ವರದಕ್ಷಿಣೆ ಕಿರುಕುಳಕ್ಕೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ, ಪತಿ ನಾಪತ್ತೆ
ಬೆಂಗಳೂರು, ಫೆಬ್ರವರಿ 17: ಮದುವೆಯಾದ ಒಂದೂವರೆ ವರ್ಷಗಳ ಸಂಸಾರದಲ್ಲಿ ಬರೀ ನೋವು ಕಂಡಿದ್ದ ಹಿನ್ನಲೆ ಗಾಯಕಿ ಸುಶ್ಮಿತಾ ಅವರು ತಮ್ಮ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕನ್ನಡ ಸಿನಿಮಾ, ಧಾರಾವಾಹಿ, ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ ಸುಶ್ಮಿತಾ ಅವರು ತಮ್ಮ ಡೆತ್ ನೋಟ್ ನಲ್ಲಿ ಪತಿ ಹಾಗೂ ಅವರ ಕುಟುಂಬದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.
ಸುಗಮ ಸಂಗೀತ ಗಾಯಕಿಯಾಗಿ, ಚಲನಚಿತ್ರ, ಧಾರವಾಹಿಗಳ ಹಿನ್ನಲೆಯ ಗಾಯಕಿಯಾಗಿ ಸುಶ್ಮಿತಾ ರಾಜೇ ಗುರುತಿಸಿಕೊಂಡಿದ್ದರು. ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಗಂಡ ಶರತ್ ಹಾಗೂ ಆತನ ಮನೆಯ ಕಿರುಕುಳಕ್ಕೆ ಬೇಸತ್ತು ಮಾಳಗಾಳದಲ್ಲಿರುವ ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಸುಶ್ಮಿತಾಗೆ ಆಕೆಯ ಗಂಡ, ಅತ್ತೆ ಕಿರುಕುಳ ನೀಡುತ್ತಿದ್ದರು ಎಂಬುದರ ಬಗ್ಗೆ ಸುಶ್ಮಿತಾ ಬರೆದಿರುವ ಡೆತ್ ನೋಟ್ ನಲ್ಲಿ ವಿವರಗಳಿವೆ. ಸದ್ಯ ಈ ವಿವರಗಳನ್ನು ಮುಂದಿಟ್ಟುಕೊಂಡು ಸುಶ್ಮಿತಾ ಪತಿ ಶರತ್ ಹಾಗೂ ಅವರ ಮನೆಯವರನ್ನು ಬಂಧಿಸುವಂತೆ ಸುಶ್ಮಿತಾ ಸೋದರ ಸಚಿನ್ ಆಗ್ರಹಿಸಿದ್ದಾರೆ. ಸದ್ಯ ಸುಶ್ಮಿತಾ ಆತ್ಮಹತ್ಯೆ ಬಳಿಕ ಆಕೆ ಪತಿ ಶರತ್ ನಾಪತ್ತೆಯಾಗಿದ್ದು, ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿದ್ದ ಸುಶ್ಮಿತಾ
ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿದ್ದ ಸುಶ್ಮಿತಾ ಅವರ ಸಾವಿಗೆ ಆಕೆಯ ಪತಿ ಹಾಗೂ ತಾಯಿ ಕಾರಣ ಎಂದು ಸುಶ್ಮಿತಾ ಮನೆಯವರು ಪೊಲೀಸರಿಗೆ ದೂರಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಬಗ್ಗೆ ಕೊನೆಗಳಿಗೆ ತನಕ ಯಾರಲ್ಲೂ ನೋವು ತೋಡಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಮಾಳಗಾಳದ ಮನೆಯಲ್ಲಿ ನೇಣಿಗೆ ಶರಣಾಗುವ ಮುನ್ನಾ
ಮಾಳಗಾಳದ ಮನೆಯಲ್ಲಿ ನೇಣಿಗೆ ಶರಣಾಗುವ ಮುನ್ನಾ, ಡೆತ್ ನೋಟ್ ಬರೆದಿರುವ ಸುಶ್ಮಿತಾ, ತಮ್ಮ ಸೋದರ ಸಚಿನ್ ಮೊಬೈಲಿಗೆ ಡೆತ್ ನೋಟ್ ವಾಟ್ಸಾಪ್ ಮಾಡಿದ್ದಾರೆ. ಈ ಸಂದೇಶವನ್ನು ತಪ್ಪದೇ ಅಮ್ಮನಿಗೆ ತೋರಿಸು ಮರೆಯಬೇಡ ಎಂದು ಕೊನೆಯಲ್ಲಿ ಬರೆದಿದ್ದಾರೆ. ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟವಿಲ್ಲ, ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ
ಅಮ್ಮ ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರ ಹಿಂಸೆ ಕೊಡುತ್ತಿದ್ದರು. ಮಾತೆತ್ತಿದ್ರೆ ಮನೆ ಬಿಟ್ಟು ಹೋಗು ಅಂತಿದ್ರು. ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ಮನೇ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣರಾಗಿರುತ್ತಾರೆ. ಎಷ್ಟು ಬೇಡಿಕೊಂಡು ಕಾಲು ಹಿಡಿದ್ರು ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ ಎಂದಿದ್ದಾರೆ.

ಮದುವೆಯಾದಾಗಿನಿಂದ ಇದೆ ರೀತಿ ಹಿಂಸೆ ಅಮ್ಮ
ಮದುವೆಯಾದಾಗಿನಿಂದ ಇದೆ ರೀತಿ ಹಿಂಸೆ ಅಮ್ಮ. ಯಾರ ಹತ್ತಿರಾನು ಹೇಳಿಕೊಂಡಿರಲಿಲ್ಲ. ನನ್ನನ್ನು ನಮ್ಮ ಊರಿನಲ್ಲಿ ಮಣ್ಣು ಮಾಡಿ. ಅಥವಾ ಸುಡುವ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ಇಲ್ಲವಾದ್ರೇ, ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮ ಮಿಸ್ ಯು. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನು ಚೆನ್ನಾಗಿ ನೋಡಿಕೋ. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದು ಪತ್ರದಲ್ಲಿ ಸುಶ್ಮಿತಾ ಬರೆದಿದ್ದಾರೆ.











Click it and Unblock the Notifications