ಪಬ್, ಹುಕ್ಕಾ ಬಾರ್ ಗಳಲ್ಲಿ ಅಪ್ರಾಪ್ತರದ್ದೇ ಹವಾ; ಪೋಷಕರ ನೋವು ಆಲಿಸುವವರು ಯಾರು?
ಬೆಂಗಳೂರು, ಸೆ 4: ಬೆಂಗಳೂರಿನ ಪೋಷಕರಿಗೆ, ಶಿಕ್ಷಕರಿಗೆ, ಖಾಸಗಿ ಶಾಲಾ ಒಕ್ಕೂಟಗಳಿಗೆ ಹೊಸ ತಲೆ ನೋವು ಶುರು ಆಗಿದೆ. ಈ ನೋವನ್ನ ನಿವಾರಿಸಿ ಅಂತ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್) ಗೃಹ ಸಚಿವರ ಬಳಿ ಪತ್ರದ ಮೂಲಕ ಮನವಿ ಮಾಡಿದೆ.
ಶಿಕ್ಷಕರು ಹೇಳಿ ಹೇಳಿ ರೋಸಿ ಹೋಗಿ, ಪೋಷಕರು ಹೇಳಿ ಹೇಳಿ ಸುಸ್ತಾಗಿ ಕೊನೆಗೆ ಈಗ ಕಡಿವಾಣ ಹಾಕಿ ಅಂತ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿಕೊಂಡಿದೆ. ನಗರದಲ್ಲಿ ಈಗ, ಪಬ್ ಬಾರ್ ಆಂಡ್ ರೆಸೋರೆಂಟುಗಳಲ್ಲಿ, ಹುಕ್ಕಾ ಬಾರ್ ಗಳಲ್ಲಿ ಅಪ್ರಾಪ್ತರದ್ದೇ ಹವಾ.

ಮಕ್ಕಳ ಹಾವಳಿ ಮಧ್ಯೆ ವಯಸ್ಕರನ್ನ ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿ ಇಲ್ಲಿ ಇದೆ. ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳ ದಾಸರಾದರೇ ಮುಂದೆ ಇವರ ಭವಿಷ್ಯದ ಕತೆ ಏನಪ್ಪಾ ಅಂತ ಪೋಷಕರು ತಲೆ ಮೇಲೆ ಕೈ ಹೊತ್ತು ಶಿಕ್ಷಕರ ಬಳಿ ಮಕ್ಕಳಿಗೆ ಬುದ್ದಿ ಹೇಳುವಂತೆ ಮನವಿ ಮಾಡಿ ಕೊಳ್ಳುತ್ತಿದ್ದಾರೆ.
ಆದರೆ ಶಿಕ್ಷಕರು ಮಕ್ಕಳ ಖಾಸಗಿ ಬದುಕಲ್ಲಿ ಎಂಟ್ರಿ ಆಗಿ ಬುದ್ದಿ ಮಾತು ಹೇಳಿದರೆ ಕೇಳುವ ಕಾಲವೇ ಇದು? ನಮ್ಮ ನಿಯಂತ್ರಣಕ್ಕೂ ಮಕ್ಕಳು ಸಿಗುತ್ತಿಲ್ಲ ಅಂತ ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಸಲುವಾಗಿ ಈಗ ಕ್ಯಾಮ್ಸ್ ಗೃಹ ಸಚಿವರ ಬಳಿ ಪತ್ರದ ಮೂಲಕ ಮನವಿ ಮಾಡಿದೆ.
ಪತ್ರದಲ್ಲಿ ಏನಿದೆ?
ಅಪ್ರಾಪ್ತ ಬಾಲಕಿಯರು, ಬಾಲಕರು ನಗರದ ಪಬ್, ರೆಸ್ಟೋರೆಂಟ್, ಹುಕ್ಕಾ ಜಾಯಿಂಟ್ಸ್, ನೈಟ್ ಔಟ್ ಪಾರ್ಟಿಗಳಿಗೆ ಮುಕ್ತವಾಗಿ ಹೋಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಶಾಲಾ ಆಡಳಿತ ಮಂಡಳಿಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಯಾರನ್ನೂ ಸಹ ದೂಷಿಸಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ಪಬ್, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಗೃಹ ಸಚಿವರಲ್ಲಿಒತ್ತಾಯಿಸಿದೆ.
ಶಾಲಾ - ಕಾಲೇಜುಗಳಿಂದ 100 ಮೀ. ಆಸುಪಾಸು
ಶಾಲಾ - ಕಾಲೇಜುಗಳಿಂದ 100 ಮೀ. ಆಸುಪಾಸಿನಲ್ಲಿ ಯಾವುದೇ ತಂಬಾಕು, ಮದ್ಯ ಮಾರಾಟ ಮಾಡಬಾರದೆಂಬ ನಿಯಮವೇ ಇದೆ. ಆದರೆ, ಇದ್ಯಾವುದಕ್ಕೂ ಕೆಲ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಹುಕ್ಕಾಬಾರ್‌ಗಳ ಮಾಲೀಕರು ಕ್ಯಾರೇ ಅನ್ನುತ್ತಿಲ್ಲ. ಇವರಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಮುಖ ಗಿರಾಕಿಗಳು ಎನ್ನುವ ಮತ್ತೊಂದು ಆರೋಪವೂ ಇದೆ. ಇವುಗಳಿಗೆ ಕಡಿವಾಣ ಹಾಕಬೇಕು ಅಂತ ಗೃಹ ಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರವೇ ತಂದಿರೋ ನಿಯಮ ಖಾಲಿ ಹಾಳೆಗಳಿಗಷ್ಟೇ ಸೀಮಿತ
ಇನ್ನೂ ಸರ್ಕಾರವೇ ತಂದಿರೋ ನಿಯಮ ಖಾಲಿ ಹಾಳೆಗಳಿಗಷ್ಟೇ ಸೀಮಿತವಾಗುತ್ತಿದೆಯಾ ಅನ್ನುವ ಪ್ರಶ್ನೆಯೂ ಇದೆ. ಯಾಕಂದರೆ, ಅಬಕಾರಿ ನಿಯಮದ ಪ್ರಕಾರ ಮದ್ಯ ಖರೀದಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ, ಇದ್ಯಾವುದನ್ನು ಲೆಕ್ಕಿಸದೆಯೇ ಶಾಲಾ- ಕಾಲೇಜು ಮಕ್ಕಳಿಗೆ ಕೆಲ ಪಬ್, ಬಾರ್‌ಗಳಲ್ಲಿ ಮದ್ಯ ಒದಗಿಸಲಾಗುತ್ತಿದೆ.
ರಾಜ್ಯದಲ್ಲಿ ಸುಮಾರು 17,367 ಖಾಸಗಿ ಶಾಲೆಗಳಲ್ಲಿ 45.84 ಲಕ್ಷ ವಿದ್ಯಾರ್ಥಿಗಳು ಮತ್ತು 3,565 ಪಿಯು ಕಾಲೇಜುಗಳಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಪ್ರಾಪ್ತ ಮಕ್ಕಳು ಈ ತರಹ ದುಶ್ಚಟಗಳಿಗೆ ವಾಲುತ್ತಾ ಹೋದರೆಮುಂದಿನ ಶೈಕ್ಷಣಿಕ ಜೀವನ ಹಳಿ ತಪ್ಪುವ ಸಾಧ್ಯತೆ ಇರುವುದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬಾರ್ ಪಬ್ ಗಳಲ್ಲಿ ಎಂಟ್ರಿಗೆ ಕಠಿಣವಾದ ನಿಯಮ ಜಾರಿಗೆ ಆಗ್ರಹಿಸಲಾಗಿದ್ದು ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈ ಗೊಳ್ಳುತ್ತಾರೆ ಅಂತ ಕಾದು ನೋಡಬೇಕಿದೆ.












Click it and Unblock the Notifications