ಬೆಂಗಳೂರು: ಆಟೋದಲ್ಲಿ ಸಾಗಿಸುತ್ತಿದ್ದ ₹1 ಕೋಟಿ ನಗದು ಜಪ್ತಿ, ಇಬ್ಬರ ಬಂಧನ
ಬೆಂಗಳೂರು, ಏಪ್ರಿಲ್ 14: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆದ ದಿನದಿಂದಲೇ (ಮಾರ್ಚ್ 29) ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಆಯೋಗದ ಅಧಿಕಾರಿಗಳು ಅಕ್ರಮ ನಡೆಯದಂತೆ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚೆಕ್‌ಪೋಸ್ಟ್, ಅಗತ್ಯ ತಪಾಸಣೆ ನಡೆಸುವ ಮೂಲಕ ಕೆಟ್ಟೆಚ್ಚರ ವಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪೊಲೀಸರು ಆಟೋ ರಿಕ್ಷಾವೊಂದರಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬೆಂಗಳೂರು ನಗರ ಕೆ.ಆರ್.ಮಾರುಕಟ್ಟೆ ಸಮೀಪ ಗುರುವಾರ ಆಟೋ ರಿಕ್ಷಾವೊಂದರಲ್ಲಿ ದಾಖಲೆಯೇ ಇಲ್ಲದ ಅಪಾರ ಪ್ರಮಾಣದ ಹಣ ಸಾಗಾಣೆ ಆಗುತ್ತಿತ್ತು. ಇದನ್ನು ತಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ನಡೆಸಿದಾಗ ಲೆಕ್ಕಕ್ಕೆ ಸಿಗದ ಸುಮಾರು 1ಕೋಟಿ ಹಣ ದೊರೆತಿದೆ. ಕೂಡಲೇ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರುಕಟ್ಟೆ ಕಡೆಯಿಂದ ಆಟೋ ರಿಕ್ಷಾದಲ್ಲಿ ಬಂಧಿತ ಇಬ್ಬರು ಎರಡು ಬ್ಯಾಗ್ ನಲ್ಲಿ ನಗದು ಸಹಿತ ಬರುತ್ತಿದ್ದರು. ಅವರನ್ನು ಸುರೇಶ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ.
ನಗದಿನ ದಾಖಲೆ ನೀಡಲು ಬಂಧಿತರು ವಿಫಲ
ಆಟೋ ತಪಾಸಣೆ ವೇಳೆ ಸಿಕ್ಕ ನಗದು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಪೊಲೀಸರು ಕೇಳಿದ್ದಾರೆ. ಆದರೆ ಅಪಾರ ಪ್ರಮಾಣದ ಹಣಕ್ಕೆ ದಾಖಲೆ ಒದಗಿಸುವಲ್ಲಿ ಅವರು ವಿಫಲರಾಗಿದ್ದಾರೆ. ಪೊಲೀಸರು ಸಹ ಜಪ್ತಿ ಮಾಡಿದ ಬ್ಯಾಗಿನಲ್ಲಿ ಹಣ ಬಿಟ್ಟು ಬೇರಾವ ದಾಖಲೆಗಳು ಕಂಡು ಬಂದಿಲ್ಲ. ಹಾಗಾದರೆ ಇದು ಅಕ್ರಮವಾಗಿ ಸಾಗಾಣೆ ಆಗುತ್ತಿದ್ದ ಹಣ ಎಂದು ತಿಳಿದು ಬಂಧಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಶಕ್ಕೆ ಪಡೆದ ಒಂದು ಕೋಟಿ ರೂಪಾಯಿ ಹಣವನ್ನು ಪೊಲೀಸರು ರಾಜ್ಯ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನ ಸದರಿ ಈ ಘಟನೆಗೂ ಮುನ್ನ ಕಳೆದ ಏಪ್ರಿಲ್ 6ರಂದು ಲೆಕ್ಕಕ್ಕೆ ಸಿಗದ ದಾಖಲೆಗಳಿಲ್ಲದ ಒಟ್ಟು ಸುಮಾರು 50 ಲಕ್ಷ ರೂಪಾಯಿ ನಗದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಗದಗ ಭಾಗದಲ್ಲಿ 50 ಲಕ್ಷ ರೂ.ನಗದು ಜಪ್ತಿ
ಉತ್ತರ ಕರ್ನಾಟಕ ಭಾಗದ ಗದಗ ಜಿಲ್ಲೆಯ ದುಂಡೂರು ಮಾರ್ಗವಾಗಿ ಕಾರಿನಲ್ಲಿ ಹಗಲು ಹೊತ್ತಿನಲ್ಲೇ ಸಾಗಿಸಲಾಗುತ್ತಿದ್ದ ಅಕ್ರಮ 50 ಲಕ್ಷ ರೂಪಾಯಿ ಹಣ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪತ್ತೆ ಯಾಗಿದೆ. ಆ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ.
ರಾಜ್ಯದ ಮಾದರಿ ನೀತಿ ಸಂಹಿತೆ (MCC) ಯಲ್ಲಿ ಅಸೆಂಬ್ಲಿ ಚುನಾವಣೆಯ ಕಾರಣ, ಸರಿಯಾದ ದಾಖಲೆಗಳಿಲ್ಲದೆ ದೊಡ್ಡ ಮೊತ್ತದ ನಗದನ್ನು ಸಾಗಿಸಲು ಅನುಮತಿ ಇಲ್ಲ. ಹೀಗಿದ್ದರು ಅಪಾರ ಪ್ರಮಾಣದ ಹಣ ದಿನನಿತ್ಯವು ಒಂದಲ್ಲ ಒಂದು ಕಡೆ ಪತ್ತೆ ಆಗುತ್ತಲೇ ಇದೆ. ಹಣದ ಜೊತೆಗೆ ಮತದಾರರನ್ನು ಓಲೈಸಲು ಒಯ್ಯುವ ವಸ್ತುಗಳು, ಬಂಗಾರ, ಸಾವಿರಾರು ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು, ಸ್ಕ್ವಾಡ್ ಸಿಬ್ಬಂದಿ, ಅಬಕಾರಿ ಇಲಾಖೆ ಅಧಿಕಾರುಗಳು ಜಪ್ತಿ ಮಾಡುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮುಂದಿನ ತಿಂಗಳ ಮೇ 10 ರಂದು ಒಂದೇ ಹಂತದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೂ ನಡೆಯಲಿದೆ. ಮೇ 13 ರಂದು ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದೆ.












Click it and Unblock the Notifications