ರೈತರ ಕುರಿತು ಟ್ವೀಟ್ ವಿವಾದ: ಕಂಗನಾ ವಿರುದ್ಧ ಎಫ್‌ಐಆರ್ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಮಾರ್ಚ್ 25: ರೈತರ ಪ್ರತಿಭಟನೆ ಕುರಿತು ಅವಹೇಳನಾಕಾರಿ ಟ್ವೀಟ್ ಮಾಡಿದ ಆರೋಪದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಪೊಲೀಸರಿಗೆ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಮ್ಯಾಜಿಸ್ಟ್ರೇಟ್ ಯಾಂತ್ರಿಕವಾಗಿ ಇಲ್ಲಿ ತೀರ್ಪು ನೀಡಿದ್ದಾರೆ. ಅಪರಾಧ ಎಸಗಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸದೆಯೇ ಆದೇಶ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರ ಏಕ ಸದಸ್ಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ರೈತರ ವಿರುದ್ಧ ಟ್ವೀಟ್: ಕಂಗನಾ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ
ಹಾಗೆಯೇ ಹೊಸದಾಗಿ ಪರಿಗಣಿಸುವಂತೆ ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಲಾಗಿದೆ.
ಪ್ರತಿಭಟನಾನಿರತ ರೈತರನ್ನು ಉಗ್ರರಿಗೆ ಹೋಲಿಸುವ ಮೂಲಕ ಕಂಗನಾ ಅವರು ಗುಂಪುಗಳ ನಡುವೆ ವೈರತ್ವ ಬಿತ್ತುತ್ತಿದ್ದಾರೆ ಎಂದು ವಕೀಲ ರಮೇಶ್ ನಾಯ್ಕ್ ಅವರು ತುಮಕೂರಿನಲ್ಲಿ ದೂರು ಸಲ್ಲಿಸಿದ್ದರು. ಐಪಿಸಿಯ ಸೆಕ್ಷನ್ 153ಎ, 504, 108ರ ಅಡಿಯಲ್ಲಿ ಅವರ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದರು.
ವಿಚಾರಣೆ ವೇಳೆ ನ್ಯಾ. ಸಂದೇಶ್ ಅವರು ಕಂಗನಾ ವಿರುದ್ಧವೂ ಕಿಡಿಕಾರಿದರು. 'ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯನ್ನು ಬೆಂಬಲಿಸುವವರನ್ನು ಭಯೋತ್ಪಾದಕರು ಎನ್ನುವ ಅಧಿಕಾರವನ್ನು ನಿಮಗೆ ಯಾರು ನೀಡಿದ್ದಾರೆ? ಇದೇ ರೀತಿಯ ಮಾತನ್ನು ನಿಮ್ಮ ವಿರುದ್ಧ ಆಡಿದರೆ ಏನು ಮಾಡುತ್ತೀರಿ? ಸೆಲೆಬ್ರಿಟಿಗಳು ಹೇಳಿಕೆ ನೀಡುವಾಗ ಮೊದಲು ನಾಲಿಗೆ ಬಿಗಿಹಿಡಿದುಕೊಳ್ಳಬೇಕು' ಎಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಅವರಿಗೆ ಮೌಖಿಕವಾಗಿ ಹೇಳಿದರು.
ಕ್ಯಾತ್ಸಂದ್ರ ಪೊಲೀಸರಿಂದ ಎಫ್‌ಐಆರ್; ರದ್ದುಗೊಳಿಸಲು ಕಂಗನಾ ಮನವಿ
ಇನ್ನೊಂದೆಡೆ, ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ಸಲ್ಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ನಟಿಗೆ ಜಾಮೀನು ದೊರಕಿದೆ.