ನಾಯಂಡಹಳ್ಳಿ ರಸ್ತೆಯ ಗುಂಡಿ ಮುಚ್ಚಲು ಗಿಡನೆಟ್ಟರು!
Recommended Video

ಬೆಂಗಳೂರು, ಅಕ್ಟೋಬರ್ 10 : ಬೆಂಗಳೂರು ನಗರದ ರಸ್ತೆಗಳನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಯಿತು. ಕನ್ನಡ ಒಕ್ಕೂಟದ ಕಾರ್ಯಕರ್ತರು ನಾಯಂಡಹಳ್ಳಿ ಸರ್ಕಲ್‌ನಲ್ಲಿನ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಕನ್ನಡ ಒಕ್ಕೂಟದ ಅಧ್ಯಕ್ಷರಾದ ಲಯನ್ ಜಯರಾಜ್ ನಾಯ್ಡು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ರಸ್ತೆಯ ಗುಂಡಿಗೆ ಈಗಾಗಲೇ ವಾಹನ ಸವಾರರು ಬಲಿಯಾದರೂ ಬಿಬಿಎಂಪಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ನಾಯಂಡನಹಳ್ಳಿ ಸರ್ಕಲ್‌ನಲ್ಲಿರುವ ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟ ಪ್ರತಿಭಟನಾನಿರತರು, ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರಸ್ತೆಯನ್ನು ದುರಸ್ಥಿ ಮಾಡಿ ಎಂದು ಒತ್ತಾಯಿಸಿದರು.
15 ದಿನದಲ್ಲಿ ಗುಂಡಿ ಮುಚ್ಚಲು ಗಡುವು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ್ದು, ನಗರದ ರಸ್ತೆಯ ಗುಂಡಿಗಳನ್ನು ಮುಚ್ಚಲು 15 ದಿನದ ಗಡುವು ನೀಡಿದ್ದಾರೆ.
'ನಿರಂತರ ಮಳೆಯಿಂದ ಗುಂಡಿ ಮುಚ್ಚುವ ಕಾರ್ಯ ಸ್ಥಗಿತವಾಗಿತ್ತು. ಇಂದು ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಬಿಬಿಎಂಪಿ, ಬಿಡಿಎ ಸೇರಿದಂತೆ ಎಲ್ಲಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. 15 ದಿನದಲ್ಲಿ ಗುಂಡಿ ಮುಚ್ಚಲು ಸೂಚಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications