Bengaluru Kambala: ಅರಮನೆ ಮೈದಾನದಲ್ಲಿ ಚಿನ್ನ ಗೆದ್ದ 'ಕಾಂತಾರ' ಕೋಣಗಳು
ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಶನಿವಾರ, ಭಾನುವಾರ ಬೆಂಗಳೂರಿಗರು ಕರ್ನಾಟಕ ಕರಾವಳಿ ಭಾಗದ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಕಣ್ತುಂಬಿಕೊಂಡರು. ಕರಾವಳಿ ಭಾಗದ ಖಾದ್ಯಗಳನ್ನು ಸವಿದರು.
ಎರಡು ದಿನಗಳು ನಡೆದ ಕಂಬಳದಲ್ಲಿ ಸುಮಾರು 200 ಜೋಡಿ ಕೋಣಗಳು ಭಾಗವಹಿಸಿದ್ದವು. ಕಂಬಳ ಕಾರ್ಯಕ್ರಮದ ಕೊನೆಯ ದಿನ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣಗಳು ಅರಮನೆ ಮೈದಾನದಲ್ಲಿ ಚಿನ್ನ ಗೆದ್ದುಕೊಂಡಿವೆ. ಆರು ವಿಭಾಗಗಳಲ್ಲಿ ಕಂಬಳ ನಡೆದಿದ್ದು, ಒಂದು ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿವೆ.

ಕಾಂತಾರ ಕೋಣಗಳ ಜೋಡಿಯಾದ ಅಪ್ಪು ಮತ್ತು ಕುಟ್ಟಿ, ಉಳಿದ ಜಾಕಿಗಳಿಗೆ ಕಠಿಣ ಹೋರಾಟ ನೀಡಿದರು ಮತ್ತು 155 ಮೀಟರ್ ಟ್ರ್ಯಾಕ್ ಮೂಲಕ ಓಡುವಾಗ 6 ಅಡಿವರೆಗೆ ನೀರು ಚಿಮ್ಮಿಸಿ ಪ್ರಶಸ್ತಿ ಗೆದ್ದುಕೊಂಡವು.
ಕಣೆ ಹಲಗೆ ವಿಭಾಗದಲ್ಲಿ ಚಿನ್ನ
ಬೋಳಂಬಳ್ಳಿ ಪರಮೇಶ್ವರ ಭಟ್ ಎಂಬುವರಿಗೆ ಸೇರಿದ ಈ ಕೋಣಗಳು ಮೂರನೇ ವರ್ಗದ 'ಕಣೆ ಹಲಗೆ' ವಿಭಾಗದಲ್ಲಿ ಗೆದ್ದಿದ್ದು, ಜೋಕಾಲಿಯನ್ನು ಮರದ ಹಲಗೆಯ ಮೇಲೆ ನಿಲ್ಲಿಸಿ ಕೆಸರು ಹಳಿಗಳಲ್ಲಿ ಎಮ್ಮೆಗಳು ಎಳೆದಾಡುವುದು ಇದರ ವಿಶೇಷ. ನೇಗಿಲು, ಹಿರಿಯ, ನೇಗಿಲು ಕಿರಿಯ, ಹಗ್ಗ, ಕಿರಿಯ, ಹಗ್ಗ ಹಿರಿಯ ಮತ್ತು ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಇನ್ನು ತಮ್ಮ ಕೋಣಗಳ ಸ್ಪರ್ಧೆಯನ್ನು ವೀಕ್ಷಿಸಲು ರಿಷಬ್ ಶೆಟ್ಟಿ ಬರಬೇಕು ಎಂದು ಬೋಳಂಬಳ್ಳಿ ಪರಮೇಶ್ವರ ಭಟ್ ಆಸೆಪಟ್ಟಿದ್ದರು. ಪ್ರಪಂಚಾದ್ಯಂತ ಕಂಬಳ ಜನಪ್ರಿಯವಾಗಲು ಅವರ ಕಾಂತಾರ ಸಿನಿಮಾ ಕಾರಣ ಎಂದು ಅಭಿಪ್ರಾಯಪಟ್ಟರು.
ಕಂಬಳದ ಮೊದಲ ದಿನ 2.3 ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಜಮಾಯಿಸಿದ್ದರು ಮತ್ತು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಕೂಟವನ್ನು ವೀಕ್ಷಿಸಲು ಜನ ಆಗಮಿಸಿದ್ದರು ಭಾನುವಾರದ ಅಂತ್ಯದ ವೇಳೆಗೆ ಇದು ಡಬಲ್ ಆಗಿದೆ.
ರಕ್ಷಿತ್ ಶೆಟ್ಟಿ, ಪೂಜಾ ಹೆಡ್ಗೆ, ಉಪೇಂದ್ರ, ರಮೇಶ್ ಅರವಿಂದ್ ಮತ್ತು ವಿವಿಧ ಪಕ್ಷಗಳ ರಾಜಕಾರಣಿಗಳು ಸಹ ಕಂಬಳದಲ್ಲಿ ಪಾಲ್ಗೊಂಡರು. ನಾಲ್ಕು ಲಕ್ಷಕ್ಕೂ ಅಧಿಕ ಜನಸಂದಣಿಯನ್ನು ನಿಯಂತ್ರಿಸಲು ಸ್ವಯಂಸೇವಕರು ಹರಸಾಹಸ ಪರಬೇಕಾಯಿತು.
ಹಲವಾರು ಮೈಕ್‌ಗಳಲ್ಲಿ ಕಾಮೆಂಟರಿ ಪ್ರತಿಧ್ವನಿಸಿದ ಕಾರಣ ಸ್ಪಷ್ಟವಾಗಿ ಕೇಳಿಸಲ್ಲ ಎಂದು ಆಯೋಜಕರ ವಿರುದ್ಧ ದೂರಿದರು. ಪ್ರವೇಶ ಉಚಿತವಾಗಿದ್ದರೂ, ಆಹಾರ ಮತ್ತು ಪಾನೀಯಗಳ ಬೆಲೆಗಳು ಮತ್ತು ಪಾರ್ಕಿಂಗ್ ಶುಲ್ಕಗಳು ದುಬಾರಿಯಾಗಿವೆ ಎಂದು ನಾಗರಿಕರು ದೂರಿದ್ದಾರೆ.












Click it and Unblock the Notifications