪ್ರಗತಿಯಲ್ಲಿದೆ ಎಂದರು.

ಆಗ ಸಿಟ್ಟಿಗೆದ್ದ ಮುಖ್ಯ ನ್ಯಾಯಮೂರ್ತಿಗಳು, "ನೀವು (ಪಾಲಿಕೆ) ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ, ಬೆಂಗಳೂರಿನಲ್ಲಿ ಪ್ರತಿಯೊಬ್ಬ ವಾಹನ ಸವಾರರಿಗೂ ತಿಳಿದಿದೆ, ರಸ್ತೆಗಳ ದುಸ್ಥಿತಿ, ನೀವು ಹೇಳುವುದನ್ನು ನಾವು ನಂಬುವುದಿಲ್ಲ. ನೀವು ಗುಂಡಿ ಮುಚ್ಚಲು ಯಾವ ವಿಧಾನ ಅನುಸರಿಸುತ್ತಿದ್ದೀರಿ? ಯಾವ ತಂತ್ರಜ್ಞಾನ ಅನುಸರಿಸುತ್ತಿದ್ದೀರಾ?" ಎಂದು ಖಾರವಾಗಿ ಪ್ರಶ್ನಿಸಿತು.
"ಪ್ರತಿ ಮಳೆಗೂ ರಸ್ತೆಗಳಲ್ಲಿ ಗುಂಡಿಗಳಾಗುತ್ತಿರುವುದೇ ತೋರಿಸುತ್ತದೆ. ಪಾಲಿಕೆ ಕಾಮಗಾರಿಯ ಗುಣಮಟ್ಟವೇನು ಎಂಬುದು? ನೀವು ರಿಪೇರಿ ಮಾಡುವ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವುದಿಲ್ಲವೇಕೇ? ನೀವು ಸುಮ್ಮನೆ ಕಾರಣ ನೀಡಿ ತಪ್ಪಿಸಿಕೊಳ್ಳಲಾಗದು" ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಸಮನ್ವಯತೆ ಇಲ್ಲ: "ಇವತ್ತು ರಸ್ತೆ ರಿಪೇರಿ ಮಾಡಲಾಗುತ್ತದೆ, ನಾಳೆ ಮತ್ತೆ ಅಗೆಯಲಾಗುತ್ತದೆ ಏಕೆ ಹೀಗೆ?. ಪಾಲಿಕೆ ಮತ್ತು ಇತರೆ ನಗರಾಡಾಳಿತ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲವೇ?. ಪಾಲಿಕೆ ಅನುಮತಿ ಇಲ್ಲದೆ ರಸ್ತೆ ಅಗೆಯುವ ಸಂಸ್ಥೆಗಳ ವಿರುದ್ಧ ಏನು ಕ್ರಮ ಕೈಗೊಂಡಿದೆ?" ಎಂದು ಪ್ರಶ್ನಿಸಿತು.
ಪಾಲಿಕೆಯ ಪ್ರಮಾಣಪತ್ರಕ್ಕೆ ಅತೃಪ್ತಿ ವ್ಯಕ್ತಪಡಿಸಿ ಅದನ್ನು ತಿರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿ ಹೊಸದಾಗಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಮತ್ತು ಮುಂದಿನ ವಿಚಾರಣೆ ವೇಳೆ ಮುಖ್ಯ ಇಂಜಿನಿಯರ್ ಖುದ್ದು ಹಾಜರಾಗಬೇಕು ಎಂದು ಆದೇಶ ನೀಡಿತು.
"ಎಲ್ಲ ಇಂಜಿನಿಯರ್‌ಗಳ ವಿರುದ್ಧ ಎಫ್ಐಅರ್ ಹಾಕಿ ಅವರನ್ನು ಜೈಲಿಗೆ ಕಳಿಸಿದರೆ ಎಲ್ಲ ಸರಿ ಹೋಗುತ್ತದೆ. ಆಗ ಅವರಿಗೆ ಬುದ್ಧಿ ಬರುತ್ತದೆ. ಏನು ಮಾಡುತ್ತಿದ್ದಾರೆ ನಿಮ್ಮೆ ಇಂಜಿನಿಯರ್‌ಗಳು, ಅವರೆಲ್ಲಾ ಇದಕ್ಕೆಲ್ಲಾ ಕಾರಣ, ರಸ್ತೆ ದುರಸ್ಥಿ ಕೆಲಸ ಬೇರೆ ಸಂಸ್ಥೆಗೆ ವಹಿಸಿದರೆ ಸರಿ ಹೋಗಬಹುದು" ಎಂದು ನ್ಯಾಯಪೀಠ ಹೇಳಿತು.
ಪಾಲಿಕೆ ಪರ ವಕೀಲರು, ಮೊದಲಿಗಿಂತ ಬೆಂಗಳೂರು ನಗರ ಬೆಳೆದಿದೆ, ವಾಹನ ದಟ್ಟಣೆ ಹೆಚ್ಚಿದೆ. ಪ್ರಮುಖ ರಸ್ತೆಗಳಲ್ಲಿ ಸಮಸ್ಯೆ ಇಲ್ಲ, ಸಣ್ಣ ರಸ್ತೆಗಳಲ್ಲಿ ಮಾತ್ರ ಗುಂಡಿಗಳಿವೆ. ಆದರೂ ಪಾಲಿಕೆ ಶಕ್ತಿ ಮೀರಿ ಗುಂಡಿಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಅರ್ಜಿದಾರರ ವಕೀಲರು, 2015ರಿಂದಲೂ ಪಾಲಿಕೆ ಹಲವು ನಿರ್ದೇಶನ ನೀಡಿದರೂ ಪರಿಸ್ಥಿತಿ ಬದಲಾಗಿಲ್ಲ, ಪ್ರತಿ ಮಳೆ ಬಂದಾಗಲೂ ರಸ್ತೆ ದುಸ್ಥಿತಿಗೆ ದೂಡಲ್ಪಡುತ್ತದೆ. ಪಾಲಿಕೆ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ದೂರಿದರು.











Click it and Unblock the Notifications