'ಮಸಣದ ಹೂ' ಟೈಟಲ್‌ನಿಂದ ಪುಟ್ಟಣ್ಣ ಕಣಗಾಲ್ ಅಂತ್ಯ..'ಡೆವಿಲ್'ನಿಂದ ದರ್ಶನ್‌ಗೆ ಸಂಕಷ್ಟ
ಬೆಂಗಳೂರು, ಜುಲೈ 30: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಕೆಲವರು ದರ್ಶನ್ರ ಜಾತಕ ವಿಶ್ಲೇಷಣೆ ಮಾಡಿದ್ದು, ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ, ದರ್ಶನ್‌ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಕೂದಲ ವಿನ್ಯಾಸ ಬದಲಿಸಿದ್ದು ಹಾಗೂ ಸಿನಿಮಾ ಟೈಟಲ್ ಕಾರಣ ಎಂದು ನೇರವಾಗಿ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, 'ಕೆಲವೊಂದು ಸಿನಿಮಾ ಟೈಟಲ್‌ಗಳು ಇಂತಹ ದುರಂತಗಳನ್ನು ಮಾಡಿಸುತ್ತದೆ. ಬಹಳ ಹಿಂದೆ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂ, ಆ ಚಿತ್ರ ಮಾಡಿ ಅವರದೇ ಅಂತ್ಯ ಆಗಿ ಹೋಯ್ತು. ಇದೇ ರೀತಿ ನಾವು ತೆಗೆದುಕೊಂಡಾಗ ಸಾಕಷ್ಟು ಚಿತ್ರಗಳ ಟೈಟಲ್‌ಗಳಿಂದ ಕಲಾವಿದರಿಗೆ, ಕೆಲಸ ಮಾಡಿದವರಿಗೆ, ಅದರಲ್ಲೂ ಮುಖ್ಯವಾಗಿ ಕೆಲಸ ಮಾಡಿದವರು ಇಂತಹ ದುರಂತದಲ್ಲಿ ಸಿಲುಕಿಕೊಂಡಿದ್ದಾರೆ ಎಂದರು.

ಅದೇ ರೀತಿ ದರ್ಶನ್ ಅವರದೂ ಕೂಡ ಡೆವಿಲ್ ಅಂತಾ ಯಾವುದೋ ಸಿನಿಮಾ ನಡೆಯುತ್ತಿತ್ತು. ಸಿನಿಮಾದ ಬಜೆಟ್ ಹಾಗೂ ಉಳಿದವನ್ನು ಒಂದು ಕಡೆ ಇಟ್ಟು ಬಿಡೋಣ, ಮುಖ್ಯವಾಗಿ ಟೈಟಲ್ ಏನು ರೂಲ್ ಮಾಡುತ್ತದೆ ಎನ್ನುವುದನ್ನು ಕೂಡ ನಾವು ಗಮನ ಹರಿಸಬೇಕಾಗುತ್ತದೆ. ಒಂದು ಹೆಸರು ಏನಾದರೂ ಮಾಡಿ ಬಿಡುತ್ತಾ ಎನ್ನುವ ವಿತಂಡವಾದಿಗಳು ಇರುತ್ತಾರೆ. ಆದರೆ ಡೆವಿಲ್ ಎನ್ನುವುದು ಏನು? ಒಂದು ನೆಗೆಟಿವ್ ಶಬ್ಧ. ಒಂದು ಪಿಶಾಚತ್ವ, ರಾಕ್ಷಸತ್ವ ತೋರಿಸುವಂತದ್ದು.
ನಾನು ಹೇಳಲು ಇಷ್ಟಪಡುವುದು ಏನೆಂದರೆ ಒಂದು ಚಿತ್ರದ ಟೈಟಲ್‌ಗಳು ಕೂಡ ಇಂತಹ ದುರಂತಗಳನ್ನು ತರುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಅದೆಲ್ಲಾ ವೈಬ್ರೆಷನ್. ಪ್ರತಿ ಸಲನೂ ಡೆವಿಲ್..ಡೆವಿಲ್ ಅಂದಾಗ ನೆಗೆಟಿವ್ ವೈಬ್ರೇಷನ್ ಇರುತ್ತದೆ. ಅದರಲ್ಲೂ ಒಂದು ಡೈಲಾಗ್ ಇರುತ್ತದೆ. ಡೆವಿಲ್ ಎಂದು ನಗುವಂತಹ ಡೈಲಾಗ್ ಇದೆ. ಅದು ಅಟ್ಟಹಾಸದ ನಗು. ಅದು ಕೂಡ ಈ ರೀತಿಯ ದುರಂತ ಮಾಡಿಸುವ ಸಾಧ್ಯತೆ ಇರುತ್ತದೆ. ಶೇಕಡಾ ಎಂಬತ್ತರಷ್ಟು ಇದನ್ನು ನಾವು ನಂಬಬಹುದು ಎಂದರು.

ನಮಗೆ ಸೋಲು ಕಂಡಾಗ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಬರೆಯುವಾಗ ಒಂದು ಅಕ್ಷರ ಸೇರಿಸಿಕೊಂಡು ಬರೆಯುತ್ತಿದ್ದಾರೆ. ಕೆಲವೊಂದು ಶಾಸ್ತ್ರಗಳಲ್ಲಿ ಇದು ಉಂಟು ಅಂದಾಗ, ಇದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು. ದರ್ಶನ್ ಅವರ ಜಾತಕ ನಾನು ನೋಡಿಲ್ಲ. ಆದರೆ ಅವರ ಶರೀರ ರಚನೆ, ಮಾನವ ಶರೀರ ರಚನೆ ನೋಡಿ ಜೋತಿಷ್ಯವನ್ನು ನುಡಿಯಬಹುದು ಎಂದು ಹೇಳಿದರು.
ಇನ್ನು ದರ್ಶನ್ ಹೇರ್‌ಸ್ಟೈಲ್ ಬಗ್ಗೆ ಮಾತನಾಡಿದ ಚಂದಾ ಪಾಂಡೇ ಅಮ್ಮಾಜಿ, ಯಾವುದೋ ಒಂದು ಕಾರ್ಯಕ್ರಮದಲ್ಲಿ ನೋಡಿದಾಗ ದರ್ಶನ್ ತಲೆಗೆ ಕೂದಲು ಮಾಡಿಸಿಕೊಂಡಿದ್ದರು. ಕೆಲವೊಂದೆಲ್ಲಾ ಸೂಚನೆಗಳು ಎನ್ನುತ್ತೇವೆ. ಶಕುನಗಳು ಎನ್ನುತ್ತೇವೆ. ನಮ್ಮ ತಂತ್ರಶಾಸ್ತ್ರದಲ್ಲಿ ಸಾಮಾನ್ಯವಾಗಿ ನೋಡುವುದು ಮಾನವ ಶರೀರದೊಂದಿಗೆ ಶಕುನಗಳನ್ನು ನೋಡುತ್ತೇವೆ. ಆ ಶಕುನಗಳನ್ನು ನೋಡಿದಾಗ ತಾಳೆ ಮಾಡಿದಾಗ, ಕೈ ಮುರಿದಿತ್ತು, ಮತ್ತೆ ಕೂದಲು ಮಾಡಿಸಿಕೊಂಡಿದ್ದಾರೆ. ಇದನೆಲ್ಲಾ ನೋಡಿದಾಗ ಇವರಿಗೆ ಯಾವುದೋ ಕಂಟಕ ಇದೆ ಅಂತಾ ಗೊತ್ತಾಗಿತ್ತು ಎಂದರು.












Click it and Unblock the Notifications