Bengaluru Road Show: 45 ನಿಮಿಷ, 5 ಕಿಮೀ, 3 ಸಾವಿರ ಪೊಲೀಸರು; 'ನರೇಂದ್ರ ಮೋದಿ ರೋಡ್ ಶೋ'ಗೆ ಭಾರೀ ಭದ್ರತೆ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ಎಲ್ಲ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಾನಾ ತಂತ್ರ ಮತ್ತು ಕಸರತ್ತು ನಡೆಸುತ್ತಿದ್ದಾರೆ.
ಇದೇ ವೇಳೆ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಷ್ಟ್ರೀಯ ನಾಯಕರಿಂದ ಮತಬೇಟೆ ನಡೆಸುತ್ತಿದ್ದಾರೆ. ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ರಾಜ್ಯದಲ್ಲಿ ಒಂದು ವಾರಗಳ ಕಾಲ ಮೋದಿ ಮೇನಿಯಾ ನಡೆಯಲಿದೆ.

ಈಗಾಗಲೇ ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇದೀಗ ಏಪ್ರಿಲ್ 29ರಿಂದ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರ ಕಾರ್ಯಕ್ರಮಗಳು ನಿಗದಿಯಾಗಿವೆ. ಹುಮ್ನಾಬಾದ್, ವಿಜಯಪುರ, ಕುಡಚಿಯ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಿದ ಬಳಿಕ ನರೇಂದ್ರ ಮೋದಿ ಅವರು ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ಸಂಜೆ 6.15ರಿಂದ ಬರೋಬ್ಬರಿ 45 ನಿಮಿಷಗಳ ಕಾಲ ರೋಡ್ ಶೋ
ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಸಂಜೆ 6.15ರಿಂದ ಬರೋಬ್ಬರಿ 45 ನಿಮಿಷಗಳ ಕಾಲ ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮ್ಮನಹಳ್ಳಿ ಜಂಕ್ಷನ್‌ವರೆಗೂ 5 ಕಿಮೀ ರೋಡ್ ಶೋ ಇರಲಿದ್ದು, ಒಟ್ಟಾರೆ 3 ಸಾವಿರ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಈ ರೋಡ್ ಶೋ ನಂತರ ನರೇಂದ್ರ ಮೋದಿ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ರಾಜಭವನದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ರೋಡ್ ಶೋ ನಡೆಯುವ ರಸ್ತೆಯಲ್ಲಿ ಭದ್ರತೆ ಕುರಿತು ಎನ್ಎಸ್‌ಜಿ ಹಾಗೂ ಬೆಂಗಳೂರು ನಗರ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ.

ನರೇಂದ್ರ ಮೋದಿ ಅವರ ರೋಡ್ ಶೋಗೆ ಪೊಲೀಸರು ಈಗಾಗಲೇ ಭದ್ರತೆಯ ನೀಲನಕ್ಷೆ ತಯಾರಿಸಿದ್ದು, ಎನ್ಎಸ್‌ಜಿ ಮತ್ತು ಪೊಲೀಸರು ರೋಡ್ ಶೋ ನಡೆಸುವ ಮಾರ್ಗ ಪರಿಶೀಲನೆ ನಡೆಸಿದ್ದಾರೆ.
80 ಪಿಎಸ್ಐ ಸೇರಿ ಮೂರು ಸಾವಿರ ಪೊಲೀಸರ ನಿಯೋಜನೆ
ಈಗಾಗಲೇ ರೋಡ್ ಶೋ ನಡೆಯುವ ಮಾರ್ಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಈ ಮಾರ್ಗದಲ್ಲಿ ಬರುವ ಅಂಗಡಿಗಳು, ಮನೆಗಳಿಗೆ ನೋಟಿಸ್ ನೀಡಲಾಗಿದೆ. ಜನರ ಹೆಸರು, ವಿಳಾಸ, ನಂಬರ್ ಸಂಪೂರ್ಣ ಮಾಹಿತಿಯನ್ನು ಕಲೆಹಾಕಾಲಗಿದೆ. ಕಟ್ಟಡಗಳಲ್ಲಿ ಹೆಚ್ಚು ಅಲರ್ಟ್ ಆಗಿರಬೇಕು, ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭದ್ರತೆಗಾಗಿ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ 3 ಡಿಸಿಪಿಗಳು, 20 ಎಸಿಪಿಗಳು, 40 ಇನ್ಸ್‌ಪೆಕ್ಟರ್, 80 ಪಿಎಸ್ಐ ಸೇರಿ ಮೂರು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೋಡ್ ಶೋ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದ್ದು, ನೈಸ್ ರಸ್ತೆ ಜಂಕ್ಷನ್‌ನಿಂದ ಸುಮನಹಳ್ಳಿವರೆಗೆ ಬಿಗಿ ಬಂದೋಬಸ್ತ್ ಇರಲಿದೆ.
ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು
ಸುಮಾರು 5 ಕಿಮೀ ರೋಡ್ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಸುಮನಹಳ್ಳಿಯಿಂದ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಆಗಮಿಸಲಿದ್ದಾರೆ. ಮೋದಿ ಸಂಚರಿಸುವ ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗುತ್ತದೆ.
ಮರುದಿನ ಏಪ್ರಿಲ್ 30ರಂದು ಕೋಲಾರ, ಚನ್ನಪಟ್ಟಣ ಹಾಗೂ ಮೈಸೂರು ಜಿಲ್ಲೆಗಳಲ್ಲಿ ನಡೆಯುವ ಬೃಹತ್ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಬಿಜೆಪಿಗೆ ದೊಡ್ಡ ಉತ್ಸಾಹ ತುಂಬಲಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications