ಬೆಂಗಳೂರು ಮಂತ್ರಿ ಮಾಲ್ ಒತ್ತುವರಿ; ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 11: ಸರಕಾರಿ ಜಮೀನು ಒತ್ತುವರಿ ಆರೋಪ ಎದುರಿಸುತ್ತಿರುವ ನಗರದ ಮಲ್ಲೇಶ್ವರದ ಮಂತ್ರಿ ಮಾಲ್‌ಗೆ ಹೈಕೋರ್ಟ್ ತಾತ್ಕಾಲಿಕ ನೆಮ್ಮದಿ ನೀಡಿದೆ.
ಒತ್ತುವರಿ ಆರೋಪ ಕೇಳಿ ಬಂದಿರುವ ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಚಯದ ಭಾಗವನ್ನು ನೆಲಸಮಗೊಳಿಸಬಾರದು ಎಂದು ಹೈಕೋರ್ಟ್ ಮಧ್ಯಂತರ ಮಂಗಳವಾರ ನಿರ್ದೇಶನ ನೀಡಿದೆ. ಆದರೆ, ಮಂತ್ರಿ ಮಾಲ್‌ನ ವಿವಾದಿತ ಜಾಗದಲ್ಲಿ ಬಿಬಿಎಂಪಿ ಸರ್ವೆ ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
'ಮಂತ್ರಿ ಶಾಪಿಂಗ್ ಮಾಲ್‌ನ್ನು (ಮಂತ್ರಿ ಸ್ಕ್ವೇರ್) ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದು, ಅದನ್ನು ಸರ್ಕಾರ ವಶಕ್ಕೆ ಪಡೆಯಬೇಕು' ಎಂದು ಬೆಂಗಳೂರು ವಿಭಾಗದ 'ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯ' ಕಳೆದ ಜನವರಿ 7 ರಂದು ಆದೇಶ ಮಾಡಿತ್ತು.

ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ
ಹಮರಾ ಶೆಲ್ಟರ್ರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಭಿಷೇಕ ಪ್ರಾಪ್ ಬಿಲ್ಡ್ ಪ್ರೈವೇಡ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ವೆ ನಡೆಸಲು ಅವಕಾಶ ಇದೆ. ಆದರೆ, ಅದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ
ಬೆಂಗಳೂರು ಪ್ರಾದೇಶಿಕ ಆಯುಕ್ತರು, ಬಿಬಿಎಂಪಿ ಆಯುಕ್ತರು, ಪೂರ್ವ ಹಾಗೂ ಪಶ್ಚಿಮ ವಲಯದ ಜಂಟಿ ನಿರ್ದೇಶಕರು, ಭೂ ಸ್ವಾಧೀನ ಮತ್ತು ಟಿಡಿಆರ್ ವಿಭಾಗದ ಉಪ ಆಯುಕ್ತರು, ಗಾಂಧಿನಗರ ವಿಭಾಗದ ಕಂದಾಯ ನಿರೀಕ್ಷಕರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

4 ಎಕರೆ 29 ಗುಂಟೆ ಜಾಗ
ಸಂಪಿಗೆ ರಸ್ತೆಯಲ್ಲಿ ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಚಯ ಇರುವ ಜಾಗದಲ್ಲಿ 4 ಎಕರೆ 29 ಗುಂಟೆ ಜಾಗ ಬಿಬಿಎಂಪಿಗೆ ಸೇರಿದ್ದು, ಅದನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಲಾಗಿದೆ. ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಿ ಎಂದು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶಿಸಿದ್ದರು. ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಎನ್ ಆರ್ ರಮೇಶ್ ದೂರು ಕೊಟ್ಟಿದ್ದರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ಜಾಗದಲ್ಲಿ ನಿಯಮಬಾಹಿರವಾಗಿ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಮಳಿಗೆಗಳನ್ನು ತೆರೆದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಹಾಗೂ ಇತರರು ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಭಾರಿ ಬೆಲೆಬಾಳುವ ಮಾಲ್
ಬೆಂಗಳೂರಿನ ಪ್ರತಿಷ್ಠಿತ ಮಾಲ್ ಹಾಗೂ ಜನನಿಬಿಡ ಮಾಲ್ ಎಂದು ಪರಿಗಣಿತವಾಗಿರುವ ಈ ಮಾಲ್ ಬೆಂಗಳೂರಿನ ಹೃದಯ ಭಾಗವಾದ ಮಲ್ಲೇಶ್ವರದಲ್ಲಿದೆ.
4.29 ಎಕರೆ ಪ್ರದೇಶದಲ್ಲಿ ಸುಮಾರು 400 ಕೋಟಿ ರುಪಾಯಿ ಬೆಲೆ ಬಾಳುವ ಮಂತ್ರಿ ಶಾಪಿಂಗ್ ಮಾಲ್ ನಿರ್ಮಿಸಲಾಗಿದೆ.












Click it and Unblock the Notifications