ಕೆ.ಆರ್.ಪುರಂ- ವೈಟ್‌ಫೀಲ್ಡ್ ಮೆಟ್ರೋದಲ್ಲಿ ನೀವು ಓಡಾಡುವ ಸಮಯ ಬಂದೇ ಬಿಟ್ತು: ದಿನಾಂಕ, ಮಾರ್ಗ, ಮಾಹಿತಿ
ಬೆಂಗಳೂರು, ಜನವರಿ 10: ಕೆ.ಆರ್. ಪುರಂನಿಂದ ವೈಟ್‌ಫೀಲ್ಡ್ ನಡುವೆ ಸಂಚರಿಸಲಿರುವ 'ನಮ್ಮ ಮೆಟ್ರೋ' ದ ಸುರಕ್ಷತಾ ಪರಿಶೀಲನೆ ಫೆಬ್ರುವರಿ 16 ಮತ್ತು 20 ರ ನಡುವೆ ನಡೆಯಲಿದೆ. ಇದು ಮಾರ್ಚ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
15 ಕಿಮೀ ಮಾರ್ಗದ 13.5 ಕಿಮೀ ವಿಸ್ತರಣೆಯು ಮಾರ್ಚ್‌ನಲ್ಲಿ, ಅಂದರೆ, ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.
ಕೆ.ಆರ್. ಪುರಂನಿಂದ ವೈಟ್‌ಫೀಲ್ಡ್ ಮಾರ್ಗವು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಮಾರ್ಗದ (ಪರ್ಪಲ್ ಲೈನ್ ವಿಸ್ತರಣೆ) ಹಂತ II ರ ಅಡಿಯಲ್ಲಿ ಬರುವ ಒಂದು ಭಾಗವಾಗಿದೆ.

ಅಕ್ಟೋಬರ್ 2022 ರಲ್ಲಿ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL), ವೈಟ್‌ಫೀಲ್ಡ್ ಮತ್ತು ಪಟ್ಟಂದೂರು ಅಗ್ರಹಾರ ನಡುವಿನ 3.5 ಕಿಮೀ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿತು. ಪ್ರಾಯೋಗಿಕ ಸಂಚಾರದ ತರುವಾಯ ಕೆ.ಆರ್.ವರೆಗೆ ವಿಸ್ತರಿಸಲಾಯಿತು.
ಉಳಿದ 2 ಕಿ.ಮೀ (ಕೆ.ಆರ್. ಪುರಂನಿಂದ ಬೈಯಪ್ಪನಹಳ್ಳಿ) ಈ ವರ್ಷದ ಜೂನ್ ವೇಳೆಗೆ ತೆರೆಯಲು BMRCL ಮುಂದಾಗಿದೆ.
ಈ ಭಾಗದ ಬಹುತೇಕ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಬೆನ್ನಿಗಾನಹಳ್ಳಿ ಬಳಿ ರೈಲ್ವೆ ಹಳಿ ಮೇಲೆ ತೆರೆದ ವೆಬ್ ಗರ್ಡರ್ ನಿರ್ಮಾಣ ಬಾಕಿ ಉಳಿದಿದೆ. ಇದನ್ನು ರೈಲ್ವೆ ಅಧಿಕಾರಿಗಳ ಜತೆಗೂಡಿ ಕಾರ್ಯಗತಗೊಳಿಸಬೇಕಿದೆ. ಉಳಿದ ಭಾಗವನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಸಂಪೂರ್ಣ ವಿಸ್ತರಣೆಯಾಗುವವರೆಗೆ, BMRCL ಬೈಯಪ್ಪನಹಳ್ಳಿ ಮತ್ತು ಕೆ.ಆರ್ ನಡುವೆ ದ್ವಿ-ದಿಕ್ಕಿನ ಫೀಡರ್ ಸೇವೆಗಳನ್ನು ಒದಗಿಸಲಿದೆ. ಇದು ಕೆ.ಆರ್. ಪುರಂ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವೈಟ್‌ಫೀಲ್ಡ್ ಮಾರ್ಗವು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ, ಮೆಟ್ರೋ ಪ್ರಯಾಣಿಕರ ಸಂಖ್ಯೆಯು 3.5 ಲಕ್ಷಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಏಕೆಂದರೆ ಇದು ಪ್ರಮುಖ ಐಟಿ ಕಾರಿಡಾರ್ ಮತ್ತು ವಸತಿ ಕೇಂದ್ರವಾದ ವೈಟ್‌ಫೀಲ್ಡ್ ಅನ್ನು ಬೆಂಗಳೂರಿನ ಹೆಚ್ಚಿನ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
ಪ್ರಸ್ತುತ, ನೇರಳೆ ಮಾರ್ಗವು 25.7 ಕಿಮೀ ಉದ್ದವಿದ್ದು, ನೈಋತ್ಯದ ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ 23 ನಿಲ್ದಾಣಗಳನ್ನು ವ್ಯಾಪಿಸಿದೆ. ಪರ್ಪಲ್ ಲೈನ್ ಹೆಚ್ಚಾಗಿ ಎಲಿವೇಟೆಡ್ ಆಗಿದೆ, 17 ಎಲಿವೇಟೆಡ್ ನಿಲ್ದಾಣಗಳು, ಐದು ಅಂಡರ್ ಗ್ರೌಂಡ್ ನಿಲ್ದಾಣಗಳು ಈ ಲೈನ್‌ನಲ್ಲಿ ಇವೆ. ಎಂಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ವ್ಯಾಪಾರ ಕೇಂದ್ರಗಳ ಮೂಲಕ ಹಾದುಹೋಗುತ್ತದೆ. ಎಂಜಿ ರಸ್ತೆ, ವಿಧಾನ ಸೌಧ ಮತ್ತು ಮೆಜೆಸ್ಟಿಕ್ ನಿಲ್ದಾಣಗಳ ಮೂಲಕ ಇದು ಸಂಚರಿಸುತ್ತದೆ.

2024ರಲ್ಲಿ 2ನೇ ಹಂತದ ನಮ್ಮ ಮೆಟ್ರೋ ಕಾಮಗಾರಿ ಮುಗಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಹಂತದ ಯೋಜನೆಯು 73.921 ಕಿಮೀಗಳನ್ನು ಒಳಗೊಂಡಿದೆ.
ಮೈಸೂರು ರಸ್ತೆ-ಪಟ್ಟಣಗೆರೆ, ಪರ್ಪಲ್ ಲೈನ್‌ನ ರೀಚ್-2ಎ ರೈಲು ಮಾರ್ಗದ ನಿರ್ಮಾಣ ಕಾರ್ಯ ಸೆ. 2015 ರಲ್ಲಿ ಆರಂಭವಾಯಿತು. 73.921 ಕಿಮೀ ಉದ್ದದ ರೈಲು ಮಾರ್ಗದಲ್ಲಿ 13.885 ಕಿಮೀ ಅಂಡರ್ ಗ್ರೌಂಡ್ ಆಗಿದ್ದು, ಉಳಿದವುಗಳನ್ನು ಎಲಿವೇಟೆಡ್ ರೈಲು ಮಾರ್ಗಗಳನ್ನಾಗಿ ನಿರ್ಮಿಸಲಾಗುತ್ತಿದೆ. ಜಯದೇವ, ಎಲೆಕ್ಟ್ರಾನಿಕ್ ಸಿಟಿ, ಶಿವಾಜಿನಗರ, ಸಿಲ್ಕ್‌ಬೋರ್ಡ್ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಎರಡನೇ ಹಂತದ ಮೆಟ್ರೋ ರೈಲುಗಳು ಸಂಚರಿಸಲಿವೆ.












Click it and Unblock the Notifications