Puttanna: ಕಾಂಗ್ರೆಸ್ ಅಭ್ಯರ್ಥಿ ಪಕ್ಷಾಂತರಿ ಪುಟ್ಟಣ್ಣಗೆ ರಾಜಾಜಿನಗರ ಮತದಾರರು ಕೈ ಹಿಡಿಯುವುರೇ?
ಬೆಂಗಳೂರು ಮಾರ್ಚ್ 30: ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ಶಿಕ್ಷಕರ ಕ್ಷೇತ್ರಗಳ ಸಮಸ್ಯೆಯತ್ತ ಗಮನ ಹರಿಸಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಕಾಂಗ್ರೆಸ್‌ನಿಂದ ರಾಜಾಜಿನಗರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರಿನಲ್ಲಿ 1966ರಲ್ಲಿ ಜನಿಸಿದ ಪುಟ್ಟಣ್ಣನವರು ಜನತಾದಳ (ಜಾತ್ಯಾತೀತ) (ಜೆಡಿಎಸ್) ಪಕ್ಷದಿಂದ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾಗಿ, ಜ್ಞಾನಭಾರತಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದಾರೆ.

ಅವರು 1999ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸಾಮಾನ್ಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದರು. ಮಾರನೇ ವರ್ಷ 2000ರಲ್ಲೂ ಸಹ ಮತ್ತದೇ ಕ್ಷೇತ್ರದಿಂದ ಅವರು ಎರಡನೇ ಬಾರಿಗೆ ಆಯ್ಕೆಯಾದರು. 2001 ಕಾಮೆಡಿಕ್ ಕೌನ್ಸಿಲ್ ಸದಸ್ಯರಾದರು. 2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾದರು. ಬಳಿಕ ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕರಾಗಿಯು ಕೆಲ ಕಾಲ ಕೆಲಸ ಮಾಡಿದ ಅನುಭವ ಅವರಿಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದ ಪುಟ್ಟಣ್ಣನವರು 2006ರಲ್ಲಿ ವಿಧಾನಪರಿಷತ್‌ನಿಂದ ಆಯ್ಕೆಯಾದರು. 2009ರಲ್ಲಿ ಉಪಸಭಾಪತಿಯಾಗಿ (ಹಂಗಾಮಿ) ಅವರನ್ನು ಆರಿಸಲಾಯಿತು. ಹೀಗೆ ತಮಗೆ ದೊರೆತ ಪ್ರತಿ ಕ್ಷೇತ್ರದಲ್ಲೂ ಅವರು ಉತ್ತಮ ಕಾರ್ಯ ಮಾಡಿದ್ದಾರೆ.
2014ರಲ್ಲಿ ಮೂರನೇ ಬಾರಿಗೆ ಅವರು ವಿಧಾನ ಪರಿಷತ್ ಸದಸ್ಯರಾಗಿ ಮತ್ತು ಎರಡನೇ ಬಾರಿಗೆ ಉಪಸಭಾಪತಿಯಾಗಿ ಜವಾಬ್ದಾರಿ ನಿರ್ವಹಿಸಿದರು. 2020ರವರೆಗೂ ಜೆಡಿಎಸ್ ನಲ್ಲಿದ್ದುಕೊಂಡಿದ್ದರು. ಅಷ್ಟೋತ್ತಿಗಾಗಲೇ ಜೆಡಿಎಸ್‌ನಲ್ಲಿ ಒಂದಷ್ಟು ಬದಲಾವಣೆಗಳು ಆಗತೊಡಗಿದವು. ಈ ಸಂಬಂಧ ಪಕ್ಷದೊಳಗಿನ ಆಗು ಹೋಗುಗಳ ಬಗ್ಗೆ ಬಹಿರಂಗವಾಗಿಯೇ ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ
ಅದಾದ ಬಳಿಕ ಜೆಡಿಎಸ್‌ನ ಒಂದಷ್ಟು ಶಾಸಕರು ಬಿಜೆಪಿಗೆ ಹೋಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇವೆಲ್ಲಗಳನ್ನು ಗಂಭೀರವಾಗಿ ಪರಿಗಣಿಸಿದ ಜೆಡಿಎಸ್ ನ ಎಚ್‌ಡಿ ಕುಮಾರಸ್ವಾಮಿ ಅವರು ಎಂಎಲ್‌ಸಿ ಪುಟ್ಟಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸಿದರು. ನಂತರ ಪುಟ್ಟಣ್ಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.
ಬಿಜೆಪಿಯು ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಶಿಕ್ಷಕರ ಕ್ಷೇತ್ರದತ್ತ ಗಮನ ಹರಿಸಿಲ್ಲ ಎಂದು ಇತ್ತೀಚೆಗಷ್ಟೇ ಅವರು ಬಿಜೆಪಿ ತೊರೆದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
'ಕೇಸರಿ' ಬಿಟ್ಟು 'ಕೈ' ಹಿಡಿದ ಪುಟ್ಟಣ್ಣ
ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವನು. ಸದ್ಯ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಶಿಕ್ಷಣ ಕ್ಷೇತ್ರ, ಶಿಕ್ಷಕರ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. ನಾನು ಏನು ಅಂದುಕೊಂಡು ಬಿಜೆಪಿ ಸೇರಿದ್ದೇನೋ ಅದು ಆಗಲಿಲ್ಲ. ಬಿಜೆಪಿಯಲ್ಲಿ ಸತ್ತಂತಹ ಪರಿಸ್ಥಿತಿ ಇತ್ತು. ಸರ್ಕಾರ ಶಿಕ್ಷಣ ಕ್ಷೇತ್ರದ ಯಾವ ಸಮಸ್ಯೆಯನ್ನೂ ಬಗೆಹರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಿರುವುದಾಗಿ ಅವರು ತಿಳಿಸಿದರು.
ಪುಟ್ಟಣ್ಣ ಪ್ರತಿಸ್ಪರ್ಧಿಗಳು ಇವರು?
ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿದ್ದು, ದಿನಾಂಕವು ಘೋಷಣೆ ಆಗಿದೆ. ಪಕ್ಷಕ್ಕೆ ಸೇರಿದ ಪುಟ್ಟಣ್ಣನವರಿಗೆ ಕಾಂಗ್ರೆಸ್ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಟಿಕೆಟ್ ನೀಡಿದೆ. ಪುಟ್ಟಣ್ಣನವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಟಿಕೆಟ್ ನೀಡಿದ್ದರಿಂದ ರಾಜಾಜಿನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವ್ಯ ನರಸಿಂಹಮೂರ್ತಿಗೆ ನಿರಾಸೆಯಾಗಿದೆ. ಇತ್ತ ಆಮ್ ಆದ್ಮಿ ಪಕ್ಷದಿಂದ ಬಿಟಿ ನಾಗೇಶ್ ಅವರು ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಜೆಡಿಎಸ್‌ನಿಂದ ಎಚ್.ಎಂ.ಕೃಷ್ಣಮೂರ್ತಿಯವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಯಾರಿಗೆ ರಾಜಾಜಿನಗರ ಒಲಿಯುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications