ಬಿಎಸ್‌ವೈ ಬಿಜೆಪಿಗೆ ಎರಡು ದಿನದಲ್ಲಿ ನಿರ್ಧಾರ?
ಬೆಂಗಳೂರು, ಅ.7 : ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವ ಕುರಿತು ಎರಡು ದಿನದಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಮುಂಬೈನಲ್ಲಿ ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಅಂತಿಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ವಿವಿಧ ರಾಜ್ಯಗಳ ರಾಜಕೀಯ ಬೆಳವಣಿಗೆಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕರ್ನಾಟಕದ ವಿಚಾರ ಬಂದಾಗ, ಯಡಿಯೂರಪ್ಪ ಅವರ ಕುರಿತು ಚರ್ಚೆ ನಡೆಯಲಿದ್ದು ಅಂತಿಮ ತೀರ್ಮಾನ ಪ್ರಕಟವಾಗಲಿದೆ ಎಂದರು.
ನಾಯಕರ ಸಭೆ : ಮಂಗಳವಾರ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ, ಸೋಮವಾರ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆಯಲಿದೆ.
ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮರಳುವುದು, ಕೆಜೆಪಿ ಜೊತೆ ಮೈತ್ರಿ, ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ದಿನಾಂಕ ನಿಗದಿ ಮುಂತಾದ ವಿಚಾರಗಳ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಇಲ್ಲಿನ ಚರ್ಚೆಯ ವಿಷಯವನ್ನು ಮಂಗಳವಾರ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮುಂದೆ ಮಂಡಿಸಲಿದ್ದಾರೆ.
ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸೋಮವಾರ ಅಥವ ಮಂಗಳವಾರ ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದ್ದು, ಈ ಮೂಲಕ ಕರ್ನಾಟಕದ ಹಲವು ದಿನಗಳ ರಾಜಕೀಯ ಗೊಂದಲಗಳಿಗೆ ತೆರೆ ಬೀಳಲಿದೆ. ಸಭೆಯ ಬಳಿಕ ಬಿಜೆಪಿ ಲೋಕಸಭೆ ಚುನಾವಣಾ ಕಾರ್ಯವನ್ನು ಅಧಿಕೃತವಾಗಿ ಪ್ರಾರಂಭಿಸಲಿದೆ.












Click it and Unblock the Notifications