ಬಸವನಗುಡಿಯಲ್ಲಿ ರವಿ ಸುಬ್ರಮಣ್ಯಗೆ ತೇಜಸ್ವಿನಿ ಅನಂತಕುಮಾರ್ ಅಡ್ಡಗಾಲು: ಮಾಜಿ ಕೇಂದ್ರ ಸಚಿವರ ಪತ್ನಿಗೆ ಬಿಜೆಪಿ ಟಿಕೆಟ್?
ಬೆಂಗಳೂರು, ಮಾರ್ಚ್ 27: ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಈ ವಾರದಲ್ಲಿ ದಿನಾಂಕಗಳು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಜೆಡಿಎಸ್ ( JDS ) ಹಾಗೂ ಕಾಂಗ್ರೆಸ್ ( Congress ) ಪಕ್ಷಗಳು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿವೆ. ಚುನಾವಣೆಗೆ ದಿನಾಂಕಗಳು ಪ್ರಕಟಗೊಂಡ ನಂತರ ಬಿಜೆಪಿ ( BJP )ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai ) ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಒಂದೇ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಮಣ್ಯ ಅವರು ಬಿಜೆಪಿಯಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅವರು ಮತ್ತೆ ಗೆಲುವು ಸಾಧಿಸುವುದಿಲ್ಲ ಎಂಬ ವಿಚಾರವೀಗ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಈ ವಿಚಾರ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ.

ಆಂತರಿಕ ಸಮೀಕ್ಷೆ: ಬಿಜೆಪಿಯಲ್ಲೇ ಹಲವು ಚರ್ಚೆ
ಬಿಜೆಪಿಯ ಆಂತರಿಕ ಸಮೀಕ್ಷೆಯು ರವಿ ಸುಬ್ರಮಣ್ಯ ಪರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಬಸವನಗುಡಿ ಕ್ಷೇತ್ರದಲ್ಲಿ ಮತ್ತೆ ಅವರಿಗೆ ಟಿಕೆಟ್ ನೀಡಬಾರದೆಂದು ಕೆಲ ಕೇಸರಿ ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಸ್ ಸಂತೋಷ್ ಅವರಿಗೆ ನಿಕಟವರ್ತಿಯಾಗಿರುವ ರವಿ ಸುಬ್ರಮಣ್ಯ ಅವರಿಗೆ ಟಿಕೆಟ್ ತಪ್ಪುವ ಭೀತಿ ಎದುರಾಗಿದೆ. ರವಿ ಸುಬ್ರಮಣ್ಯ ಅವರು ಸಂಸದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪನೂ ಹೌದು. ಈ ಹಿಂದೆ ಕೋವಿಡ್ ಸಮಯದಲ್ಲಾದ ಹಗರಣದಲ್ಲಿ ರವಿ ಸುಬ್ರಮಣ್ಯ ಹೆಸರು ಕೇಳಿಬಂದಿತ್ತು. ಇದು ಅವರ ಜನಪ್ರಿಯತೆಗೆ ಹಿನ್ನೆಡೆ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
ಜಯನಗರದಿಂದ ಸ್ಪರ್ಧಿಸಲ್ಲ ಎಂದ ತೇಜಸ್ವಿನಿ ಅನಂತಕುಮಾರ್
ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವಾದ ಜಯನಗರದಲ್ಲಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಜಯನಗರದಲ್ಲಿ ಸೌಮ್ಯ ರೆಡ್ಡಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಹೀಗಾಗಿ, ಅವರು ಮತ್ತೆ ಆಯ್ಕೆಯಾಗಬಹುದು ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಜಯನಗರದಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಬಸವನಗುಡಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಕೈತಪ್ಪಿದ ಸಂಸದ, ಎಂಎಲ್‌ಸಿ ಟಿಕೆಟ್
2019ರಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣದಿಂದ ಸಂಸದ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ತೇಜಸ್ವಿನಿ ಅನಂತಕುಮಾರ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ಹೋಗಿತ್ತು. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಇದರಿಂದ ತೇಜಸ್ವಿನಿ ಅವರು ಅಸಮಾಧಾನ ಗೊಂಡಿದ್ದರು.

2021 ರಲ್ಲಿ ನಡೆದಿದ್ದ ಎಂಎಲ್‌ಸಿ ಚುನಾವಣೆಯಲ್ಲೂ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿ ಹೋಗಿತ್ತು. ಈ ಎಲ್ಲ ಬೆಳವಣಿಗಳನ್ನು ಅವಲೋಕಿಸುವುದಾದರೆ, ಈ ಬಾರಿ ಆದರೂ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತುಗಳು ಹರಿದಾಡುತ್ತಿವೆ. ಇನ್ನು ಬಸವನಗುಡಿಯಿಂದ ಎಂಎಲ್‌ಸಿ ಹಾಗೂ ಹಿರಿಯ ನಾಯಕ ಯು ಬಿ ವೆಂಕಟೇಶ್ ಅವರಿಗೆ ಟಿಕೆಟ್ ಸಿಕ್ಕಿದೆ.












Click it and Unblock the Notifications