ದೇವಾಲಯಕ್ಕೆ ದಲಿತ ಕುಟುಂಬ ಪ್ರವೇಶಕ್ಕೆ ಅಡ್ಡಿ: ಆರೋಪಿಗಳ ವಿರುದ್ಧದ ಕೇಸ್ ರದ್ದಿಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು, ನವೆಂಬರ್ 25: ಇಡೀ ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದುವರಿದಿದೆ, ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಯುಗದಲ್ಲಿಯೂ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಕುರಿತು ಹೈಕೋರ್ಟ್ ಶಾಕ್ ವ್ಯಕ್ತಪಡಿಸಿದೆ. ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿರುವ ದೇವಾಲಯಕ್ಕೆ ದಲಿತ ಕುಟುಂಬ ಪ್ರವೇಶಕ್ಕೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಎಂಟು ಮಂದಿಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ದಾವಣಗೆರೆಯ ಪಾಂಡುರಂಗ ಭಟ್ ಸೇರಿದಂತೆ ಇತರೆ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರಕರಣ ನಡೆದು ಸುಮಾರು 8 ವರ್ಷಗಳೇ ಕಳೆದಿವೆ. ಆದ್ದರಿಂದ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಹೈಕೋರ್ಟ್ ನೀಡಿರುವ ಆದೇಶವೇನು..?
ದೇವಾಲಯವೆಂದರೆ ಏಕತೆ ಮತ್ತು ಎಲ್ಲರೂ ಒಳ್ಳಗೊಳ್ಳುವಿಕೆಯ ಸಂಕೇತವಾಗಿದೆ. ಅಲ್ಲದೆ, ಅಸ್ಪೃಶ್ಯತೆ ಆಚರಣೆ ಸಂವಿಧಾನ ಬಾಹಿರ, ಗ್ರಾಮೀಣ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೇವಾಲಯ ಪ್ರವೇಶ ಮತ್ತು ಪೂಜೆಗೆ ನಿರಾಕರಿಸಿ ಅಡ್ಡಿ ಪಡಿಸುವ ಪ್ರಕ್ರಿಯೆ ಮುಂದುವರೆದಿರುವುದು ದುರುದೃಷ್ಟಕರ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದಲ್ಲಿ ದೂರುದಾರರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದ ಅರ್ಜಿದಾರರು ದೇವಾಲಯಕ್ಕೆ ಪ್ರವೇಶಕ್ಕೆ ನಿರಾಕರಿಸಿರುವ ವರ್ತನೆ ಪ್ರತಿಗಾಮಿ ನಡೆಯಾಗಿದೆ. ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಈ ರೀತಿಯ ತಾರತಮ್ಯ ತಕ್ಷಣ ನಿಲ್ಲುವಂತಾಗಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ದೂರುದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ನ್ಯಾಯಪೀಠ, ದೇವಾಲಯದ ಹೊರಭಾಗವೂ ಸಾರ್ವಜನಿಕ ಸ್ಥಳವಾಗಿದೆ ಎಂದು ಹೇಳಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿನಾಯಕ ನಗರ ಕ್ಯಾಂಪ್‌ನ ಸಾವಿತ್ರಮ್ಮ ಅವರ ಕುಟುಂಬ 2016ರ ಸೆ.17ರಂದು ಗಡಿಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರರು ದೂರುದಾರರ ಜಾತಿ ಹೆಸರನ್ನು ಉಲ್ಲೇಖಿಸಿ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದಾಗ ಹಲ್ಲೆ ನಡೆಸಿದ್ದರು. ಈ ಸಂಬಂಧ ಸಾವಿತ್ರಮ್ಮ ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಪ್ರಕರಣ ರದ್ದು ಕೋರಿ ವಿನಾಯಕ ಕ್ಯಾಂಪ್ ಬಳಿಕ ಸ್ವರೂಪ್ ಆಶ್ರಮದ ಪಾಂಡುರಂಗ ಭಟ್, ಕುಮಾರಿ ಉಶಾ, ಕುಮಾರಿ ಶಾರದಾ, ವಿಲಾಸ್ ಲಾಡವ, ವೆಂಕಟನಾರಾಯಣಾ, ಚಿದಾನಂದ, ರವಿ ಮತ್ತು ಉಮಾ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ 2022ರಲ್ಲಿ ವಜಾಗೊಳಿಸಿ ಆದೇಶಿಸಿತ್ತು.
ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು ದೂರಿನಲ್ಲಿ ತಿಳಿಸಿರುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಂಶಗಳಿಲ್ಲ. ಅಲ್ಲದೆ, ದೂರುದಾರರು ಹಾಗೂ ಅರ್ಜಿದಾರರ ನಡುವೆ ಗಲಾಟೆ ನಡೆದಿರುವುದು ದೇವಾಲಯದ ಗೊಡೆಯ ಬಳಿಯಲ್ಲಿ ಅದು ಸಾರ್ವಜನಿಕ ಸ್ಥಳವಾಗುವುದಿಲ್ಲ. ಹೀಗಾಗಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದರು.












Click it and Unblock the Notifications