ಗೌರಿ ಲಂಕೇಶ್ ಸಾವಿಗೆ ಕಂಬನಿ ಮಿಡಿದ ಮಾನವೀಯತೆ
ಬೆಂಗಳೂರು, ಸೆಪ್ಟೆಂಬರ್ 06 : ಪತ್ರಕರ್ತೆ ಗೌರಿ ಲಂಕೇಶ್ ಅವರ ವಿಚಾರಧಾರೆ, ಸೈದ್ಧಾಂತಿಕ ನಿಲುವುಗಳೇನೇ ಇರಲಿ, ಸಮಾಜ ಒಪ್ಪಲಿ ಒಪ್ಪದಿರಲಿ, ಅವರ ಬರ್ಬರ ಹತ್ಯೆಗೆ ಭಾರತದಾದ್ಯಂತ ಮಾತ್ರವಲ್ಲ ಅಮೆರಿಕದಿಂದಲೂ ಆಕ್ರೋಶ ವ್ಯಕ್ತವಾಗಿದೆ. ಮಾನವೀಯತೆಯ ಹತ್ಯೆಯಾಗಿದೆ!
ದಿಟ್ಟ ಪತ್ರಕರ್ತೆಯಾಗಿ, ಭಾರತದ ಸ್ವತಂತ್ರ ನಾಗರಿಕಳಾಗಿ ಅವರು ತಮ್ಮ ನಿಲುವಿಗೆ ತಕ್ಕಂತೆ ವಸ್ತುನಿಷ್ಠವಾಗಿ ಅಭಿಪ್ರಾಯ ಮಂಡಿಸುತ್ತಿದ್ದರು. ಅವರ ನಿಲುವುಗಳು ಅಜೀರ್ಣವಾಗದಿದ್ದರೆ ಕೋರ್ಟು ಕಚೇರಿಗಳು ಇದ್ದೇ ಇವೆ. ಆದರೆ, ಅವರ ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇರಲಿಲ್ಲ.
ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ರಾಜನಾಥ್ ಸಿಂಗ್ ಸೇರಿದಂತೆ ರಾಷ್ಟ್ರಮಟ್ಟದ ರಾಜಕಾರಣಿಗಳು, ಎಡಪಂಥೀಯ ವಿಚಾರಧಾರೆಯಿರುವ ಸಂಘಟನೆಗಳು, ಪರಿಸರವಾದಿಗಳು, ಲೇಖಕರು, ಕಡೆಗೆ ಸನಾತನವಾದಿ ಸಂಘಟನೆ ಕೂಡ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.
ಈ ಹತ್ಯೆಯ ಹಿಂದಿರುವ ವ್ಯಕ್ತಿ ಅಥವಾ ಸಂಘಟನೆ ಯಾವುದು? ಅದರ ಉದ್ದೇಶವೇನಿತ್ತು? ಸೈದ್ಧಾಂತಿಕ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆಯಾ ಅಥವಾ ವೈಯಕ್ತಿಕವಾ? ಈ ಹತ್ಯೆಗೆ ಸಂಚನ್ನು ಮೊದಲೇ ಮಾಡಲಾಗಿತ್ತಾ? ಇತ್ಯಾದಿ ಪ್ರಶ್ನೆಗಳನ್ನು ಬಗೆದು ಚಿದಂಬರ ರಹಸ್ಯವನ್ನು ಭೇದಿಸುವ ಜವಾಬ್ದಾರಿಯನ್ನು ರಾಜ್ಯ ಪೊಲೀಸ್ ಇಲಾಖೆ ಹೊತ್ತಿದೆ.
ಕೇರಳದಲ್ಲಿ, ತಮಿಳುನಾಡಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ಕೂಡ ಭಾರೀ ಪ್ರತಿಭಟನೆಗಳಾಗುತ್ತಿವೆ. ದೇಶದಲ್ಲಿ ಎಡಪಂಥೀಯ ವಿಚಾರವಾದಿಗಳು ಮಾತ್ರವಲ್ಲ ಬಲಪಂಥೀಯ ಬುದ್ಧಿಜೀವಿಗಳನ್ನು ಕೂಡ ಹೊಸಕಿಹಾಕಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಹತ್ಯೆಗಳ ಸರಣಿಯೇ ಮುಂದುವರಿದಿದೆ.
ಶೋಕಸಾಗರದಲ್ಲಿ ಮುಳುಗಿದ ಬಂಧುಗಳು, ಹೆಗಲಿಗೆ ಹೆಗಲಾಗಿದ್ದ ಸ್ನೇಹಿತರು, ಬಂಧುಗಳು, ಸಹಸ್ರಾರು ನಾಗರಿಕರು, ರಾಜಕಾರಣಿಗಳು, ಪತ್ರಕರ್ತರ ಸಮ್ಮುಖದಲ್ಲಿ, ಪೊಲೀಸ್ ಗೌರವದೊಂದಿಗೆ, ಯಾವುದೇ ಸಂಪ್ರದಾಯವಿಲ್ಲದೆ ಮಣ್ಣಲ್ಲಿ ಮಣ್ಣಾಗಿದ್ದಾರೆ ಗೌರಿ ಲಂಕೇಶ್. ಅವರ ಆತ್ಮಕ್ಕೆ ಶಾಂತಿ ಸಿಗಲಿ. [ಚಿತ್ರಗಳು : ಪಿಟಿಐ]

ಹತ್ಯೆ ಯಾರೇ ಮಾಡಿರಲಿ ಅವರನ್ನು ಬಿಡುವುದಿಲ್ಲ
ಗೌರಿ ಲಂಕೇಶ್ ಹತ್ಯೆ ಯಾರೇ ಮಾಡಿರಲಿ ಅವರನ್ನು ರಾಜ್ಯ ಪೊಲೀಸರು ಪತ್ತೆ ಹಚ್ಚೇಹಚ್ಚುತ್ತಾರೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಸ ಬಯಲು ರಂಗಮಂದಿರಕ್ಕೆ ಆಗಮಿಸಿ ಗೌರಿಯವರಿಗೆ ಅಂತಿಮ ನಮನ ಸಲ್ಲಿಸಿದರು.

ಕೇರಳದಲ್ಲೂ ಗೌರಿ ಹತ್ಯೆಗೆ ಆಕ್ರೋಶ
ಗೌರಿ ಲಂಕೇಶ್ ಹತ್ಯೆಗೆ ಕರ್ನಾಟಕದ ಗಡಿಮೀರಿ ಆಕ್ರೋಶ ವ್ಯಕ್ತವಾಗುತ್ತಿದೆ. ಎಡಪಂಥೀಯ ವಿಚಾರಧಾರಿಗಳು ಹೆಚ್ಚಾಗಿರುವ ಕೇರಳದ ತಿರುವನಂತಪುರಂನಲ್ಲಿಯೂ ನೂರಾರು ಜನರು ಭಿತ್ತಿಪತ್ರಗಳನ್ನು ಹಿಡಿದು, ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇರಳದಾದ್ಯಂತ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದೆ.

ನಾನೂ ಗೌರಿ ಲಂಕೇಶ್
ಪ್ರಖರ ವಿಚಾರವಾದಿ, ಜ್ಯಾತ್ಯತೀತ ಚಿಂತಕಿಯಾಗಿದ್ದ ಗೌರಿ ಲಂಕೇಶ್ ಅವರ ಸಾವಿನ ನಂತರ I am also Gauri (ನಾನೂ ಗೌರಿ) ಎಂಬ ಚಳವಳಿ ಸಾಮಾಜಿಕ ತಾಣದಲ್ಲಿ ಶುರುವಾಗಿದೆ, ಮೌನ ಪ್ರತಿಭಟನೆ ಆರಂಭವಾಗಿದೆ. ಗೌರಿಯವರಿಗೆ ಅಂತಿಮ ನಮನ ಸಲ್ಲಿಸುವಾಗ ಗೌರಿಯವರ ಅಭಿಮಾನಿಗಳು ಜಮಾಯಿಸಿ ಮೌನವಾಗಿಯೇ ತಮ್ಮ ಆಕ್ರೋಶ ಹೊರಹಾಕಿದರು.

ಗೌರಿ ಸಾವಿಗೆ ಲಂಕೇಶ್ ಕುಟುಂಬದ ಕಂಬನಿ
ಲಂಕೇಶ್ ಕುಟುಂಬದಲ್ಲಿ ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳಿದ್ದಿರಬಹುದು, ಆದರೆ ಗೌರಿಯವರ ಹತ್ಯೆ ಇಡೀ ಕುಟುಂಬವನ್ನು ತಲ್ಲಣಗೊಳಿಸಿದೆ. ಅಂತಿಮ ನಮನದ ಸಂದರ್ಭದಲ್ಲಿ ಕಂಬನಿ ಮಿಡಿಯುತ್ತಿರುವ ಅಕ್ಕ ಕವಿತಾ ಲಂಕೇಶ್, ತಾಯಿ ಇಂದಿರಾ ಲಂಕೇಶ್ ಮತ್ತು ತಮ್ಮ ಇಂದ್ರಜಿತ್ ಲಂಕೇಶ್. ಉಮಾಶ್ರೀಯವರು ಕೂಡ ನಮನ ಸಲ್ಲಿಸಿದರು.

ಎಂಥ ನಿರ್ದಯಿಯನ್ನೂ ಕಲಕುವಂತಿತ್ತು
ಎಲ್ಲಿಯ ಸಾಲುಮರದ ತಿಮ್ಮಕ್ಕ ಎಲ್ಲಿಯ ಗೌರಿ ಲಂಕೇಶ್? ಕಪ್ಪು ಹೆಲ್ಮೆಟ್ ಧರಿಸಿದ್ದ ಅಪರಿಚಿತ ಆಗಂತುಕನಿಂದ ಬರ್ಬರವಾಗಿ ಹತ್ಯೆಗೀಡಾದ ಗೌರಿ ಲಂಕೇಶ್ ಅವರಿಗೆ ನ್ಯಾಯ ಸಿಗಬೇಕೆಂದು ನೂರಾರು ಮರಗಳ ಸಾಕಿಸಲುಹಿದ ತಿಮ್ಮಕ್ಕ ಕೂಡ ಭಿತ್ತಿಪತ್ರ ಹಿಡಿದು ಅಂತಿಮ ನಮನ ಸಲ್ಲಿಸಿದ್ದು ಎಂಥ ನಿರ್ದಯಿಯನ್ನೂ ಕಲಕುವಂತಿತ್ತು.

ಗೌರಿಗೆ ಇಂಥ ಸಾವು ಬರಬಾರದಿತ್ತು
ಟೌನ್ ಹಾಲ್ ಮುಂದೆ ಬುಧವಾರ ಜನಸಾಗರವೇ ನೆರೆದಿತ್ತು. ಅಭಿಮಾನಿಗಳು, ಸ್ನೇಹಿತರು, ಬಂಧುಗಳು ನೆರೆದು ಹತ್ಯೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ನಾನಾ ವಿಧವಾದ ಘೋಷಣೆಗಳನ್ನು ಬರೆದುಕೊಂಡಿದ್ದ ಭಿತ್ತಿಪತ್ರಗಳನ್ನು ಹಿಡಿದು ಮುಗಿಲು ಮುಟ್ಟುವಂತೆ ಧಿಕ್ಕಾರ ಕೂಗಿದರು. ನ್ಯಾಯ ಎಲ್ಲಿದೆ?

ಕೋಮುವಾದಿಗಳ ವಿರುದ್ಧ ಘೋಷಣೆ
ಪ್ರತಿಭಟನೆಯಲ್ಲಿ ಸಾಹಿತಿಗಳು, ಸಂಶೋಧಕರು, ವಿಚಾರವಾದಿಗಳು, ಬುದ್ಧಿಜೀವಿಗಳು, ಕಲಾವಿದರು, ವಯಸ್ಸಾದವರು ಕೂಡ ಬಂದು ಗೌರಿ ಪರವಾಗಿ, ಕೋಮುವಾದಿಗಳ ವಿರುದ್ಧವಾಗಿ ಘೋಷಣೆಗಳನ್ನು ಕೂಗಿದರು. ಆದರೆ, ಇಂಥ ಪ್ರತಿಭಟನೆಗಳಿಂದ ಆಗುವ ಪ್ರಯೋಜನವಾದರೂ ಏನು? ಇದರಿಂದ ಯಾರಿಗೆ ಏನು ಲಾಭ?

ಹತ್ಯೆ ಲಂಕೇಶ್ ಕುಟುಂಬಕ್ಕೆ ನಂಬಲಾಗದ ಸತ್ಯ
ಗೌರಿ ಲಂಕೇಶ್ ಅವರ ಬರ್ಬರ ಹತ್ಯೆ ಲಂಕೇಶ್ ಕುಟುಂಬದ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ತಮಗೆ ಪ್ರಾಣ ಬೆದರಿಕೆ ಇತ್ತೆಂದು ಕೆಲವರಿಗೆ ಅವರು ಹೇಳಿಕೊಂಡಿದ್ದರೂ ಈ ರೀತಿ ಹತ್ಯೆಯಾಗಿರುವುದು ನಂಬಲಾಗದ ಸತ್ಯವಾಗಿದೆ. ಚಿಕ್ಕಮ್ಮನನ್ನು ಕಳೆದುಕೊಂಡು ರೋಧಿಸುತ್ತಿರುವ ಕವಿತಾ ಲಂಕೇಶ್ ಅವರ ಮಗಳು.












Click it and Unblock the Notifications