ಕನ್ನಡ ಸಾಹಿತ್ಯ ಸಮ್ಮೇಳನ ವಿವಾದ: ಉತ್ತರ ಕೊಡಲು ಆಗದೆ ವೈಯಕ್ತಿಕ ಮಾನಹಾನಿಗೆ ಯತ್ನ- ಬಿಳಿಮಲೆ
ಬೆಂಗಳೂರು, ಡಿ. 30: ಮುಂದಿನ ತಿಂಗಳು ನಡೆಯಲಿರುವ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಪದೇ ಪದೇ ವಿವಾದಗಳಿಗೆ ಒಳಗಾಗುತ್ತಲೇ ಇದೆ. ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯ ಮತ್ತು ಮಹಿಳಾ ಲೇಖಕಿಯರಿಗೆ ಆದ್ಯತೆ ನೀಡಿಲ್ಲ ಎಂಬ ಆರೋಪ ಈಗ ವೈಯಕ್ತಿಕ ಮಟ್ಟಕ್ಕೆ ಬಂದು ನಿಂತಿದೆ.
ಜನ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ದನಿಗೂಡಿಸಿದ್ದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿ ವೈಯಕ್ತಿಕ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಇದೊಂದು ಹಾಸ್ಯಾಸ್ಪದ ಎದಂದು ಹೇಳಿದ್ದು, ಆರೋಪ ಸಾಬೀತು ಪಡಿಸುವಂತೆ ಸವಾಲ್ ಹಾಕಿದ್ದಾರೆ.
"ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಶಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ದನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ" ಎಂದು ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮುಂದುವರಿದು, "ಇದರ ಹೊರತಾಗಿ ನಾನು ಜೋಶಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ" ಎಂದಿದ್ದಾರೆ.
"ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಅವರು ಪೆಂಡಾಲ್ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರು ಅದನ್ನು ಸಾಬೀತು ಪಡಿಸಬೇಕು, ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ" ಎಂದು ಸವಾಲು ಹಾಕಿದ್ದಾರೆ.
"ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್ ಜೋಶಿಯವರ ಮಾತುಗಳೇ ಸಾಕ್ಷಿ.
ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ" ಎಂದು ಎಂದು ಮತ್ತೊಮ್ಮೆ ಜನ ಸಾಹಿತ್ಯ ಸಮ್ಮೇಳನದ ತುರ್ತಿನ ಬಗ್ಗೆ ಮಾತನಾಡಿದ್ದಾರೆ.

*ಹಾಗಾದರೆ, ಮಹೇಶ್ ಜೋಶಿ ಹೇಳಿದ್ದೇನು*
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಹೇಶ ಜೋಶಿ, ಲೇಖಕ ಪುರುಷೋತ್ತಮ ಬಿಳಿಮಲೆ ಅವರು ದೂರವಾಣಿ ಕರೆ ಮಾಡಿ, "ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಂಡಾಲ್ ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಕೊಡಿಸಿ ಎಂದು ಕೇಳಿದ್ದರು. ಅದಕ್ಕೆ ನಾನು ಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಅದು ನನ್ನ ಕ್ಷೇತ್ರವಲ್ಲ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡಿರುವ ಪುರುಷೋತ್ತಮ ಬಿಳಿಮಲೆ ಅವರು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದರು.
*ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಾದಗಳ ಆರಂಭ*
ಮುಂದಿನ ವರ್ಷದ ಜನವರಿ 6 ರಿಂದ 8 ರವರೆಗೆ ನಡೆಯಲಿರುವ 86 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಮತ್ತು ಪ್ರಮುಖ ಅಧಿವೇಶನಗಳಲ್ಲಿ ಮುಸ್ಲಿಂ ಲೇಖಕರು ಮತ್ತು ಮಹಿಳಾ ಲೇಖಕರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಪ್ರತಿಭಟನೆಯ ಸಂಕೇತವಾಗಿ ಜನವರಿ 8 ರಂದು ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಪ್ರಗತಿಪರ ಸಾಹಿತಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಜನವರಿ 8 ರಂದು ಜನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.












Click it and Unblock the Notifications