ಗ್ರಾಮೀಣ ವೈದ್ಯರಿಗೆ ಹೆಚ್ಚಿನ ಸಂಬಳ ನೀಡಲು ಕ್ರಮ
ಬೆಂಗಳೂರು, ಜು.2: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರನ್ನು ಆಕರ್ಷಿಸಲು ಗುತ್ತಿಗೆ ಆಧಾರದ ಮೇಲೆ ನೇಮಕವಾಗುವ ವೈದ್ಯರಿಗೆ, ಖಾಯಂ ವೈದ್ಯರಿಗೆ ನೀಡಲಾಗುವ ವೇತನ ಶ್ರೇಣಿಯ ಕನಿಷ್ಠ ವೇತನವನ್ನು ನೀಡುವಂತೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ವೈದ್ಯರುಗಳು ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುತ್ತಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರಿಲ್ಲದೇ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಮಧು ಬಂಗಾರಪ್ಪನವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರಿಗೆ ಕನಿಷ್ಠ ವೇತನ ಹಾಗೂ ಅದಕ್ಕೆ ಕಾಲಕಾಲಕ್ಕೆ ಅನ್ವಯವಾಗುವ ಭತ್ಯೆ ಹಾಗೂ ಗ್ರಾಮೀಣ ಭತ್ಯೆ ಇತ್ಯಾದಿ ಪಾವತಿಸುವ ಕುರಿತಂತೆ ಸಮಾಲೋಚಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಬೇಡಿಕೆಯಂತೆ ಗ್ರಾಮೀಣ ಪ್ರದೇಶದಲ್ಲಿ 6 ವರ್ಷ, 6 ರಿಂದ 13 ವರ್ಷ, 13 ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಗ್ರಾಮೀಣ ಭತ್ಯೆ ಮತ್ತು ತುರ್ತು ಚಿಕಿತ್ಸಾ ಭತ್ಯೆಯನ್ನು ಅನುಕ್ರಮವಾಗಿ 16 ಸಾವಿರ ರೂ., 17 ಸಾವಿರ ರೂ. ಮತ್ತು 18 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. [ವಿದ್ಯುತ್ ಸಮಸ್ಯೆ ದೇವರಿಂದಲೂ ಬಗೆಹರಿಯೋಲ್ಲ!]
ವೈದ್ಯರ ವೇತನ ಪರಿಷ್ಕರಣೆ ಕುರಿತಂತೆ ಪರಿಶೀಲಿಸಲಾಗುತ್ತಿದ್ದು, ಈ ವೈದ್ಯರ ವೇತನ ಪರಿಷ್ಕರಣೆ ಕುರಿತಂತೆ ಸದಸ್ಯರ ಸಲಹೆಗಳನ್ನು ಪ್ರಸ್ತಾವನೆಯಲ್ಲಿ ಅಳವಡಿಸಿ, ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications