Pulakeshinagar Congress Ticket: ಇಬ್ಬರ ನಡುವಿನ ಪೈಪೋಟಿಯಲ್ಲಿ ಮೂರನೇಯವನಿಗೆ ಲಾಟರಿ!
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ವೇಳೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ 5ನೇ ಪಟ್ಟಿಯನ್ನು (ಬುಧವಾರ, ಏಪ್ರಿಲ್ 19) ಬಿಡುಗಡೆ ಮಾಡಿದೆ. ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪ್ರಕಟಿಸಿದೆ.
ಮೂವರು ಹೊಸ ಅಭ್ಯರ್ಥಿಗಳ ಘೋಷಣೆಯ ಜೊತೆಗೆ ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ. ಕೆಆರ್ ಪುರಂ ಕ್ಷೇತ್ರದಲ್ಲಿ ಡಿ.ಕೆ. ಮೋಹನ್ ಬಾಬು, ಪುಲಕೇಶಿನಗರ ಕ್ಷೇತ್ರದಲ್ಲಿ ಎ.ಸಿ. ಶ್ರೀನಿವಾಸ್ ಮತ್ತು ಮುಳಬಾಗಿಲು ಕ್ಷೇತ್ರದಲ್ಲಿ ಬಿ.ಸಿ. ಮುದ್ದು ಗಂಗಾಧರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.

ಇದೇ ವೇಳೆ ಭಾರೀ ಕುತೂಹಲ ಮೂಡಿಸಿದ್ದ ಬೆಂಗಳೂರಿನ ಪುಲಕೇಶಿನಗರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಅನಿರೀಕ್ಷಿತ ಅಭ್ಯರ್ಥಿಯನ್ನು ಘೋಷಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
2018ರಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿಲ್ಲ. ಬದಲಾಗಿ ಎ.ಸಿ ಶ್ರೀನಿವಾಸ್ ಎಂಬ ಹೊಸ ಅಭ್ಯರ್ಥಿಯನ್ನು ಘೋಷಿಸಿದೆ.
ಪುಲಕೇಶಿನಗರ ಕಾಂಗ್ರೆಸ್ ಟಿಕೆಟ್‌ಗಾಗಿ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಮಾಜಿ ಮೇಯರ್ ಸಂಪತ್ ರಾಜ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರು ಅಖಂಡ ಶ್ರೀನಿವಾಸಮೂರ್ತಿ ಪರ ಬ್ಯಾಟಿಂಗ್ ಮಾಡಿದ್ದರು. ಇನ್ನು ಅತ್ಯಾಪ್ತ ಸಂಪತ್ ರಾಜ್ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟುಹಿಡಿದಿದ್ದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಮೇಲಾಟವನ್ನು ಅರ್ಥ ಮಾಡಿಕೊಂಡ ಕಾಂಗ್ರೆಸ್ ಹೈಕಮಾಂಡ್, ಇಬ್ಬರಿಗೂ ನಿರಾಕರಿಸಿ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಆಪ್ತ ಎ.ಸಿ. ಶ್ರೀನಿವಾಸ್‌ಗೆ ಟಿಕೆಟ್ ನೀಡಿದೆ. ಇಬ್ಬರ ನಡುವಿನ ಪೈಪೋಟಿಯಲ್ಲಿ ಮೂರನೇಯವರು ಲಾಭ ಪಡೆದಿದ್ದಾರೆ ಎನ್ನಬಹುದು.
2020ರಲ್ಲಿ ಪುಲಕೇಶಿನಗರ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಾಕಿದ ಪ್ರಕರಣ ರಾಜ್ಯದಾದ್ಯಂತ ಸುದ್ದಿ ಮಾಡಿತ್ತು. ಇದೀಗ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಸಂಪತ್ ರಾಜ್ ಪ್ರಮುಖ ಆರೋಪಿಯಾಗಿದ್ದರು ಮತ್ತು ಜೈಲಿಗೂ ಹೋಗಿ ಬಂದಿದ್ದಾರೆ. ಮೊದಲಿನಿಂದಲೂ ಸಂಪತ್ ರಾಜ್ ಪುಲಕೇಶಿನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದ ಅಖಂಡ ಶ್ರೀನಿವಾಸಮೂರ್ತಿ ಆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಇದು ಸಂಪತ್ ರಾಜ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕೆಲವು ಮತೀಯ ಕಿಡಿಗೇಡಿಗಳು ಬೆಂಕಿ ಹಾಕಿದ್ದರು. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆಗೂ ಬೆಂಕಿ ಇಟ್ಟಿದ್ದರು. ಇಷ್ಟಾದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪತ್ ರಾಜ್ ಬೆನ್ನಿಗೆ ನಿಂತಿದ್ದರು. ಕನಿಷ್ಠ ಪಕ್ಷ ಪಕ್ಷದಿಂದಲೂ ಉಚ್ಚಾಟಿಸಲಿಲ್ಲ.
ಮತ್ತೊಂದೆಡೆ, ತಮ್ಮನ್ನು ನಂಬಿ ಬಂದಿದ್ದ ಶಾಸಕನ ಪರ ನಿಲ್ಲಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಿಂದೆಮುಂದೆ ನೋಡಿದರು. ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟರೂ, ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು.
ಮನೆಗೆ ಬೆಂಕಿ ಹಾಕಿಸಿಕೊಂಡಿದ್ದರೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಿದ್ದರು. ಆದರೆ, ಮುಸ್ಲಿಂ ಸಮುದಾಯದ ಮೌಲ್ವಿಗಳು ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ, ಸಮುದಾಯದ ಜನರು ಮತ ಹಾಕಬಾರದು ಎಂದು ಫತ್ವಾ ಹೊರಡಿಸಿದ್ದರು.
ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ರಾಜ್ಯಾದ್ಯಂತ ಮುಸ್ಲಿಂ ಮತಗಳು ಕೈತಪ್ಪುವ ಭೀತಿಯಿಂದ, ಮೊದಲ ನಾಲ್ಕು ಬಿಡುಗಡೆಯಾದರೂ ಟಿಕೆಟ್ ಪ್ರಕಟಿಸಿರಲಿಲ್ಲ. ಇದರಿಂದ ಬೇಸತ್ತ ಅಖಂಡ ಶ್ರೀನಿವಾಸಮೂರ್ತಿ ಕೊನೆಗೂ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ಆಪ್ತ ಸಂಪತ್ ರಾಜ್‌ಗೆ ಟಿಕೆಟ್ ಕೊಡಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯತ್ನವೂ ವಿಫಲವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಬೇರೊಬ್ಬ ಅಭ್ಯರ್ಥಿಯನ್ನು ಪ್ರಕಟಿಸಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೇಲಾಟದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಆಪ್ತ ಎ.ಸಿ ಶ್ರೀನಿವಾಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.












Click it and Unblock the Notifications