ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಕರ್ನಾಟಕದ ಮೊದಲ ತೃತೀಯಲಿಂಗಿ
ಬೆಂಗಳೂರು, ಜನವರಿ 10: ಮಕರ ಸಂಕ್ರಮಣ ದಿನ ಹತ್ತಿರವಾಗುತ್ತಿದ್ದಂತೆ ಶಬರಿ ಮಲೆಗೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಅವ್ಯವಸ್ಥೆಯ ಆಗರವಾಗಿ ಸುದ್ದಿಯಾಗುತ್ತಿದ್ದ ಶಬರಿಮಲೆ ಇದೀಗ ವಿಶೇಷ ವಿಚಾರದಿಂದ ಸುದ್ದಿಯಲ್ಲಿದೆ.
2019ರಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ವೇಳೆ ಭಾರೀ ಗಲಾಟೆ ನಡೆದಿತ್ತು. ಹೀಗಾಗಿ ಈ ಬಾರಿಯೂ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿಷೇಧ ಸಂಪ್ರದಾಯ ಮುಂದುವರಿದಿದೆ. ಆದರೆ ಈ ಬಾರಿ ವಿಶೇಷವಾದ ಘಳಿಗೆಗೆ ಶಬರಿಮಲೆ ಸಾಕ್ಷಿಯಾಗುತ್ತದೆ. ಈ ಬಾರಿ ಕೇರಳದ ಇತಿಹಾಸದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯರು ದೇವಾಲಯಕ್ಕೆ ಪ್ರವೇಶಿಸಿದ್ದಾರೆ.

ಕರ್ನಾಟಕ ಮೂಲದ ತೃತೀಯಲಿಂಗಿ ರಿಯಾನಾ ರಾಜು ಸತತ ಎಂಟು ಪ್ರಯತ್ನಗಳ ನಂತರ ಈ ಬಾರಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಹಲವು ವರ್ಷಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ ರಿಯಾನಾ ರಾಜು ಶಬರಿಮಲೆ ದೇಗುಲಕ್ಕೆ ಹೋಗುವ ಕನಸು ಕಂಡಿದ್ದರು. ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸುತ್ತಲೇ ಇದ್ದರು. ಈ ವರ್ಷ ಕೊನೆಗೂ ದೇವಾಲಯಕ್ಕೆ ಪ್ರವೇಶಿಸುವ ತನ್ನ ಕನಸನ್ನು ನನಸಾಗಿಸುವ ಮೂಲಕ ರಿಯಾನಾ ತೃತೀಯಲಿಂಗಿ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಈ ಬಗ್ಗೆ ರಿಯಾನಾ ರಾಜು ಮಾತನಾಡಿದ್ದು, ನಾನು ಕೂಡ ಪೈಜಾಮ ಮತ್ತು ಧೋತಿಗಳನ್ನು ಧರಿಸಿ ಪುರುಷರಂತೆ ಶಬರಿಮಲೆಗೆ ತೆರಳಬಹುದಿತ್ತು. ಆದರೆ ನಾನು ಮಹಿಳೆ ಎಂದು ಗುರುತಿಸಿಕೊಂಡಿದ್ದೇನೆ. ಮಹಿಳಾ ಮತ್ತು ಮಕ್ಕಳ ಇಲಾಖೆ, ಉಪಮುಖ್ಯಮಂತ್ರಿ ಕಚೇರಿಯಿಂದ ಪತ್ರಗಳು ಮತ್ತು ತೃತೀಯ ಲಿಂಗಿಗಳ ಹಕ್ಕುಗಳನ್ನು ಗುರುತಿಸುವ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸುಗಳಂತಹ ಪೂರಕ ದಾಖಲೆಗಳನ್ನು ಅಫಿಡವಿಟ್‌ನಲ್ಲಿ ಸಲ್ಲಿಸಿದ್ದೇನೆ ಎಂದರು.
ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ರಿಯಾನಾ ಮಹಿಳೆಯರಂತೆ ಬಟ್ಟೆ ಧರಿಸಿರುವುದನ್ನು ಕಂಡು ಕೆಲವು ಭಕ್ತರು ಮತ್ತು ಪುರೋಹಿತರು ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ರಿಯಾನಾ ತಾನು ತೃತೀಯ ಲಿಂಗಿ, ಋತುಚಕ್ರವಾಗುವುದಿಲ್ಲ ಹೀಗಾಗಿ ತಾನು ದರ್ಶನ ಪಡೆಯಬಹುದು ಎನ್ನುವ ಬಗ್ಗೆ ವಿವರಿಸಿದ್ದಾರೆ.
ಈ ಅನುಭವವು ತೃತೀಯ ಲಿಂಗಿ ಮಹಿಳೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಬಹುದು ಎನ್ನುವುದನ್ನು ಸಾಬೀತು ಪಡಿಸಲು ಸಹಾಯ ಮಾಡಿತು ಎಂದು ರಿಯಾನಾ ರಾಜು ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಅಯ್ಯಪ್ಪನ ದರ್ಶನ ಪಡೆಯಲು ಸಹಾಯ ಮಾಡಿದ ಕೇರಳ ಪೊಲೀಸರು ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.
ಮಾತು ಮುಂದುವರಿದಿದ ರಿಯಾನಾ ರಾಜು " ನಾನು ಶಬರಿ ಮಲೆ ಯಾತ್ರೆ ಕೈಗೊಳ್ಳುತ್ತೇನೆ ಎಂದು ತಿಳಿದಾಗ ನನ್ನ ಪೋಷಕರು ನನ್ನ ಸುರಕ್ಷತೆಯ ಬಗ್ಗೆ ಭಯಪಟ್ಟಿದ್ದರು. ನಾನು ಜನವರಿ 4 ರಂದು ಶಬರಿಮಲೆ ಯಾತ್ರೆ ಆರಂಭಿಸಿದೆ. ಜನವರಿ 5 ರಂದು ಸಂಜೆ ದರ್ಶನ ಪಡೆದು ಪೋಷಕರಿಗೆ ಕರೆ ಮಾಡಿ ತಿಳಿಸಿದೆ. ಐವರು ನನ್ನ ಜೊತೆಗಿದ್ದರು ಆದರೆ ಅವರು ಪುರುಷರಂತೆ ಉಡುಪು ಧರಿಸಿದ್ದರು. ಆದರೆ ನಾನು ಸೀರೆಯಲ್ಲೇ ಒಬ್ಬ ತೃತೀಯ ಲಿಂಗಿಯಾಗಿ ನನ್ನ ಕನಸಿನ ಪವಿತ್ರ ಶಬರಿಮಲೆ ಯಾತ್ರೆ ಪೂರ್ಣಗೊಳಿಸಿದೆ.ಈ ಬಗ್ಗೆ ನನಗೆ ಹೆಮ್ಮೆ ಇದೆ' ಎಂದಿದ್ದಾರೆ.












Click it and Unblock the Notifications