BJP candidates: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಏಪ್ರಿಲ್ 8 ಕ್ಕೆ ಅಂತಿಮ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಮಾರ್ಚ್. 03: ಪ್ರಜಾಪ್ರಭುತ್ವದ ಬಹುದೊಡ್ಡ ಆಚರಣೆಯಾದ ಚುನಾವಣೆಗೆ ಕರುನಾಡು ತಯಾರಾಗುತ್ತಿದ್ದು, ಈಗಾಗಲೇ ಕಾಂಗ್ರೆಸ, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿವೆ. ಅದರೆ, ಆಡಳಿರೂಢ ಬಿಜೆಪಿ ಮಾತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.
ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏಪ್ರಿಲ್ 8 ರಂದು ಅಂತಿಮಗೊಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಎಲ್ಲ ಮುಖಂಡರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

"ಇನ್ನೆರಡು ದಿನದಲ್ಲಿ ನಡೆಯುವ ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ಮುಖಂಡರ ಅಭಿಪ್ರಾಯಗಳನ್ನು ಚರ್ಚಿಸಲಾಗುವುದು. ನಂತರ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಆದರೆ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿರುವ ಸದ್ಯ ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇನ್ನೆರಡು ದಿನಗಳಲ್ಲಿ ಪಟ್ಟಿ ಹೊರಬೀಳಲಿದೆ ಎಂದು ಹೇಳಿದ್ದಾರೆ. ಎರಡು ದಿನಗಳ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಟಿಕೆಟ್ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಜನರ ಅಪೇಕ್ಷೆಯಂತೆ ಬಿ.ವೈ. ವಿಜಯೇಂದ್ರ (ಅವರ ಮಗ) ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಧಿಕ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ. ಪಕ್ಷದ ನಿರ್ದೇಶನದಂತೆ ಶಿಕಾರಿಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ವಿಜಯೇಂದ್ರ ಕೂಡ ಖಚಿತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸೋಮವಾರ ಬೆಳಗ್ಗೆ ಬೆಳಗಾವಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಿತು. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಅಧಿಕಾರಕ್ಕೆ ಬರಲು ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಿದೆ. ಆದರೆ, ಎರಡು ದಿನಗಳ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿಯಲ್ಲಿ ಟಿಕೆಟ್ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಉಂಟಾಗಿದ್ದು, ಸದ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಹೊರ ಬೀಳುವುದು ಮುಖ್ಯವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 18 ಸ್ಥಾನಗಳ ಪೈಕಿ ಬಿಜೆಪಿ 13 ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ 5 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಬಿಜೆಪಿ 14 ರಿಂದ 17 ಸ್ಥಾನಗಳನ್ನು ಗೆಲ್ಲುವ ಹಂಬಲದಲ್ಲಿದ್ದರೆ, ಕಾಂಗ್ರೆಸ್ 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.
ಸಚಿವ ಉಮೇಶ ಕತ್ತಿ, ಸಂಸದ ಸುರೇಶ ಅಂಗಡಿ ಅವರ ಸಾವು ಜಿಲ್ಲೆಯಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಯಲ್ಲಿ ಮೆಗಾ ರೋಡ್‌ಶೋ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಾರ್ವಜನಿಕ ರ‍್ಯಾಲಿ ನಡೆಸಿದ್ದಾರೆ. ರಾಷ್ಟ್ರೀಯ ನಾಯಕರು ಬಿಜೆಪಿಗೆ ಸಾಥ್ ನೀಡಿದ್ದು, ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆಯೇ ಎಂಬುದು ಮೇ 13ಕ್ಕೆ ತಿಳಿಯಲಿದೆ.












Click it and Unblock the Notifications