ಬೆಂಗಳೂರು:ಪಂಪ ಮಹಾಕವಿ ರಸ್ತೆ ಹೆಸರು ಬದಲಿಸಲು ಕಸಾಪ ಸಜ್ಜು
ಬೆಂಗಳೂರು ಸೆಪ್ಟಂಬರ್ 11: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಮುಂದಿರುವ ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಚಿಂತನೆ ನಡೆಸಿರುವ ಪರಿಷತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಸಿದ್ಧತೆ ನಡೆಸಿದೆ.
ಮಿಂಟೋ ಆಸ್ಪತ್ರೆಯಿಂದ ಆರಂಭವಾಗುವ ಪಂಪ ಮಹಾಕವಿ ರಸ್ತೆ ನ್ಯಾಷನಲ್ ಕಾಲೇಜುವರೆಗೂ ಇದೆ. ಈ ರಸ್ತೆಯಲ್ಲೇ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಇದೆ. ಮಿಂಟೋ ಆಸ್ಪತ್ರೆಯಿಂದ ಮಕ್ಕಳ ಕೂಟವರೆಗಿನ ಅರ್ಧ ಕಿಲೋಮೀಟರ್ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಲು ಕಸಾಪ ಯೋಜನೆ ರೂಪಿಸುತ್ತಿದೆ. ಈ ಅರ್ಧ ಕಿಲೋ ಮೀಟರ್ ರಸ್ತೆ ಹೆಸರು ಬದಲಿಸಿ, ಕನ್ನಡ ಕಂಪು ಪಸರಿಸಲು ಕಸಾಪ ಚಿಂತನೆ ನಡೆಸಿದೆ.
ಪಂಪ ಮಹಾಕವಿ ಇಡೀ ರಸ್ತೆ ಹೆಸರು ಬದಲಾಣೆ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿರುವ ಮಕ್ಕಳ ಕೂಟದಿಂದ ಮಿಂಟೋ ಆಸ್ಪತ್ರೆವರೆಗಿನ ರಸ್ತೆ ಹೆಸರು ಬದಲಿಗೆ ವಾಸ್ತುಶಿಲ್ಪಿಗಳಿಗೆ ನೀಲನಕ್ಷೆ ಸಿದ್ಧಪಡಿಸಿಕೊಳ್ಳುಂತೆ ಪರಿಷತ್ತು ಸೂಚಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ.

ಹೆಸರು ಬದಲಿಗೆ ವಿವಿಧ ಸಂಘಟನೆಗಳ ಜತೆ ಚರ್ಚೆ; ಅರ್ಧ ಕಿಲೋ ಮೀಟರ್ ರಸ್ತೆಯ ಹೆಸರು ಬದಲಾವಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿರ್ಧಾರ ಕುರಿತಾಗಿ ವಿವಿಧ ಸಂಘಟನೆಗಳ ಜತೆ ಚರ್ಚಿಸಲಾಗುವುದು ಎಂದು ಪರಿಷತ್ತು ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಸಭೆಗೆ ಆಹ್ವಾನಿಸಿ ಸಹಕಾರಿ ಬ್ಯಾಂಕ್, ಸಂಸ್ಕೃತ ವಿಶ್ವವಿದ್ಯಾಲಯ, ಹಲವು ಬ್ಯಾಂಕ್‌ಗಳು, ಪೊಲೀಸ್ ಠಾಣೆ, ಮಿಂಟೋ ಕಣ್ಣಿನ ಆಸ್ಪತ್ರೆ ಸೇರಿದಂತೆ ಸ್ಥಳಿಯ ಅಭಿಪ್ರಾಯ ಪಡೆಯಲಾಗುವುದು. ನಂತರವೇ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಕನ್ನಡಮಯವಾಗುವುದು ಹೇಗೆ?; ಅರ್ಧ ಕಿಲೋ ಮೀಟರ್ ಹೆಸರು ಬದಲಿಸಿದ ನಂತರ ಈ ರಸ್ತೆಯಲ್ಲಿನ ಕಚೇರಿಗಳಿಗೆ ಬರುವ ಉದ್ಯೋಗಿಗಳ ವಾಹನಗಳ ನಿಲುಗಡೆಗೆ ಸೂಕ್ತ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಈರಸ್ತೆಯಲ್ಲಿ ನಾಡ ಧ್ವಜದ ಬಣ್ಣವಾದ ಹಳದಿ, ಕೆಂಪು ಬಣ್ಣಗಳ ದೀಪಾಲಂಕಾರ ಮಾಡಲಾಗುವುದು. ರಸ್ತೆಯಗಳ ಪಕ್ಕದಲ್ಲಿ ಕವಿಗಳ ಭಾವಚಿತ್ರ ಅಳವಡಿಕೆಗೆ ಚಿಂತನೆ ಇದೆ.
ರಸ್ತೆ ಪಕ್ಕ ಅಲಂಕಾರಿಕ ಗಿಡ ನೆಡುವುದು ಅಲ್ಲದೇ ಗೋಡೆಗಳು ಸಹ ಕನ್ನಡ ಅಕ್ಷರಗಳಿಂದ ಕಂಗೊಳಿಸುವಂತೆ ಮಾಡಲಾಗುವುದು. ಕನ್ನಡ ಭಾಷೆ, ಹಳಗನ್ನಡ, ಹೊಗನ್ನಡ ಸೊಬಗು ಬಿಂಬಿಸುವಂತೆ ಮಾಡಲಿದ್ದೇವೆ. ಈ ಮೂಲಕ ಬೆಂಗಳೂರಿಗೆ ಬರುವ ಪ್ರತಿ ಪ್ರವಾಸಿಗನಿಗೂ ಈ ರಸ್ತೆಯು ಕನ್ನಡ ಕಂಪು ಕಾಣುವಂತೆ ಮಾಡುವುದು ಸೇರಿದಂತೆ ಕನ್ನಡದ ಮೆರೆಗು ನೀಡುವ ಹಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಕಸಾಪ ಅಧ್ಯಕ್ಷರು ತಿಳಿಸಿದ್ದಾರೆ.

ನೀಲನಕ್ಷೆ ಸಿದ್ಧವಾದ ಮೇಲೆ, ಸ್ಥಳಿಯರ ಜತೆ ಚರ್ಚೆ, ಅಭಿಪ್ರಾಯ ಪಡೆದ ಮೇಲೆ ಸರ್ಕಾರ ಹಾಗೂ ಸಂಬಂಧಿಸಿ ಇಲಾಖೆಗಳಿಗೆ ರಸ್ತೆ ಬದಲಾವಣೆ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಪ್ರಸ್ತಾವನೆ ಸಲ್ಲಿಸಲಿದೆ.












Click it and Unblock the Notifications