Sugar Factories: ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್
ಬೆಂಗಳೂರು, ಮೇ 05: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಕೆಲವು ಸಕ್ಕರೆ ಕಾರ್ಖಾನೆಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಮೂಲಕ ಕೈಗಾರಿಕೆ ಹಾಗೂ ರೈತರಿಗೆ ಅನುಕೂಲಕರ ನಿರ್ಧಾರ ಕೈಗೊಂಡಿದೆ. ಸರ್ಕಾರ ಪ್ರಮುಖ ಯೋಜನೆ ರೂಪಿಸುವಂತೆ ಹಣಕಾಸಿ ಇಲಾಖೆಗೆ ಸೂಚನೆ ನೀಡಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಇಂಡಿ ತಾಲ್ಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಹೆಚ್ಚಾಯ್ತು ಅರ್ಥಿಕ ವೆಚ್ಚ, ನೆರವು ಅಗತ್ಯ
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 192 ಕೋಟಿ ರೂಪಾಯಿ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 150 ಕೋಟಿ ರೂಪಾಯಿ ಹಾಗೂ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ 130 ಕೋಟಿ ರೂಪಾಯಿ ಬೇಕಾಗಿದೆ. ಇಷ್ಟು ನೆರವು ದೊರಕಿಸಿ ಕೊಟ್ಟರೆ, ವಿದ್ಯುತ್ ಉತ್ಪಾದನೆಯಿಂದ ಬರುವ ಹಣವನ್ನು ಸಾಲದ ಕಡೆಗೇ ಪಾವತಿಸಲು ಕಾರ್ಖಾನೆಗಳು ಆಸಕ್ತಿ ಹೊಂದಿವೆ ಎಂದು ತಿಳಿಸಿದರು.

ಎಥೆನಾಲ್ ಉತ್ಪಾದನಾ ಘಟಕ ಸ್ಥಾಪನೆ
ಕೃಷ್ಣಾ ಕಾರ್ಖಾನೆಯು 27 ಮೆಗಾವ್ಯಾಟ್ ಮತ್ತು ನಂದಿ ಕಾರ್ಖಾನೆಯು 37 ಮೆಗಾವ್ಯಾಟ್ ಸಾಮರ್ಥ್ಯದ ಸಹವಿದ್ಯುತ್ (ಕೋಜೆನ್) ಘಟಕ ಸ್ಥಾಪಿಸುವ ಆಸಕ್ತಿ ಹೊಂದಿವೆ. ಜೊತೆಗೆ ಕೃಷ್ಣಾ ಹಾಗೂ ಭೀಮಾ ಕಾರ್ಖಾನೆಯು ಎಥೆನಾಲ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಮುಂದಾಗಿದೆ. ಸಹಕಾರಿ ತತ್ವದ ಮೇಲೆ ನಡೆಯುತ್ತಿರುವ ಈ ಕಾರ್ಖಾನೆಗಳ ಪುನಶ್ಚೇತನ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಸಕ್ಕರೆ ಆಯುಕ್ತರು ಮತ್ತು ಎನ್.ಸಿ.ಡಿ.ಸಿ. ಅಧಿಕಾರಿಗಳ ಜತೆ ಸಮಗ್ರವಾಗಿ ಚರ್ಚಿಸಿ, ಸಮರ್ಪಕ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಎರಡೂ ಕಾರ್ಖಾನೆಗಳಿಗೆ ಸರಕಾರದ ಕಡೆಯಿಂದ ಸಕಾಲಿಕ ನೆರವು ಸಿಗುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರಾದ ಎಚ್ ಕೆ ಪಾಟೀಲ್, ಶಿವಾನಂದ ಪಾಟೀಲ್, ಎಚ್ ಸಿ ಮಹದೇವಪ್ಪ, ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ, ಬೀಳಗಿ ಶಾಸಕ ಜೆ ಟಿ ಪಾಟೀಲ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಇಂಧನ ಇಲಾಖೆ ಇತರರು ಪಾಲ್ಗೊಂಡಿದ್ದರು.












Click it and Unblock the Notifications