'ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ವಿಸ್ತರಣೆ: 14 ಅಸಾಂಕ್ರಾಮಿಕ ರೋಗಗಳ ತಪಾಸಣೆ'
ಬೆಂಗಳೂರು, ಜೂನ್ 02: ಗೃಹ ಆರೋಗ್ಯ ಯೋಜನೆ ರಾಜ್ಯದಾದ್ಯಂತ ವಿಸ್ತರಣೆಯಾಗುತ್ತಿದ್ದು, ಯೋಜನೆಯಡಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ. ಖಾಸಗಿ ಆರೋಗ್ಯ ವಯಲದಲ್ಲಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಅಸಾಂಕ್ರಾಮಿಕ ರೋಗಗಳನ್ನು ಮುಂಚಿತವಾಗಿಯೇ ತಡೆಗಟ್ಟುವುದು ಮುಖ್ಯ. ಈ ಕಾರ್ಯವನ್ನ ಸರ್ಕಾರವೇ ಮಾಡಬೇಕು ಹೊರತಾಗಿ ಬೇರೆ ಯಾರು ಆಸಕ್ತಿ ತೋರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ವಿಕಾಸ ಸೌಧದಲ್ಲಿ ಸೋಮವಾರ ಗೃಹ ಆರೋಗ್ಯ ಯೋಜನೆ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಜವಾಬ್ದಾರಿಯುತ ಸರ್ಕಾರವಾಗಿ ಆರೋಗ್ಯ ಇಲಾಖೆಯಿಂದ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವತ್ತ ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಎಲ್ಲ ಮನೆಗಳಲ್ಲಿ 30 ವರ್ಷ ಮೇಲ್ಪಟ್ಟವರನ್ನು ತಪಾಸಣೆಗೆ ಒಳಪಡಿಸಿ, ಸೂಕ್ತ ಔಷಧಗಳನ್ನು ಅವರ ಬಳಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಗೃಹ ಆರೋಗ್ಯ ಯೋಜನೆಯನ್ನು ಮೊದಲು ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಾರಂಭಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು. ಅವೆಲ್ಲವನ್ನು ತುಲನೆ ಮಾಡಿ ಯೋಜನೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಲಾಗಿದೆ. ಆಶಾ ಕಾರ್ಯಕರ್ತೆಯರಿಂದ ಹಿಡಿದು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಿ, ಸ್ಪಷ್ಟ ಮಾಹಿತಿಯುಳ್ಳ ಕೈಪಿಡಿ ನೀಡಿದ್ದೇವೆ ಎಂದರು.
ತಪಾಸಣೆ ಬಳಿಕ ರೋಗಿಗಳ ಮೇಲ್ವಿಚಾರಣೆ ಕೂಡ ನಡೆಯಬೇಕು. ಆ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಯಾರು ಏನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣವನ್ನು ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಗಿದೆ. ಯೋಜನೆಯಲ್ಲಿ 30 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಿಗೆ ಉಚಿತವಾಗಿ ಪ್ರಮುಖ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಮತ್ತು ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆಯನ್ನು ನಡೆಸಲಾಗುವುದು.

ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣಾ ಕಾರ್ಯಕ್ಕೆ ನೆರವಾಗುವರು ಎಂದು ಹೇಳಿದರು.
ಸಮುದಾಯ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ NCD ಪೊರ್ಟಲ್ ನಲ್ಲಿ ಡೇಟಾ ನಮೂದಿಸಲಿದ್ದು, ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಔಷಧಿಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ. ಪ್ರತಿ ಜಿಲ್ಲೆಗಳ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಗೃಹ ಆರೋಗ್ಯ ತರಬೇತಿ ಕಾರ್ಯಾಗಾರಗಳನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ರೋಗಗಳ ಉಚಿತ ತಪಾಸಣೆ, ಔಷಧ ವಿತರಣೆ
ಮಧುಮೇಹ, ಡಯಾಬೆಟಿಕ್ ಫೂಟ್ ಮತ್ತು ರೆಟಿನೋಪತಿ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಅಲೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತಹೀನತೆಯ (19-29 ವರ್ಷ ವಯಸ್ಸಿನವರಿಗೆ) ಆರೋಗ್ಯ ತಪಾಸಣೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ (AAM) ಉಚಿತವಾಗಿ ನಡೆಸಲಾಗುತ್ತಿದೆ.
ರೋಗ ನಿರ್ಣಯವಾದ ನಂತರ, ವ್ಯಕ್ತಿಗಳು ಹತ್ತಿರದ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತೆರಳಿ ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಉಚಿತವಾಗಿ ಅಸಾಂಕ್ರಾಮಿಕ ರೋಗಗಳ ಶಿಷ್ಟಾಚಾರದ ಔಷಧಿಗಳನ್ನು ಪಡೆಯಬಹುದು.
ಗೃಹ ಆರೋಗ್ಯ ಯೋಜನೆಯ ಉದ್ದೇಶ
* ಅಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಮತ್ತು ಜಾಗೃತಿ ಹೆಚ್ಚಿಸುವುದು.
* ಸಕಾಲದಲ್ಲಿ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಗಾಗಿ * * * ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
* ವಿಕೇಂದ್ರೀಕೃತ ಆರೋಗ್ಯ ಸೇವೆಗಳ ಮೂಲಕ ನಿರಂತರ ಆರೈಕೆಯನ್ನು ಖಚಿತಪಡಿಸುವುದು.
* ಆಶಾ ಕಾರ್ಯಕರ್ತೆಯರು: ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು
* ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಕಳುಹಿಸುವುದು.
* CHO ಗಳು/ PHCO ಗಳು: ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ (AAM) ಆರೋಗ್ಯ ತಪಾಸಣೆ ನಡೆಸಿ, NCD ಪೋರ್ಟಲ್‌ಗೆ ಡೇಟಾವನ್ನು ನಮೂದಿಸುತ್ತಾರೆ. ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗಳಿಗೆ ಕಳುಹಿಸಬಹುದು.












Click it and Unblock the Notifications