Kadalekai Parishe 2024: ನವೆಂಬರ್ 15 ರಿಂದ 18ರವರೆಗೆ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ: ಬನ್ನಿ ಬಡವರ ಬಾದಾಮಿ ಸವಿಯೋಣ...
ಬೆಂಗಳೂರು ನವೆಂಬರ್ 13: ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ 15 ರಿಂದ 18 ರವರೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳೆಯರ ಬಳಗ ಮುಜಾರಾಯಿ ಇಲಾಖೆ ಹೆಸರಿನಲ್ಲಿ ಬೆಂಗಳೂರು ನಗರ ಮಲ್ಲೇಶ್ವರಂ 15ನೇ ಕ್ರಾಸ್‌ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಶುಭಾ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ (15-11-2024 ರಿಂದ 18-11-2024) ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಬಾರಿ ಎಂಟನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದ್ದು ಬಗೆ ಬಗೆಯ ಕಡಲೆಕಾಯಿ ಮಾರಾಟಕ್ಕೆ ಸಿದ್ದಪಡಿಸಿಕೊಳ್ಳಲಾಗುತ್ತಿದೆ.
ಈ ವರ್ಷದ ವಿಶೇಷತೆ ಅಂದರೆ ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸಲು ಕಾಡುಮಲ್ಲೇಶ್ವರ ಗೆಳೆಯರ ಬಳಗ ನಿರ್ಧರಿಸಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪ್ಲಾಸ್ಟಿಕ್ ಬದಲಿಗೆ ಕಾಗದ ಹಾಗೂ ಬಟ್ಟೆ ಚೀಲ ಬಳಕೆ ಮಾಡಲಾಗುತ್ತದೆ. ಮಾರಾಟಗಾರರಿಗೆ ಹಾಗೂ ರೈತರಿಗೆ ಪ್ಲಾಸ್ಟಿಕ್ ಚೀಲ ಬಳಕೆ ಮಾಡದಂತೆ ಸೂಚನೆ ನೀಡಲಾಗಿದ್ದು, ಪರಿಸರ ಸ್ನೇಹಿ ಕಾಗದ ಹಾಗೂ ಬಟ್ಟೆ ಬಳಕೆಗೆ ತಿಳಿಸಲಾಗಿದೆ. ಅಲ್ಲದೆ ಇದಕ್ಕಾಗಿ 40,000 ಕಾಗದದ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು. ಜೊತೆಗೆ ಈ ಪರಿಷೆಯಲ್ಲಿ ಪರಿಸರ ಸುಸ್ಥಿರತೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿಕೆ ಶಿವರಾಂ ಮಾಹಿತಿ ನೀಡಿದ್ದಾರೆ.

ರೈತರು ಮತ್ತು ರಸ್ತೆಬದಿ ವ್ಯಾಪಾರಿಗಳಿಗೆ 400 ಕ್ಕೂ ಹೆಚ್ಚು ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ನವೆಂಬರ್ 15ರ ಸಂಜೆ 4.30 ಗಂಟೆಗೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಮೇಳ ಉದ್ಘಾಟಿಸಲಿದ್ದಾರೆ. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವಾರಜ್ ತಂಗಡಗಿ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ಭದ್ರತೆಯ ದೃಷ್ಟಿಯಿಂದ ನೂರಾರು ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ ಎಂದು ಬಿಕೆ ಶಿವರಾಂ ಹೇಳಿದ್ದಾರೆ.
ಬೆಳಿಗ್ಗೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ನಂತರ ರೈತರು ಬೆಳೆದ ಕಡಲೆಕಾಯಿ, ತರಕಾರಿ ಹಾಗೂ ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ದೇವಸ್ಥಾನಕ್ಕೆ ಬಂದ ಜನರಿಗೆ ಪ್ರಸಾದ ರೂಪದಲ್ಲಿ ಕಡೆಲೆಕಾಯಿ ವಿತರಿಸಲಾಗುತ್ತದೆ. ಈ ಬಾರಿ ಪರಿಷೆಯಲ್ಲಿ ಸರಿಸುಮಾರು ಎಂಟು ಲಕ್ಷ ಜನ ಭಾಗಿವಹಿಸುವ ನಿರೀಕ್ಷೆ ಇದೆ.
ಜೊತೆಗೆ ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಆಂಧ್ರಪ್ರದೇಶ ಹಾಗೂ ತಮಿಳುನಾಡು ರೈತರು ಕೂಡ ಪರಿಷೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಾಲ್ಕು ದಿನದ ಪರಿಷೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆಗೆ ನೂರಾರು ವರ್ಷಗಳ ಇತಿಹಾಸವಿದೆ. ರೈತರು ಬೆಳೆದ ಕಡಲೆಕಾಯಿಗೆ ದಾಳಿ ಮಾಡುತ್ತಿದ್ದ ಜಾನುವಾರಗಳನ್ನು ತಡೆಯಲು ಬೆಳೆದ ಬೆಳೆಯನ್ನು ಮೊದಲು ಬಸವನಿಗೆ ಅರ್ಪಸಲಾಗುತ್ತದೆ. ಹೀಗೆ ಮಾಡುವುದರಿಂದ ಬಸವ ಬೆಳೆ ನಾಶ ಮಾಡುವುದನ್ನು ತಡೆಯುತ್ತದೆ ಎಂಬ ನಂಬಿಕೆ ಇದೆ. ಇದನ್ನು ಕಣ್ತುಂಬಿಕೊಳ್ಳಲು ಹಾಗೂ ಬಗೆ ಬಗೆ ಕಡಲೆಕಾಯಿಗಳನ್ನು ಸವಿಯಲು ದೂರದೂರುಗಳಿಂದ ಜನ ಆಗಮಿಸುತ್ತಾರೆ.












Click it and Unblock the Notifications