Pay CM Posters : ಬೆಂಗಳೂರಿನಲ್ಲಿ 'ಪೇ ಸಿಎಂ' ಭಿತ್ತಿಪತ್ರ ಮತ್ತು ಕ್ಯೂ ಆರ್ ಕೋಡ್ ಅಂಟಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಸೆ. 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೋಲುವ ಕ್ಯೂಆರ್ ಕೋಡ್‌ನ ಚಿತ್ರ ಮತ್ತು ಮೇಲೆ ಬರೆಯಲಾದ 'ಪೇ ಸಿಎಂ' ಎಂಬ ಪೋಸ್ಟರ್‌ಗಳನ್ನು ಬುಧವಾರ ಬೆಂಗಳೂರಿನೆಲ್ಲೆಡೆ ಅಂಟಿಸಲಾಗಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಭಿಯಾನ ಆರಂಭಿಸಿದೆ.
40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಈಗಾಗಲೇ ಪ್ರಚಾರ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಆರಂಭಿದೆ. ಅಭಿಯಾನಕ್ಕಾಗಿ '40 ಪರ್ಸೆಂಟ್ ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ' ಹೆಸರಿನಲ್ಲಿ ಕಾಂಗ್ರೆಸ್ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೋಲುವ ಕ್ಯೂಆರ್ ಕೋಡ್‌ನ ಚಿತ್ರವನ್ನು ಬೆಂಗಳೂರಿನಲ್ಲಿ ಅಂಟಿಸಿ ಪ್ರತಿಭಟನೆ ನಡೆಸಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೇ ಕಾಂಗ್ರೆಸ್‌ನ '40 ಪಸೆಂಟ್ ಸರ್ಕಾರ' ವೆಬ್‌ಸೈಟ್‌ಗೆ ಹೋಗಲಿದೆ.

ಪೇ ಸಿಎಂ ಎಂದು ಭಿತ್ತಿಪತ್ರ ಅಂಟಿಸಿದ ಕಾಂಗ್ರೆಸ್
40 ಪಸೆಂಟ್ ಸರ್ಕಾರ' ವೆಬ್‌ಸೈಟ್ ರಾಜ್ಯದ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾಗಿದೆ. ನಗರದಲ್ಲಿ ಅಂಟಿಸಲಾಗಿರುವ ಪೋಸ್ಟರ್‌ಗಳ ಬಗ್ಗೆ ಕಾಂಗ್ರೆಸ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಕ್ಯೂಆರ್ ಕೋಡ್ ಸ್ಕ್ಯಾನ್ ವೆಬ್‌ಸೈಟ್‌ಗೆ ಹೋಗುವ ಕಾರಣ ಕಾಂಗ್ರೆಸ್‌ನ ಅಭಿಯಾನವೇ ಎಂದು ಹೇಳಲಾಗುತ್ತಿದೆ.

ಭ್ರಷ್ಟಾಚಾರದ ಬಗ್ಗೆ ಯುಜನತೆಯ ವಿಡಿಯೋ ಸರಣಿ
ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸಾಲು ಸಾಲು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಯುವಜನತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವಿಡಿಯೋಗಳನ್ನು ಹಂಚಿಕೊಂಡಿದೆ.
"ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಯುವಸಮುದಾಯ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿರುವುದು ಶೋಚನೀಯ. ಅಭ್ಯರ್ಥಿಗಳು "ಮೂರು ನಾಲ್ಕು ಅನ್ನ ಹಾಕು" ಎಂಬ ಉಚಿತ ಊಟಕ್ಕೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಆದರೆ '40 ಪಸೆಂಟ್ ಸರ್ಕಾರ' "ಐದು ಆರು ಲಂಚ ತಾರೋ" ಎನ್ನುತ್ತಿದೆ! ಈ ಅಭ್ಯರ್ಥಿಗಳಿಗೆ ಉತ್ತರವೇನು ಬಸವರಾಜ ಬೊಮ್ಮಾಯಿ ಅವರೇ?" ಎಂದು ಪ್ರಶ್ನಿಸಿದೆ.

ಹಿಂದುಗಳೂ ಸೇರಿ ಎಲ್ಲಾ ಜಾತಿ ಧರ್ಮದವರಿಗೂ ಬಿಜೆಪಿಯ ಅನ್ಯಾಯ
ರಾಜ್ಯದ ಅನುದಾನಿತ ಮೂಲಸೌಕರ್ಯ ಯೋಜನೆಗಳ ಟೆಂಡರ್ ಮೊತ್ತದ ಶೇಕಡಾ 40 ರಷ್ಟು ಹಣವನ್ನು ಬಿಜೆಪಿ ನಾಯಕರು ಮತ್ತು ಅಧಿಕಾರಿಗಳು ಲಂಚವಾಗಿ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿರುವ ಕರ್ನಾಟಕದ ಗುತ್ತಿಗೆದಾರರ ಆರೋಪಗಳಿಂದಾಗಿ '40 ಪರ್ಸೆಂಟ್ ಸರ್ಕಾರ' ವಿವಾದ ಹೆಚ್ಚು ಸುದ್ದಿಯಾಗಿದೆ.
"ನಾವು ಹಿಂದೂ ಪರ ಎಂದುಕೊಳ್ಳುವ ಕರ್ನಾಟಕ ಬಿಜೆಪಿ ಹಿಂದುಗಳೂ ಸೇರಿದಂತೆ ಎಲ್ಲಾ ಜಾತಿ ಧರ್ಮದವರಿಗೂ ಅನ್ಯಾಯ ಮಾಡ್ತಿರೋದೇಕೆ? ಹಿಂದುಗಳೂ ಬಿಜೆಪಿಯ ಭ್ರಷ್ಟಾಚಾರದ ಸಂತ್ರಸ್ತರಾಗಿದ್ದಾರೆ, ಅಲ್ಲವೇ ಬಸವರಾಜ ಬೊಮ್ಮಾಯಿ ಅವರೇ? KPSC ಸೇರಿದಂತೆ ಎಲ್ಲಾ ಬಗೆಯ ಅಭ್ಯರ್ಥಿಗಳಿಗೆ ಸರ್ಕಾರ ದ್ರೋಹ ಮಾಡ್ತಿರೋದೇಕೆ?" ಎಂದು ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ.

ಹೈದರಾಬಾದ್‌ನಲ್ಲೂ '40% ಸಿಎಂಗೆ ಸ್ವಾಗತ' ಪೋಸ್ಟರ್‌ಗಳು!
ಬೆಂಗಳೂರಿನ ರೀತಿಯಲ್ಲಿಯೇ 40% ಸಿಎಂಗೆ ಸ್ವಾಗತ ಎಂಬ ಪೋಸ್ಟರ್‌ಗಳು ಕಳೆದ ವಾರ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ಹೈದರಾಬಾದ್ 'ವಿಮೋಚನಾ ದಿನ' ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ, ಹೈದರಾಬಾದ್ ಪೋಸ್ಟರ್‌ಗಳು ಬೊಮ್ಮಾಯಿ ಅವರ ಹೆಸರನ್ನು ಅಥವಾ ಅವರ ಹೋಲಿಕೆಯನ್ನು ಹೊಂದಿರಲಿಲ್ಲ.
'ಇದನ್ನು ವ್ಯವಸ್ಥಿತ ಪಿತೂರಿ ಎಂದು ಕರೆದು, ತೆಲಂಗಾಣ ಸರ್ಕಾರವು 'ಮುಖ್ಯಮಂತ್ರಿಯ ವಿರುದ್ಧ ಇಂತಹ ಆಧಾರರಹಿತ ಆರೋಪಗಳಿಗೆ' ಅವಕಾಶ ಮಾಡಿಕೊಟ್ಟಿದೆ ಎಂದು ಟೀಕಿಸಿದ್ದರು.
ಆದರೆ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಸಾಮಾಜಿಕ ಮಾಧ್ಯಮ ಸಂಚಾಲಕರು ಟ್ವೀಟ್ ಮಾಡಿ, "ಕರ್ನಾಟಕ ಸಿಎಂ ಅವರ ಹೆಸರನ್ನೂ ಹೇಳದ ಹೋರ್ಡಿಂಗ್ ಬಗ್ಗೆ ಏಕೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು? ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು 40% ಕಮಿಷನ್ ಸರ್ಕಾರ ಎಂದು ಅವರು ಒಪ್ಪುತ್ತಾರೆಯೇ?" ಎಂದು ತಿರುಗೇಟು ನೀಡಿದ್ದರು.
ಇನ್ನು, ಪ್ರತಿಪಕ್ಷ ಕಾಂಗ್ರೆಸ್ ಬುಧವಾರದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಲಿದ್ದು, ಈ ಸಂಬಂಧ ನಿಡುವಳಿ ಸೂಚನೆ ನೀಡಿದೆ. ಈ ವಿಷಯ ಕುರಿತು ಇಂದಿನ ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಪ್ರಸ್ತಾಪಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
40 ಪರ್ಸೆಂಟ್ ಕಮಿಷನ್ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ.












Click it and Unblock the Notifications