Karnataka Election 2023: ಬಿಜೆಪಿ ಹಾಲಿ ಶಾಸಕರಲ್ಲಿ 16 ಮಂದಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ; ವಿವರಗಳು
ಬೆಂಗಳೂರು, ಏಪ್ರಿಲ್. 09: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಟಿಕೆಟ್ ಆಕಾಂಕ್ಷಿಗಳು ಹಿರಿಯ, ಪ್ರಭಾವಿ ನಾಯಕರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಆದರೆ, ಈವರೆಗೂ ಒಂದು ಸ್ಥಾನಕ್ಕೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದಕ್ಕೆ ಆಂತರಿಕ ಕಾರಣಗಳಿದ್ದರೂ ಕೂಡ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಭಯವಿದೆ.
ಈಗಾಗಲೇ ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಹಿರಿಯ ನಾಯಕರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಇದೇ ಸಂಪ್ರದಾಯವನ್ನು ರಾಜ್ಯ ಚುನಾವಣೆಯಲ್ಲಿಯೂ ಮುಂದುವರೆಸಲಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಹಲವು ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕ ಕಾಣಿಸಿಕೊಂಡಿದೆ.

ಟಿಕೆಟ್ ನಿರೀಕ್ಷೆಯಲ್ಲಿದ್ದ ಹಾಲಿ 16 ಮಂದಿ ಬಿಜೆಪಿ ಶಾಸಕರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಪಕ್ಷ ನಡೆಸಿರುವ ಸರ್ವೆಯಲ್ಲಿ, ಹಲವರು ಸೋಲುವ ವರದಿ ಬಂದಿದ್ದು, ಈ ಬಾರಿ ಈ ಶಾಸಕರಿಗೆ ಟಿಕೆಟ್ ನೀಡಿದರೆ ಸೋಲುವ ಆತಂಕವಿದೆ. ಈ ಕಾರಣದಿಂದ ಹದಿನಾರು ಮಂದಿ ಶಾಸಕರನ್ನು ಪಟ್ಟಿಯಿಂದ ಕೈಬಿಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಶಿವಮೊಗ್ಗ ಕ್ಷೇತ್ರದ ಹಾಲಿ ಶಾಸಕ, ಹಲವು ವಿವಾದಗಳಿಗೆ ಒಳಗಾಗಿರುವ ಕೆ.ಎಸ್. ಈಶ್ವರಪ್ಪ, ಭಟ್ಕಳ ಶಾಸಕ ಸುನೀಲ್ ನಾಯ್ಡ್, ಪುತ್ತೂರಿನ ಸಂಜೀವ್ ಮಠಂದೂರು, ಅಥಣಿ ಮಹೇಶ್ ಕುಮಟಳ್ಳಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಸಿರುಗುಪ್ಪ ಸೋಮಲಿಂಗಪ್ಪ, ಶಿರಹಟ್ಟಿಯ ರಾಮಣ್ಣ ಲಮಾಣಿ, SC ಮೀಸಲು ಕ್ಷೇತ್ರ ಗುಲ್ಬರ್ಗ ಗ್ರಾಮಾಂತರದ ಬಸವರಾಜ ಮತ್ತಿಮೂಡ್ ಅವರಿಗೆ ಟಿಕೆಟ್ ನಿರಾಕರಿಸಲಾಗುವ ಮಾಹಿತಿಯಿದೆ.
ಇದರ ಜೊತೆಗೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಚಿತ್ರದುರ್ಗದ ಜನಪ್ರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮೂಡಿಗೆರೆ ಎಂ.ಪಿ.ಕುಮಾರ ಸ್ವಾಮಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ವಲಸಿಗ ಶಾಸಕ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೃತ್ತಿ ಎಂದು ಗೋಕಾಕ್ ಶಾಸಕ ರಮೇಶ್ ಕಾರಕಿಹೊಳಿ ಪಟ್ಟಿ ಹಿಡಿದಿದ್ದಾರೆ. ಮತ್ತೊಂದೆಡೆ ಟಿಕೆಟ್ ನನಗೆ ಸಿಗುತ್ತದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಪ್ರಚಾರ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ಹೆಚ್ಚಾಗಿದ್ದು, ಹೈಕಮಾಂಡ್‌ಗೂ ತಲೆನೋವಾಗಿ ಪರಿಣಮಿಸಿದೆ.
ಇವೆಲ್ಲಕ್ಕೂ ನಾಳೆ ಉತ್ತರ ದೊರೆಯುವ ಸಾಧ್ಯತೆಯಿದೆ. ಏಕೆಂದರೆ, ಸೋಮವಾರ (ಏಪ್ರಿಲ್ 10) ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಶನಿವಾರ ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಸರ್ವೆ ಸೇರಿದಂತೆ ಎಲ್ಲಾ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಸಂಭಾವ್ಯ ಹೆಸರುಗಳ ಕುರಿತು ಶನಿವಾರ ಚರ್ಚೆ ನಡೆಸಲಾಗಿದೆ. ಈಗ ಭಾನುವಾರ ರಾತ್ರಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಸೋಮವಾರ ಅಥವಾ ಭಾನುವಾರ ತಡರಾತ್ರಿ ಪಟ್ಟಿ ಪ್ರಕಟಗೊಳಿಸುವ ಸಂಭವವಿದೆ.












Click it and Unblock the Notifications