ಬೆಸ್ಕಾಂನಲ್ಲಿ ಕನ್ನಡ ಡಿಂಡಿಮ: ಗ್ರಾಹಕರ ಮನವಿಗೆ ಸಿಕ್ಕ ಜಯ
ಬೆಂಗಳೂರು, ಮಾರ್ಚ್ 3: ಕರ್ನಾಟಕದಲ್ಲೇ ಸರಿಯಾಗಿ ಕನ್ನಡ ಭಾಷೆಯನ್ನು ಬಳಸುತ್ತಿಲ್ಲ ಎಂಬ ಆರೋಪ ಇದೆ. ಕೆಲವು ಸರ್ಕಾರಿ ಕಚೇರಿಯಲ್ಲೂ ಕನ್ನಡ ಭಾಷೆ ಕಡೆಗಣನೆ ಮಾಡಲಾಗುತ್ತಿದೆ ಎಂಬ ಬೇಸರವನ್ನು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಾಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇದೀಗ, ಬೆಂಗಳೂರಿನ ಬೆಸ್ಕಾಂ ಸಂಸ್ಥೆಯಲ್ಲಿ ಕನ್ನಡವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಗ್ರಾಹಕರೊಬ್ಬರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಅಪ್ಪಟ ಕನ್ನಡ ಸಂಸ್ಥೆಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಬಳುಸುತ್ತಿಲ್ಲ ಎಂದು ದೂರಿದ್ದಾರೆ.
ಈ ಕುರಿತು ಬೆಂಗಳೂರಿನ ವಿವೇಕ್ ಶಂಕರ್ ಎಂಬ ವ್ಯಕ್ತಿ ಫೆಬ್ರವರಿ 14 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರ ಬೆಸ್ಕಾಂಗೆ ನೋಟಿಸ್ ನೀಡಿದೆ.

ವಿವೇಕ್ ಶಂಕರ್ ಅವರ ದೂರಿಗೆ ಉತ್ತರ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ ಎಸ್ ನಾಗಾಭರಣ ''ಬೆಸ್ಕಾಂ ಸಂಸ್ಥೆ ಅಪ್ಪಟ ಕನ್ನಡ ಸಂಸ್ಥೆ. ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದಲೇ ಸಂಬಂಧಪಟ್ಟವರಿಗೆ ಕನ್ನಡವನ್ನು ಸಾಮಾಜಿಕ ಜಾಲತಾಣವೂ ಸೇರಿದಂತೆ ಆಡಳಿತ ಎಲ್ಲಾ ಹಂತದಲ್ಲೂ ಪ್ರಧಾನವಾಗಿ ಬಳಸುವಂತೆ ಸೂಚಿಸಲು ತಿಳಿಸಿದೆ'' ಎಂದು ಆದೇಶ ನೀಡಿದ್ದಾರೆ.
ಈ ಮೂಲಕ ಬೆಸ್ಕಾಂನಲ್ಲಿ ಕನ್ನಡ ಭಾಷೆ ಕಡೆಗಣನೆ ಆಗುತ್ತಿದೆ ಎಂಬುದಕ್ಕೆ ಒಂದು ಹಂತದ ಪರಿಹಾರ ಮತ್ತು ಸಮಾಧಾನ ಸಿಕ್ಕಿದೆ. ಇನ್ನು ಮುಂದಾದರೂ ಬೆಸ್ಕಾಂ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆ ಡಿಂಡಿಮ ಬಾರಿಸುತ್ತಾ ಕಾದುನೋಡಬೇಕಿದೆ.












Click it and Unblock the Notifications