ಕರ್ನಾಟಕ ಬಜೆಟ್: ₹01 ಲಕ್ಷ ಕೋಟಿ ಸಾಲಕ್ಕೆ ಮುಂದಾಯಿತಾ ಕಾಂಗ್ರೆಸ್ ಸರ್ಕಾರ?
ತುಮಕೂರು, ಜನವರಿ 22: ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ರಾಜ್ಯ ಬಜೆಟ್ ಮಂಡಿಸಲಿದೆ. ಈ ಬಜೆಟ್‌ನಲ್ಲೂ ಕಾಂಗ್ರೆಸ್ ಸರ್ಕಾರ 1 ಲಕ್ಷ ಕೋಟಿ ರೂ. ನಷ್ಟು ಸಾಲ ಮಾಡಲಿದೆ. ಕೇರಳದಂತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ ಕೊಂಡೊಯ್ಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದಾಯದಲ್ಲಿ ಶೇಕಡಾ 20 ರಷ್ಟು ಇಳಿಕೆ ಆಗಿದೆ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಯೇ ಹೇಳಿದ್ದಾರೆ. ಈ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂ. ನಷ್ಟು ಸಾಲ ಮಾಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಈ ಹಿಂದೆ ನಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಸಾಲ ಪಡೆಯದೆ ಹೆಚ್ಚುವರಿ ಬಜೆಟ್ ಮಾಡಲಾಗಿತ್ತು. ಕಾಂಗ್ರೆಸ್ ಬಂದ ನಂತರ ಕರ್ನಾಟಕ ಸಾಲ ರಾಜ್ಯವಾಗಿ ಪರಿವರ್ತನೆಯಾಗಿದೆ. ಕೇರಳದಂತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ರಾಜ್ಯವನ್ನು ತರಲಿದ್ದಾರೆ. ಸಿದ್ದರಾಮಯ್ಯ ಹೊರ ನಡೆಯುವ ಮುಖ್ಯಮಂತ್ರಿಯಾಗಿರುವುದರಿಂದ ಅವರಿಗೆ ಯಾವುದೇ ಚಿಂತೆ ಇಲ್ಲ. ಕೆಲವು ಶಾಸಕರು ಅನುದಾನವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲೇ ಈ ಕುರಿತು ಜಗಳ ನಡೆದಿದೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ಅದನ್ನು ಹೇಳಿದ್ದಾರೆ. ಇದರ ಜೊತೆಗೆ ಬ್ಯಾಂಕ್ ದರೋಡೆ, ಹಸುವಿನ ಕೆಚ್ಚಲು ಕತ್ತರಿಸುವುದು, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆಗಳು ನಡೆಯುತ್ತಲೇ ಇವೆ.
ಸದ್ಯದ ಸ್ಥಿತಿ ಹೀಗಿದ್ದರೂ ಸಹಿತ ಬೆಳಗಾವಿಯಲ್ಲಿ ಸಮಾವೇಶ ನಡೆಸಲು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡುತ್ತದೆ. ಭ್ರಷ್ಟಾಚಾರದಿಂದ ವಸೂಲಿ ಮಾಡಿದ ಹಣವನ್ನು ಆ ಸಮಾವೇಶಕ್ಕೆ ಬಳಸಲಾಗಿದೆ. ಈಗ ದರ ಏರಿಕೆ ಮಾಡಿ ಜನರ ಮೇಲೆ ಮತ್ತಷ್ಟು ಹೊರೆ ಹೇರಿದ್ದಾರೆ. ಮೊದಲಿಗೆ ಯಾವುದೇ ತೆರಿಗೆ ಹೇರಲ್ಲ ಎಂದು ಹೇಳಿ, ಬಳಿಕ ಜನರ ತಲೆ ಮೇಲೆ ಹೊರೆ ಹಾಕಿದ್ದಾರೆ ಎಂದು ಅವರು ದೂರಿದರು.
ಕೃಷಿ ವ್ಯವಸ್ಥೆ ಹಾಳು: ಆರ್.ಅಶೋಕ್ ಕಳವಳ
ಜಿಲ್ಲೆಯ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಅಶೋಕ್ ಅವರು ಸದ್ಯ ಕೃಷಿ ವ್ಯವಸ್ಥೆಯನ್ನು ನಾವೇ ಹಾಳು ಮಾಡಿದ್ದು, ಈಗ ಮತ್ತೆ ಹಿಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಹಾಳಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು ಸತ್ತುಹೋಗಿವೆ. ಮಣ್ಣಿನ ಫಲವತ್ತತೆ ನಾಶವಾಗಿದೆ. ಇದು ನೈಸರ್ಗಿಕ ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಚೀನಾದಲ್ಲಿ ಮಣ್ಣಿನ ಫಲವತ್ತತೆಗಾಗಿ ಈಗ ಏಡಿಗಳನ್ನು ಬಳಸಲಾಗುತ್ತಿದೆ.
ಮೊದಲಿಗೆ ರಾಸಾಯನಿಕ ಗೊಬ್ಬರವನ್ನು ಚೆನ್ನಾಗಿ ಬಳಸಿ, ಈಗ ರಾಸಾಯನಿಕ ಗೊಬ್ಬರ ಬಳಸುವುದು ಬೇಡ ಎಂದು ಜಾಗೃತಿ ತರಲಾಗುತ್ತಿದೆ. ಈಗ ಎಲ್ಲರೂ ಮತ್ತೆ ಹಿಂದಕ್ಕೆ ಹೋಗುತ್ತಿದ್ದೇವೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ ನೀರಿನ ಕೊರತೆಯೂ ಕಂಡು ಬರುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನೀರಿನ ಕೊರತೆ ಇದೆ. ಆದರೆ ಇಲ್ಲೂ ಮಂಡ್ಯ ಜಿಲ್ಲೆಯಲ್ಲಿ ಮಾಡುವಂತೆ ಕಬ್ಬು ಬೆಳೆಯಲಾಗುತ್ತಿದೆ. ಆದ್ದರಿಂದ ಕೃಷಿ ತಜ್ಞರು, ವಿಜ್ಞಾನಿಗಳು ಹಾಗೂ ಸರ್ಕಾರ ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.












Click it and Unblock the Notifications