ಕೆನಡಾದಲ್ಲಿ ಚಂದನ್ ಕುಮಾರ್ ಸಾವು: 4 ದಿನದಲ್ಲಿ ಮೃತದೇಹ ಬೆಂಗಳೂರಿಗೆ, ಗೃಹ ಸಚಿವರಿಂದ ಟೆಕ್ಕಿ ಕುಟುಂಬಸ್ಥರ ಭೇಟಿ
ಬೆಂಗಳೂರು: ಕೆನಡಾದಲ್ಲಿ ಬೆಂಗಳೂರಿನ ನೆಲಮಂಗಲದ ಚಂದನ್ ಕುಮಾರ್ ಹತ್ಯೆ ನಡೆದಿದ್ದು, ಯಾವ ಕಾರಣಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಾಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವ ಅವರು ವಿಷಾಧ ವ್ಯಕ್ತಪಡಿಸಿದರು. ಜೊತೆಗೆ ಮೃತದೇಹವನ್ನು ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮೃತದೇಹ ವಾಪಸ್ ತರುವ ವಿಚಾರದಲ್ಲಿ ನಮ್ಮ ಇಂಡಿಯನ್ ಹೈಕಮಿಷನರ್ ಅವರು ಮಾತನಾಡಿದ್ದಾರೆ. ಅವರ ಮೃತ ದೇಹ ತರಲು ಇನ್ನು ಮೂರ್ನಾಲ್ಕು ದಿನ ಆಗಬಹುದು. ಮೃತ ದೇಹ ಬಂದಮೇಲೆ ಏನು ಗೌರವ ಸಮರ್ಪಣೆ ಮಾಡಬೇಕು ಮಾಡುತ್ತೇವೆ ಎಂದು ತಿಳಿಸಿದರು.

ಇಂದು ಗೃಹ ಸಚಿವರಿಂದ ಚಂದನ್ ಕುಟುಂಬಸ್ಥರ ಭೇಟಿ
ಚಂದನ್ ಕುಮಾರ್ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ಪ್ರತಿಭಾವಂತ ಯುವಕ. ಕೆನಡಾದ ಟೊರಾಂಟೊದಲ್ಲಿ ಹತ್ಯೆಯಾಗಿದ್ದು, ಆ ಬಗ್ಗೆ ತನಿಖೆಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಮೃತ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಧೈರ್ಯ ಭಗವಂತ ತುಂಬಲಿ. ತಂದೆ ತಾಯಿಗೆ ಒಬ್ಬನೇ ಮಗ. ಇಂದು ನಾನು ಅವರ ಕುಟುಂಬದವರನ್ನು ಭೇಟಿ ಮಾಡಲಿದ್ದೇನೆ ಎಂದರು.
ಚಂದನ್ ಹತ್ತೆ ನಿಜಕ್ಕೂ ಇದೊಂದು ಬೇಸರದ ಸಂಗತಿಯಾಗಿದೆ. ಈ ಯುವಕ ಕೆನಡಾದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಈ ರೀತಿ ಹತ್ಯೆ ಆಗಿರುವುದು ನಿಜಕ್ಕೂ ಬೇಸರ ತರಿಸಿದೆ. ಆ ದೇಶದ ಕಾನೂನು ವ್ಯವಸ್ಥೆ ಏನಿದೆ ಅದರ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಸಿಜೆ ರಾಯ್ ಪ್ರಕರಣ: ಡೈರಿಯಲ್ಲಿ ರಾಜಕಾರಣಗಳ ಹೆಸರು
ಸಿಜೆ ರಾಯ್ ಪ್ರಕರಣದ ತನಿಖೆಯ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸಿಜೆ ರಾಯ್ ಪ್ರಕರಣದ ತನಿಖೆ ನಡೆಯುತ್ತಿದೆ. ಅವರು ದುಬೈನಲ್ಲಿದ್ದರು. ಅನೇಕ ವಿಚಾರಗಳ ಬಗ್ಗೆ ಅಲ್ಲಿಂದಲೂ ಮಾಹಿತಿ ಪಡೆಯಬೇಕಿದೆ. ಇನ್‌ಕಂ ಟ್ಯಾಕ್ಸ್ ನ ವಿಚಾರಗಳು ಕೂಡ ಇದೆ. ಇದೆಲ್ಲವನ್ನು ಕೂಡ ನೋಡಿ ತನಿಖೆ ಮಾಡಿ ಆನಂತರ ಬರೆದುಕೊಡುತ್ತಾರೆ.
ಡೆತ್ ನೋಟ್ ಯಾವುದು ಪತ್ತೆ ಆಗಿಲ್ಲ. ಡೈರಿ ತೆಗೆದುಕೊಂಡಿದ್ದಾರೆ. ತನಿಖೆ ಹಂತದಲ್ಲಿರುವ ಕಾರಣ ಎಲ್ಲವನ್ನು ರಿವೀಲ್ ಮಾಡಲು ಆಗುವುದಿಲ್ಲ. ಐಟಿ ಅಧಿಕಾರಿಗಳ ವಿಚಾರಣೆ ಎಸ್ಐಟಿಗೆ ಬಿಟ್ಟಿದ್ದು. ಸಿಗುವ ಮಾಹಿತಿ ಆಧಾರದ ಮೇಲೆ ತನಿಖೆ ಸಾಗುತ್ತದೆ. ಇದೇ ರೀತಿ ತನಿಖೆ ನಡೆಸಿ ಎಂದು ಹೇಳಲು ಆಗದು. ಡೈರಿಯಲ್ಲಿ ಕೆಲ ರಾಜಕಾರಣಿಗಳ ಹೆಸರು ಉಲ್ಲೇಖ ಆಗಿದ್ದು, ಆ ಬಗ್ಗೆ ವರದಿ ಬಂದ ಬಳಿಕ ಮುಂದೇನು ಎಂಬುದು ಗೊತ್ತಾಗಲಿದೆ ಎಂದರು.
ನಕ್ಸಲ್ ಪುನರ್ವಸತಿ ಬಗ್ಗೆ ಸಭೆ ಕುರಿತು ಮಾತನಾಡಿದ ಅವರು, ಈಗಾಗಲೇ ನಾವು ಮೂರು ಪ್ರಾಸಿಕ್ಯೂಟರ್ಸ್ ನೇಮಕ ಮಾಡಬೇಕು ತೀರ್ಮಾನ ಮಾಡಿದ್ದೇವೆ. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿಯಲ್ಲಿ ನೇಮಕ ಮಾಡಬೇಕೆಂದು ನಿರ್ಧರಿಸಿದ್ದೇವೆ. ಆದಷ್ಟು ಬೇಗ ಅವರ ಕೇಸ್‌ಗಳು ಬಗೆಹರಿಯಬೇಕು.
ನಕ್ಸಲ್ ಶರಣಾಗತಿ ವೇಳೆ ಒಂದಷ್ಟು ಷರತ್ತು ಹಾಕಿದ್ದರು. ಈಗ ನಾವು ಪ್ರಸಿಕ್ಯೂಟರ್ ನೇಮಿಸಿ, ಕೇಸ್ ಗಳನ್ನು ಬೇಗ ಇತ್ಯರ್ಥ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ನೆನ್ನೆ ಮುಖ್ಯಮಂತ್ರಿಗಳು ಆದೇಶದನ್ವಯ ಮೂರು ಜನ ಪ್ರಾಸಿಕ್ಯೂಟರ್ ನೇಮಕ ಮಾಡುತ್ತೇವೆ. ಅವರು ಅಲ್ಲೇ ಹಾಜರಾಗಿ ಕೇಸ್ ಗಳನ್ನ ವಾಪಸ್ ಪಡೆಯುವ ಬಗ್ಗೆ ಕ್ರಮ ವಹಿಸುತ್ತಾರೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಡಿಕೆಶಿ ದೆಹಲಿಗೆ ಹೋಗಬಾರದಾ?
ಸಿಎಂ ವಿಚಾರವನ್ನು ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ಭೇಟಿಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ದೆಹಲಿಗೆ ಡಿಸಿಎಂ ಹೋಗಬಾರದಾ ಅವರಿಗೆ ಸಭೆಗಳು ಇರುತ್ತವೆ. ಅವರು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ದೊಡ್ಡ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಅದಕ್ಕಾಗಿ ದೆಹಲಿಗೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಹೆಚ್ಚು ಮಾತನಾಡಲು ಅವರು ಮುಂದಾಗಲಿಲ್ಲ.












Click it and Unblock the Notifications