Skydeck Updates: ₹500 ಕೋಟಿ ವೆಚ್ಚದ ಬೆಂಗಳೂರು 'ಸ್ಕೈಡೆಕ್' ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ
ಬೆಂಗಳೂರು, ಆಗಸ್ಟ್ 23: ರಾಜ್ಯದ ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ರೂಪಿಸಿರುವ 'ಬೆಂಗಳೂರು ಸ್ಕೈಡೆಕ್' ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್ ರಾಜಧಾನಿಯನ್ನು ₹500 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಲಿದೆ. ಯೋಜನೆ ಕುರಿತು ಒಂದಷ್ಟು ಹೊಸ ಅಪ್ಡೇಟ್‌ಗಳು ನಿಮ್ಮ ಮುಂದಿವೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ 'ಬೆಂಗಳೂರು ಸ್ಕೈಡೆಕ್' ಯೋಜನೆಯು ಒಂದಾಗಿದೆ. ಬೆಂಗಳೂರಿನ ಮೂಲಸೌಕರ್ಯಕ್ಕೆ ಈ ಸ್ಕೈಡೆಕ್ ಪ್ರಮುಖ ಉತ್ತೇಜನ ನೀಡಲಿದೆ. ಇದು ಸ್ಥಾಪಿತವಾದರೆ ನಗರವನ್ನು ನೀವು 360 ಡಿಗ್ರಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಅಷ್ಟೊಂದು ಎತ್ತರದಲ್ಲಿ ಈ ಸ್ಕೈಡೆಕ್ ನಿರ್ಮಾಣವಾಗಲಿದೆ.

ಈ ಸ್ಕೈಡೆಕ್ ಗೋಪುರವು ಸುಮಾರು 250 ಮೀಟರ್ ಎತ್ತರ ಇರಲಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕುತುಬ್ ಮಿನಾರ್ ಸ್ಮಾರಕ (73 ಮೀಟರ್) ಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು ಎತ್ತರವಾಗಿರಲಿದೆ ಎಂದು ಸರ್ಕಾರ ತಿಳಿಸಿದೆ. ಸದ್ಯ ಬೆಂಗಳೂರಿನ ಅತಿ ಎತ್ತರದ ಕಟ್ಟಡ ಎನ್ನಲಾಗುವ ಸಿಎನ್‌ಟಿಸಿ ಪ್ರೆಸಿಡೆನ್ಶಿಯಲ್ ಟವರ್ ಅಂದಾಜು 160 ಮೀಟರ್ ಎತ್ತರವಿದೆ. ಈ ಟವರ್ ಗಿಂತಲೂ ಹೆಚ್ಚಿನ ಎತ್ತರದಲ್ಲಿ ಸ್ಕೈಡೆಕ್ ತಲೆ ಎತ್ತಲಿದೆ.
ಈ ಯೋಜನೆ ಸಲುವಾಗಿ ಈಗಾಗಲೇ ಒಂದಷ್ಟು ಸುತ್ತಿನ ಮಾತುಕತೆಗಳನ್ನು, ಸಭೆಗಳನ್ನು ನಡೆಸಿರುವ ರಾಜ್ಯ ಕೈಗಾರಿಕೆ ಹಾಗೂ ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರು ಯೋಜನೆಗೆ ಅನುಮೋದನೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ನಗರದಿಂದ ಸ್ಕೈಡೆಕ್‌ಗೆ ಮೆಟ್ರೋ ಸಂಪರ್ಕ
ಆರಂಭದಲ್ಲಿ ಜಾಗದ ಸಮಸ್ಯೆ ಆಗಿತ್ತು. ಇದೀಗ ಬೆಂಗಳೂರಿನ ಹೊರಭಾಗದಲ್ಲಿರುವ ನೈಸ್ ರಸ್ತೆಯಲ್ಲಿ ಸ್ಕೈಡೆಕ್ ನಿರ್ಮಿಸಲು ಸರ್ಕಾರ ತಯಾರಿ ನಡೆಸಿದೆ. ಅಲ್ಲಿಗೆ ಎಲ್ಲಿಂದ ಬೇಕಾದರೂ ತೆರಳಲು ಅನುಕೂಲವಾಗುವಂತೆ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲಿಗೆ ಸಂಪರ್ಕ ಕಲ್ಪಿಸಲು ಸರ್ಕಾರ ಸಜ್ಜಾಗಿದೆ.
ಸ್ಕೈ ಡೆಕ್‌ನೊಳಗೆ ಅದ್ಧೂರಿ ಶಾಪಿಂಗ್ ಕಾಂಪ್ಲೆಕ್ಸ್ ಇರಲಿದೆ. ಇದರ ಹೊರತು ಮತ್ತ್ಯಾವ ಸೌಲಭ್ಯಗಳು ಇರಲಿವೆ ಎಂಬ ಮಾಹಿತಿ ಸಿಗಬೇಕಿದೆ. ಯೋಜನೆ ಆರಂಭದಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಸ್ಕೈಡೆಕ್ ನಿರ್ಮಿಸಲು ಸರ್ಕಾರ ಯೋಚಿಸಿತ್ತು. ಆದರೆ ಅದಕ್ಕೆ ಬೇಕಾದ 25ಎಕರೆ ಜಾಗ ಸಿಗಲಿಲ್ಲ ಎಂಬುದರ ಜೊತೆಗೆ ಹಲವು ಸವಾಲುಗಳು ಎದುರಾದವು. ಅಲ್ಲದೇ ನಗರದೊಳಗೆ ಇಷ್ಟೊಂದು ಎತ್ತರ ಸ್ಕೈಡೆಕ್ ನಿರ್ಮಿಸಲು ರಕ್ಷಣಾ ಸಚಿವಾಲಯದ ಕಚೇರಿಗಳು ವಿರೋಧ ವ್ಯಕ್ತಪಡಿಸಿದವು.
ನಗರದ ಒಳಗೆ ನಿರ್ಮಿಸಿದರೆ ವಿಮಾನ ಹಾರಾಟಕ್ಕೆ ತೊಂದರೆ?
ಮುಖ್ಯವಾಗಿ ನಗರದ ಒಳಗೆ ಇಷ್ಟೊಂದು ಎತ್ತರದ ಗೋಪುರ ನಿರ್ಮಿಸಿದರೆ ಮಿಲಿಟರಿ ಹಾಗೂ ನಾಗರಿಕ ವಿಮಾನಗಳ ಸಂಚಾರಕ್ಕೆ ತೊಂದರೆ ಆಗಬಹದು ಎಂಬ ಅಭಿಪ್ರಾಯ ಕೇಳಿ ಬಂತು. ಆದ್ದರಿಂದ ಬೆಂಗಳೂರಿನ ಹೊರ ಭಾಗಕ್ಕೆ ಸ್ಕೈಡೆಕ್ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕ ಸಚಿವ ಸಂಪುಟವು 1,269 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ದ್ವಿಮುಖ ಸುರಂಗವನ್ನು ತೆರವುಗೊಳಿಸಿದೆ. ಬೆಂಗಳೂರಿನ ಅತೀ ಉದ್ದದ ಸುರಂಗ ಮಾರ್ಗ ಇದಾಗಿದ್ದು, ಈ ಯೋಜನೆಗೂ ಸರ್ಕಾರದ ಸಂಪುಟದಿಂದ ಅನುಮೋದನೆ ದೊರೆತಿದೆ.












Click it and Unblock the Notifications