ಕೆಂಪೇಗೌಡ ಲೇಔಟ್‌ನಲ್ಲಿ ಎಷ್ಟು ಮನೆ ನಿರ್ಮಾಣವಾಗಿದೆ?
ಬೆಂಗಳೂರು, ಫೆಬ್ರವರಿ 16; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 10 ಸಾವಿರ ನಿವೇಶನ ಹಂಚಿಕೆ ಮಾಡಿ 5 ವರ್ಷ ಕಳೆದಿದೆ. ಇದುವರೆಗೂ ಎಷ್ಟು ಮನೆ ನಿರ್ಮಾಣವಾಗಿದೆ?, ಬಡಾವಣೆ ಮೂಲ ಸೌಕರ್ಯಗಳು ಹೇಗಿವೆ? ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಲಾಗಿದೆ.
ರಾಜಾಜಿನಗರದ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಖಿತ ಉತ್ತರ ನೀಡಿದ್ದಾರೆ. ಬಡಾವಣೆಯಲ್ಲಿ ನಿವೇಶನದಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿ 5 ವರ್ಷ ಪೂರ್ಣಗೊಂಡಿದೆ. ಈ ವರೆಗೆ ಎಷ್ಟು ಮಾಲೀಕರು ಈ ಲೇಔಟ್‌ನಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ? ಎಂದು ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಸರ್ಕಾರ ಇದಕ್ಕೆ ಉತ್ತರ ನೀಡಿದ್ದು ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಿಂದಾಗಿ ಸಾರ್ವಜನಿಕರಿಗೆ ಹಂಚಿಕೆಯಾಗಿರುವ 9971 ನಿವೇಶನಗಳಲ್ಲಿ ಯಾವುದೇ ಮಾಲೀಕರು ಮನೆ ನಿರ್ಮಾಣ ಮಾಡಿರುವುದಿಲ್ಲ ಎಂದು ಹೇಳಿದೆ.
ಬಡಾವಣೆಯಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯ ಪ್ರಸ್ತುತ ಹಂತವೇನು? ಎಂದು ಸಹ ಪ್ರಶ್ನೆ ಮಾಡಲಾಗಿದೆ. ಸರ್ಕಾರ ಇದಕ್ಕೆ ಸಹ ಉತ್ತರವನ್ನು ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಶುದ್ದೀಕರಿಸಿದ ನೀರು ಸರಬರಾಜು, ಯುಟಿಲಿಟಿ ಡಕ್ಟ್ ನಿರ್ಮಾಣ ಹಾಗೂ ವಿದ್ಯುತ್ ಕಾಮಗಾರಿಗೆ ಟೆಂಡರ್ ಕರೆದು ಎಲ್ & ಟಿ ಕನ್‌ಸ್ಟ್ರಕ್ಷನ್ ಹಾಗೂ SPMLIL ಅಮೃತ್ ಕನ್‌ಸ್ಟ್ರಕ್ಷನ್ ಪ್ರೈ ಲಿ. ಅವರಿಗೆ ಕಾರ್ಯದೇಶ ನೀಡಲಾಗಿದೆ.
ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಸ್ಥಳದ ಅವಶ್ಯಕತೆಗಳಿಗೆ ಅನುಗುಣವಾಗಿ ಹಾಗೂ ಹೆಚ್ಚುವರಿ ಪರಿಮಾಣ ಹಾಗೂ ಹೆಚ್ಚುವರಿ ಅಂಶಗಳು ಉದ್ಭವಿಸಿರುವ ಪ್ರಯುಕ್ತ ಕಾಮಗಾರಿಗಳಿಗೆ ವೆರಿಯೇಷನ್ ಪ್ರಪೋಸಲ್‌ಗಳನ್ನು ತಯಾರಿಸಲಾಗಿದ್ದು, ವಿಷಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ಮಂಡಿಸಲಾಗಿರುತ್ತದೆ.
13/10/2021 ರಂದು ನಡೆದ ಸಭೆಯಲ್ಲಿ ಕಾಮಗಾರಿಗಳ ವೆರಿಯೇಷನ್ ಪ್ರಪೋಸಲ್‌ಗಳನ್ನು ಥರ್ಡ್ ಪಾರ್ಟಿ ಸಂಸ್ಥೆಗಳಿಂದ ಪರಿಶೀಲಿಸಿ ವರದಿ ಪಡೆದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ನಿರ್ಣಯ ಮಾಡಲಾಗಿದೆ.
ಪ್ರಸ್ತಾವನೆಗಳನ್ನು ಪರಿಶೀಲಿಸಿ ವರದಿಯನ್ನು ನೀಡಲು 4/2/2022ರ ಪ್ರಾಧಿಕಾರದ ಪತ್ರದಲ್ಲಿ M/S Bureau Veritas ಅವರನ್ನು ಕೋರಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಲೇಔಟ್ ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಂದಗತಿಯ ಪ್ರವೃತ್ತಿಯಿಂದಾಗಿ ನಿವೇಶನಗಳ ಮಾಲೀಕರು ತಮ್ಮ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಹಾಗೂ ಪ್ರಸ್ತುತ ವಾಸವಿರುವ ಮನೆಗಳ ಬಾಡಿಗೆ ಎರಡನ್ನೂ ಪಾವತಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದಯೇ? ಎಂದು ಪ್ರಶ್ನೆ ಮಾಡಲಾಗಿದ್ದು, ಹೌದು ಎಂದು ಸರ್ಕಾರ ಉತ್ತರ ನೀಡಿದೆ.
ಈ ಯೋಜನೆಗೆ ಇದುವರೆಗೂ ವೆಚ್ಚವಾಗಿರುವ ಹಣವೆಷ್ಟು?, ಮುಂದೆ ವೆಚ್ಚವಾಗಲಿರುವ ಅಂದಾಜು ವೆಚ್ಚ ಎಷ್ಟು ಎಂದು ಸಹ ಪ್ರಶ್ನಿಸಲಾಗಿದೆ. ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ? ಎಂದು ಕೇಳಲಾಗಿದೆ.
ಬಡಾವಣೆ ಸಿವಿಲ್ ಕಾಮಗಾರಿಗಳಿಗೆ ಇದುವರೆಗೂ 714,12 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ 765,35 ಕೋಟಿಗಳ ಅವಶ್ಯಕತೆ ಇದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬಡಾವಣೆ ಮೂಲ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಶುದ್ಧೀಕರಿಸಿದ ನೀರು ಸರಬರಾಜು, ಯುಟಿಲಿಟಿ ಡಕ್ಟ್ ನಿರ್ಮಾಣ, ವಿದ್ಯುತ್ ಕಾಮಗಾರಿಗೆ ಇದುವರೆಗೂ 737.10 ಕೋಟಿ ವೆಚ್ಚವಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು 1542.91 ಕೋಟಿ ಅಗತ್ಯವಿದೆ.
ಸದರಿ ಕಾಮಗಾರಿಗಳ ಹೆಚ್ಚುವರಿ ಪರಿಮಾಣ ಮತ್ತು ಹೆಚ್ಚುವರಿ ಅಂಶಗಳ ಪ್ರಸ್ತಾವನೆಗಳಿಗೆ ಪ್ರಾಧಿಕಾರದ ಸಭೆಯ ಅನುಮೋದನೆ ದೊರೆತ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಯೋಜನೆಯನ್ನು ಡಿಸೆಂಬರ್ 22ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸರ್ಕಾರ ಹೇಳಿದೆ.












Click it and Unblock the Notifications