ಕರ್ನಾಟಕ ಚುನಾವಣೆ; ಬೆಂಗಳೂರು ಗ್ರಾಮಾಂತರದ ಒಟ್ಟು ಮತದಾರರು
ಬೆಂಗಳೂರು, ಮಾರ್ಚ್ 31; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಪ್ರಕಟಿಸಿದೆ. ತಕ್ಷಣದಿಂದಲೇ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ.
ಚುನಾವಣೆ ವೇಳಾಪಟ್ಟಿ ಘೋಷಣೆ ಬಳಿಕ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅರ್. ಲತಾ ಪತ್ರಿಕಾಗೋಷ್ಠಿ ನಡೆಸಿದರು. ಚುನಾವಣಾ ಅಧಿಸೂಚನೆ ಅನ್ವಯ ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೇ 13ಕ್ಕೆ ಮತ ಎಣಿಕೆ ನಡೆಯುತ್ತದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8,67,909 ಮತದಾರರಿದ್ದಾರೆ. 4,31,163 ಪುರುಷ ಮತದಾರರು, 4,36,625 ಮಹಿಳಾ ಮತದಾರರು ಮತ್ತು ತೃತೀಯ ಲಿಂಗಿಗಳು 121. ಅಂಗವಿಕಲರು 12,481 ಹಾಗೂ 80 ವರ್ಷ ಮೇಲ್ಪಟ್ಟ 20,324 ಮತದಾರರ ಪಟ್ಟಿ ಸಿದ್ಧವಾಗಿದೆ. ಜಿಲ್ಲೆಯಲ್ಲಿ 1,137 ಮತಗಟ್ಟೆಗಳಿದ್ದು, ಅವುಗಳಲ್ಲಿ 879 ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ 258 ಮತಗಟ್ಟೆಗಳಿವೆ.
ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳು; ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಿವೆ. ಮಹಿಳೆಯರೇ ನಡೆಸುವ 20 ವಿಶೇಷ ಮಹಿಳಾ ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಅಂಗವಿಕಲರಿಗಾಗಿ ತಾಲೂಕಿಗೆ 1 ರಂತೆ 4 ವಿಕಲಾಂಗರ ಮತಗಟ್ಟೆ ತೆರೆಯಲಾಗುತ್ತದೆ. 8 ಮಾದರಿ ಮತಗಟ್ಟೆಗಳನ್ನು ಮತದಾನಕ್ಕಾಗಿ ಸ್ಥಾಪನೆ ಮಾಡಲಾಗುತ್ತದೆ. ಜಿಲ್ಲೆಯ 1,137 ಮತಗಟ್ಟೆಗಳಲ್ಲಿ ಶೇ 50ರಲ್ಲಿ ವೆಬ್‌ಕ್ಯಾಸ್ಟಿಂಗ್ ಸೌಲಭ್ಯ ಹಾಗೂ ಎಲ್ಲ ಮತ ಕ್ಷೇತ್ರಗಳಲ್ಲಿ ಸಕಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸಿದೆ. ಆದರೆ ಮತದಾನವನ್ನು ಹಾಗೂ ಚುನಾವಣೆ ಪ್ರಕ್ರಿಯೆಯನ್ನು ಒಂದು ಹಬ್ಬ ಎಂದು ಆಚರಿಸುವ ನಿಟ್ಟಿನಲ್ಲಿ ಹಿರಿಯ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರೆ ಉತ್ತಮ ಎಂದು ಜಿಲ್ಲಾಧಿಕಾರಿ ಅರ್. ಲತಾ ಅಭಿಪ್ರಾಯಪಟ್ಟರು.
ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತವು ಮುಂದಾಗಿದೆ. ಜಿಲ್ಲೆಯ 26 ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅವ್ಯವಹಾರ ದೂರುಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸರಿಗೆ ಜನರು ಮಾಹಿತಿ ನೀಡುವಂತೆಯೂ ಮನವಿ ಮಾಡಲಾಗಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಸಭೆ ಸಮಾರಂಭಗಳಿಗೆ ಅನುಮತಿ ಪಡೆಯಲು ಅವಕಾಶವಿದೆ. ಚುನಾವಣಾ ಅಕ್ರಮ ತಡೆಗೆ ಅಧಿಕಾರಿಗಳ ತಂಡ ನಿಯೋಜಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಸ್ತ್ರ ಪರವಾನಗಿ ಹೊಂದಿರುವ ಶಸ್ತ್ರ ಪರವಾನಗಿದಾರರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ಶಸ್ತ್ರಾಸ್ತ್ರಗಳ ಅಧಿನಿಯಮ 1959ರ ಕಲಂ 24 ರನ್ವಯ ಜಿಲ್ಲಾಧಿಕಾರಿಯವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧೀನದಲ್ಲಿನ ಸಂಸ್ಥೆಗಳಲ್ಲಿ ಭದ್ರತೆಗಾಗಿ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳಿಗೆ ಮಾತ್ರ ಈ ಆದೇಶವು ಅನ್ವಯಿಸುವುದಿಲ್ಲ. ಉಳಿದಂತೆ ಭದ್ರತೆಗಾಗಿ ಪರವಾನಗಿ ಇಲ್ಲದ ಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧೀನದಲ್ಲಿನ ಸಂಸ್ಥೆಗಳು ಕಡ್ಡಾಯವಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಿಕೊಳ್ಳಲು ಸೂಚನೆ ನೀಡಲಾಗಿದೆ.












Click it and Unblock the Notifications