ಕರಾಳ ನೆನಪು ಮರೆತು ಹೊಸ ಬದುಕಿಗೆ ಕಾಲಿಟ್ಟ ಕನ್ನಡ ಚಿತ್ರ ನಿರ್ಮಾಪಕ
ಬೆಂಗಳೂರು, ಡಿಸೆಂಬರ್ 28: ಅತ್ಯಾಚಾರ, ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದ ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಗೋವರ್ಧನ್ ಮೂರ್ತಿ ಈಗ ತಮ್ಮ ಬದುಕಿನ ಕಹಿನೆನಪು ಮರೆತು ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಿತ್ರ ನಿರ್ಮಾಪಕ ಗೋವರ್ಧನ ಮೂರ್ತಿ ಅವರ ವಿವಾಹ ಸರಳವಾಗಿ ದೇವಸ್ಥಾನವೊಂದರಲ್ಲಿ ಗುರುವಾರ ನಡೆಯಿತು. ನಂತರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಲಾಯಿತು.

ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾದ ಮಂಜುಳಾ ಅವರು ಕಾಂಗ್ರೆಸ್ಸಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಬಲ ನಾಯಕಿ ಎಂದೇ ಗುರುತಿಸಿಕೊಂಡಿದ್ದಾರೆ. ಇನ್ನು ಮಾದೇಸ ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರು ಬೇಡದ ವಿಷಯಗಳಿಗೆ ಸುದ್ದಿಯಾಗಿದ್ದವರು. ಈಗ ಸರಿ ದಾರಿ ಹಿಡಿದಿದ್ದಾರೆ.
ಶಿವರಾಜ್ ಕುಮಾರ್ ನಟನೆಯ 'ಮಾದೇಸ' ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರ ಮೇಲೆ ಸಹನಟ ವಿನೋದ್ ಎಂಬಾತನ ಮೇಲೆ ಗುಂಡು ಹಾರಿಸಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಕೊಚ್ಚಿಯಲ್ಲಿ ಬಂಧನಕ್ಕೊಳಗಾಗಿದ್ದರು. 2012ರಲ್ಲಿ ಈ ಕೇಸಿನಿಂದ ಖುಲಾಸೆಗೊಂಡರು.
ಇನ್ನೊಮ್ಮೆ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸರು ಬಂಧಿಸಿದ್ದರು.
ಆದರೆ, ಆರೋಪ ನಿರಾಧಾರವಾಗಿದ್ದು ಎಂದು ಪರಿಗಣಿಸಿದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಗೋವರ್ಧನ್ ಮೂರ್ತಿ ಅವರಿಗೆ ಶುಭ ಸುದ್ದಿ ಕೊಟ್ಟಿತ್ತು. ಇದಾದ ಬಳಿಕ, ಚಿತ್ರರಂಗದಿಂದ ದೂರವುಳಿದಿದ್ದ ಗೋವರ್ಧನ್ ಈಗ ಒಳ್ಳೆ ಸಮಾಚಾರದೊಂದಿಗೆ ಸುದ್ದಿಯಲ್ಲಿದ್ದಾರೆ.












Click it and Unblock the Notifications