ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾ.ನಾಗಮೋಹನ್ ದಾಸ್‌ ಮೀಸಲಾತಿ "ಭ್ರಮೆ ಮತ್ತು ವಾಸ್ತವ' ಕೃತಿ ಬಿಡುಗಡೆ

|
Google Oneindia Kannada News

ಬೆಂಗಳೂರು , ಜೂನ್ 26: ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಬೆರೆದಿರುವ ಮೀಸಲಾತಿ "ಭ್ರಮೆ ಮತ್ತು ವಾಸ್ತವ' ಕೃತಿ ಲೋಕಾರ್ಪಣೆಯಾಗಿದೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನು ಒಂದು ಪುಸ್ತಕವಾಗಿ ಮಾತ್ರವಲ್ಲ ಒಂದು ಅಭಿಯಾನವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ" ಎಂದರು.

"ಒಂದು 140-150 ಪುಟಗಳಿರುವ ಚಿಕ್ಕ ಪುಸ್ತಕ ಇದು. ಪುಸ್ತಕದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮೀಸಲಾತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಗಮೋಹನ್‌ ದಾಸ್‌ ನ್ಯಾಯಮೂರ್ತಿಗಳಾಗಿರುವುದರಿಂದ ಸಂವಿಧಾನದ ಬಗ್ಗೆ ಹೆಚ್ಚು ಓದಿಕೊಂಡು, ಜ್ಞಾನ ಹೊಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಓದು ಎಂಬ ಕಿರುಹೊತ್ತಿಗೆಯನ್ನು ಬರೆದಿದ್ದರು. ನಾನೂ ಅದನ್ನು ಓದಿದ್ದೇನೆ. ಆ ಸಂದರ್ಭದಲ್ಲಿ ಮೀಸಲಾತಿ ಬಗ್ಗೆ ಬಹಳಷ್ಟು ಪ್ರಶ್ನೆಗಳು ಬರುತ್ತಿದ್ದವು" ಎಂದು ಹೇಳಿದರು.

ಮೀಸಲಾತಿ ಯಾಕೆ ಹುಟ್ಟಿತು, ಅದರ ಉದ್ದೇಶ ಮತ್ತು ಅನಿವಾರ್ಯತೆ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ನಾವು ಉತ್ತರ ನೀಡಿದರೂ ಕೆಲವರು ಮೀಸಲಾತಿಯನ್ನು ವಿಕೃತವಾಗಿ ನೋಡುತ್ತಿದ್ದಾರೆ. ನಮ್ಮ ಸಮಾಜ ಜಾತಿ ವ್ಯವಸ್ಥೆ ಕಾರಣಕ್ಕಾಗಿ ಅಸಮಾನತೆ ಇಂದ ಕೂಡಿದೆ. ಇದು ಅವಕಾಶ ವಂಚಿತ ಜನರಿಂದ ಆದದ್ದಲ್ಲ. ಈ ಅಸಮಾನತೆ ಉಂಟಾಗಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರಣ.

"ಇವರು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿ, ರಾಜಕೀಯ, ಆರ್ಥಿಕ ಅಸಮಾನತೆ ಸೃಷ್ಟಿ ಮಾಡಿದ್ದಾರೆ. ಚತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ವೈಶ್ಯರಿಗೆ ಓದಲು, ಸಂಪತ್ತನ್ನು ಅನುಭವಿಸಲು, ಅಧಿಕಾರ ನಡೆಸಲು ಅವಕಾಶ ಇತ್ತು. ಇದು ಮೀಸಲಾತಿ ಅಲ್ಲವೇ? ಬಹುಸಂಖ್ಯಾತ ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿ, ಅವರೇ ಉತ್ಪಾದನೆ ಮಾಡಿದ ಸಂಪತ್ತನ್ನು ಅನುಭವಿಸಲು ಅವಕಾಶ ನೀಡದೆ ಇದ್ದದ್ದು ಅನ್ಯಾಯ ಅಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೀಸಲಾತಿ ಎಷ್ಟು ವರ್ಷ ಬೇಕು?

ಮೀಸಲಾತಿ ಎಷ್ಟು ವರ್ಷ ಬೇಕು?

ಇದೇ ಕಾರಣಕ್ಕೆ ಬಸವಾದಿ ಶರಣರು ಕಾಯಕ ದಾಸೋಹ ತತ್ವವನ್ನು ಸಾರಿದರು. ಶೂದ್ರ ಜನರಿಗೆ ಕೊಳಕು ಕೆಲಸಗಳನ್ನು ಮಾತ್ರ ಬಿಟ್ಟು, ಸಂಪತ್ತನ್ನು ಅನುಭವಿಸಿದವರು ಯಾರು? ಕೆಲಸ ಮಾಡುವವರು ಯಾರೋ ಆದರೆ ಬಂದ ಸಂಪತ್ತನ್ನು ಅನುಭವಿಸುತ್ತಾ ಕುಳಿತವರು ಯಾರೋ? ಇದು ಅಲಿಖಿತ ಮೀಸಲಾತಿ, ಇದನ್ನು ಮಾಡಿದ್ದು ಯಾರು? ಇಂದು ಅವರೇ ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೀಸಲಾತಿ ಎಷ್ಟು ವರ್ಷ ಬೇಕು? ಯಾಕಿರಬೇಕು? ಇದರಿಂದ ಪ್ರತಿಭೆ ಹಾಳಾಗಲ್ವಾ? ಹೀಗೆಲ್ಲಾ ಕೇಳುತ್ತಿರುವವರು ಸಮಾಜದಲ್ಲಿ ಅಸಮಾನತೆ ನಿರ್ಮಾಣ ಮಾಡಲು ಕಾರಣಕರ್ತರಾದವರೇ. ಕ್ರಿಮಿಲೇಯರ್‌ ಎಲ್ಲರಿಗೂ ಏಕೆ ಇಲ್ಲ? ಎಂದು ಅವರು ಕೇಳುತ್ತಾರೆ.

ಸಂವಿಧಾನ ಬಂದ ಮೇಲೆ ಮೀಸಲಾತಿ

ಸಂವಿಧಾನ ಬಂದ ಮೇಲೆ ಮೀಸಲಾತಿ

ರಾಮಕೃಷ್ಣ ಹೆಗ್ಡೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಬಿ. ರಾಚಯ್ಯನವರು ಶಿಕ್ಷಣ ಸಚಿವರಾಗಿದ್ದರು. ಆಗ ರಾಚಯ್ಯನವರು ರಾಮಕೃಷ್ಣ ಹೆಗ್ಡೆಯವರನ್ನು ನೀವು ಮಹಾನ್‌ ಮೇಧಾವಿಗಳು ಎಂದು ಹೊಗಳಿದರು. ಆಗ ಜೆ. ಹೆಚ್‌. ಪಟೇಲರು ಎದ್ದು ನಿಂತು ಅವರು ಚತುರರಾಗಿರಲೇಬೇಕು ಕಾರಣ ಅವರಿಗೆ 5000 ವರ್ಷಗಳ ಇತಿಹಾಸ ಇದೆ, ನನಗೆ ಬಸವಣ್ಣ ಬಂದ ಮೇಲಿನ 800 ವರ್ಷಗಳ ಇತಿಹಾಸ ಇದೆ, ನಿಮಗೆ ಸಂವಿಧಾನ ಬಂದ ಮೇಲೆ ಇತಿಹಾಸ ಆರಂಭವಾದುದ್ದು ಎಂದರು. ಇದು ರಾಚಯ್ಯನವರಿಗೆ ಅರ್ಥವಾಗದೆ ಸುಮ್ಮನಾದರು.

ಇದ್ದದ್ದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ

ಇದ್ದದ್ದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ

ಶಿಕ್ಷಣ, ಅಧಿಕಾರ ಮತ್ತು ಸಂಪತ್ತು ಯಾವುದೇ ಜನಾಂಗದ ಜಾತಿಯ ಸ್ವತ್ತಲ್ಲ. ಅಂಬೇಡ್ಕರ್‌ ಅವರು ಓದದೆ ಹೋಗಿದ್ದರೆ ಸಂವಿಧಾನ ರಚನೆ ಮಾಡಲು ಆಗುತ್ತಿತ್ತಾ?. ಅಸ್ಪ್ರಶ್ಯ ಜನಾಂಗದಲ್ಲಿ ಹುಟ್ಟಿದ ಅಂಬೇಡ್ಕರ್‌ ಅವರು ಬುದ್ದಿವಂತಿಕೆಯಲ್ಲಿ ಯಾರಿಗಿಂತಲಾದರೂ ಕಡಿಮೆಯಿದ್ದರಾ?. ಈ ದೇಶದ ಕೆಲವೇ ಮೇಧಾವಿ ರಾಜಕಾರಣಿ, ಬುದ್ದಿವಂತರಲ್ಲಿ ಅಂಬೇಡ್ಕರ್‌ ಒಬ್ಬರು. ಇಲ್ಲದಿದ್ದರೆ ಇಂಥಾ ಸಂವಿಧಾನ ಸಿಗಲು ಸಾಧ್ಯವಾಗುತ್ತಿತ್ತಾ?. ಭಾರತದಲ್ಲಿ 4635 ಜಾತಿಗಳು ಇವೆ ಎಂದು ಪುಸ್ತಕದಲ್ಲಿ ಆಧಾರ ಸಮೇತ ಹೇಳಿದ್ದಾರೆ. ಇದನ್ನು ಹುಟ್ಟುಹಾಕಿದ್ದು ಯಾರಪ್ಪ? ಅವರೇ ಇಂದು ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರ ಹೇಳಿದರೆ ನನ್ನ ಮೈಮೇಲೆ ಬೀಳುತ್ತಾರೆ. ಸತ್ಯ ಹೇಳೋದು ಕಷ್ಟವಾಗಿದೆ. ಆರ್ಯನ್ನರು ಮಧ್ಯಪ್ರಾಚ್ಯದಿಂದ ಬಂದವರು ಎಂದು ನಾನು ಹೇಳಿದರೆ ಏನ್ರೀ ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಮೈಮೇಲೆ ಬರುತ್ತಾರೆ. ನಾವೆಲ್ಲ ದ್ರಾವಿಡರು, ನಮ್ಮ ಮೇಲೆ ದೌರ್ಜನ್ಯ ಮಾಡಿದರು ಎಂದು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ. ಇದಕ್ಕೆ ನಮ್ಮ ಕಡೆ ಇದ್ದದ್ದನ್ನು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬ ಗಾದೆ ಮಾತು ಹೇಳುತ್ತಾರೆ.

ವಿಪಿ ಸಿಂಗ್‌ ಉದ್ಯೋಗದಲ್ಲಿ ಶೇ 27 ಮೀಸಲಾತಿ ನೀಡಿದರು

ವಿಪಿ ಸಿಂಗ್‌ ಉದ್ಯೋಗದಲ್ಲಿ ಶೇ 27 ಮೀಸಲಾತಿ ನೀಡಿದರು

ಮೀಸಲಾತಿ ಬಂದು ಕರ್ನಾಟಕದಲ್ಲಿ ನೂರು ವರ್ಷ ಆಗಿದೆ. ಮಹಾರಾಷ್ಟ್ರದಲ್ಲಿ ಸಾಹೋ ಮಹರಾಜ್‌, ತಮಿಳುನಾಡಿನಲ್ಲಿ ಜಸ್ಟೀಸ್‌ ಪಾಂಡ್ಯನ್‌ ಅವರು ಹೋರಾಟ ಮಾಡಿ ಮಾಡಿದರು. ದಕ್ಷಿಣ ಭಾರತದಲ್ಲಿ ಮೀಸಲಾತಿ ಜಾರಿಯಾದರೂ ಉತ್ತರ ಭಾರತದಲ್ಲಿ ಆಗಿರಲಿಲ್ಲ. 1955 ರಲ್ಲಿ ಕಾಕಾ ಕಾಲೇಟ್ಕರ್ ಅವರ ವರದಿ ತಿರಸ್ಕಾರ ಆದಮೇಲೆ ಇನ್ನೊಂದು‌ ಸಮಿತಿ ರಚನೆ ಮಾಡಿ ಎಂದು ದೇಶದಲ್ಲಿ ಹೋರಾಟವೇ ನಡೆದಿಲ್ಲ. 22 ವರ್ಷಗಳ ವರೆಗೆ ಈ ದೇಶದಲ್ಲಿ ಇನ್ನೊಂದು ಸಮಿತಿ ರಚನೆಯ ಕೂಗು ಕೇಳಲೇ ಇಲ್ಲ. ಅಷ್ಟರ ಮಟ್ಟಿಗೆ ನಾವು ಮೌನಿಗಳಾಗಿದ್ದೇವೆ, ಅನ್ಯಾಯವನ್ನು ಸಹಿಸಿಕೊಂಡಿದ್ದೇವೆ. 1977 ರಲ್ಲಿ ಅಂದಿನ ಜನತಾ ಸರ್ಕಾರ ಮಂಡಲ್‌ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡುವುದಾಗಿ ಘೋಷಿಸಿ, 1980 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು. 1990 ರಲ್ಲಿ ವಿಪಿ ಸಿಂಗ್‌ ಬರುವವರೆಗೆ ವರೆಗೆ ಅದು ಜಾರಿಯಾಗಿರಲಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಂವಿಧಾನದಲ್ಲಿ ಅಂಬೇಡ್ಕರ್‌ ಮೀಸಲಾತಿ ನೀಡಿದರು, ಆದರೆ ಹಿಂದುಳಿದ ಜಾತಿಗಳಿಗೆ ಸಂವಿಧಾನ ಬಂದು 40 ವರ್ಷಗಳಾಗುವರೆಗೆ ಮೀಸಲಾತಿ ಸಿಕ್ಕಿರಲಿಲ್ಲ. ವಿಪಿ ಸಿಂಗ್‌ ಉದ್ಯೋಗದಲ್ಲಿ 27% ಮೀಸಲಾತಿ ನೀಡಿದರು. ಇದನ್ನು ವಿರೋಧ ಮಾಡಿದ್ದು ಯಾರು? ರಥಯಾತ್ರೆ ಮಾಡಿದ್ದು ಯಾರು? ಅವರನ್ನು ಬಂಧಿಸಿದ್ದು ಯಾರು? ಮೀಸಲಾತಿ ಬಗೆಗಿನ ಸಂಪೂರ್ಣ ಮಾಹಿಗಿ ತಿಳಿಸಲು ನಾಗಮೋಹನ್‌ ದಾಸ್‌ ಅವರು ಪುಸ್ತಕ ರೂಪದಲ್ಲಿ ಬರೆದಿದ್ದಾರೆ.

ಮೀಸಲಾತಿ ವ್ಯವಸ್ಥೆ 1921ರಲ್ಲಿ ಜಾರಿ

ಮೀಸಲಾತಿ ವ್ಯವಸ್ಥೆ 1921ರಲ್ಲಿ ಜಾರಿ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೊದಲನೇ ಬಾರಿಗೆ ಮೈಸೂರು ಪ್ರಾಂತ್ಯದಲ್ಲಿ ಮೀಸಲಾತಿ ಸಂಬಂಧ 1918 ರಲ್ಲಿ ಮಿಲ್ಲರ್‌ ಆಯೋಗದ ರಚನೆ ಮಾಡಿದರು, ಅವರು 1919ರಲ್ಲಿ ವರದಿ ನೀಡಿದರು, ಅದನ್ನು 1921 ರಲ್ಲಿ ಜಾರಿಗೆ ತರಲಾಯಿತು. ಇದಕ್ಕೆ ವಿರೋಧ ಮಾಡಿದವರು ಯಾರು? ಇದನ್ನು ನಾನು ಹೇಳಿದ್ರೆ ಕೆಲವರಿಗೆ ಕೋಪ ಬರುತ್ತೆ. ಈ ರೀತಿ ಬೈಸಿಕೊಳ್ಳಲು ನಾವು ಬಹುಸಂಖ್ಯಾತರೇ ಬೇಕು. ನಾನು ಒಬ್ಬ ಮಾತನಾಡಿದರೆ 20 ಜನ ಬೈತಾರೆ, ಅದಕ್ಕೆ ನಮ್ಮವರು ಯಾರು ಮಾತನಾಡಲ್ಲ, ಸಿದ್ದರಾಮಯ್ಯ ತಾನೇ ಬೈಸಿಕೊಂಡಿದ್ದು ನಾವಲ್ವಲ್ಲ ಎಂದು ಸುಮ್ಮನಾಗ್ತಾರೆ. ಇದು ನಮ್ಮ ದುರಂತ.

ಸಮಾಜ, ಜಾತಿ ವ್ಯವಸ್ಥೆ ಜಡತ್ವ

ಸಮಾಜ, ಜಾತಿ ವ್ಯವಸ್ಥೆ ಜಡತ್ವ

ಬಸವಣ್ಣನವರು ಸಮ ಸಮಾಜ ನಿರ್ಮಾಣ ಆಗಬೇಕು ಎಂದು 900 ವರ್ಷಗಳ ಹಿಂದೆ ಹೇಳಿದ್ರು. ಈಗ ಸಮಸಮಾಜ ನಿರ್ಮಾಣ ಆಗಿದೆಯಾ?

ಇವನಾರವ ಇವನಾರವ ಎಂದೆನಿಸದಿರಯ್ಯ

ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ

ಇವ ಎನ್ನ ಮನೆಯ ಮಗನೆಂದಿನಿಸಯ್ಯ ಕೂಡಲಸಂಗಮದೇವ ಎಂದು ವಚನ ಹೇಳುತ್ತೇವೆ, ಆದರೆ ಇಂದಿಗೂ ನಾವು ಇವನಾರವನಾಗೇ ಉಳಿದಿದ್ದೇವೆ. ಅನೇಕರು ಈ ವಚನ ಹೇಳುತ್ತಲೇ ನಿಂದು ಯಾವ ಜಾತಿ ಎಂದು ಕೇಳುತ್ತಾರೆ. ನಮ್ಮ ಸಮಾಜ, ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಎಲ್ಲಿ ಚಲನೆ ಇರುವುದಿಲ್ಲವೋ ಅಲ್ಲಿ ಬದಲಾವಣೆ ಅಸಾಧ್ಯ. ಶಿಕ್ಷಣ, ಸಂಪತ್ತು, ಅಧಿಕಾರದಲ್ಲಿ ಪಾಲು ಸಿಗುವವರೆಗೆ ಚಲನೆ ಬರಲ್ಲ. ಸಾಮಾಜಿಕ, ಆರ್ಥಿಕ ಚಲನೆ ಬಂದಾಗ ಅದು ವರ್ಗವಾಗಿ, ನಂತರ ವರ್ಗ ರಹಿತವಾಗಿ ಬದಲಾಗಲು ಸಾಧ್ಯ.

ಸಂವಿಧಾನದಲ್ಲಿ ಅವಕಾಶ ಇದೆಯಾ?

ಸಂವಿಧಾನದಲ್ಲಿ ಅವಕಾಶ ಇದೆಯಾ?

ಅಂಬೇಡ್ಕರ್‌ ಅವರು 26 ನವೆಂಬರ್‌ 1949 ರಂದು ತಮ್ಮ ಭಾಷಣದಲ್ಲಿ "ಬರೀ ರಾಜಕೀಯ ಸ್ವಾತಂತ್ರ್ಯ ಇದ್ದರೆ ಸಾಲದು ಸಂಪತ್ತು ಮತ್ತು ಅಧಿಕಾರ ಹಂಚಿಕೆಯಲ್ಲಿ ಸಮಾನತೆ ಇರಬೇಕು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು. ಬದಲಾವಣೆಯನ್ನು ಬಾಯಿ ಮಾತಿನಿಂದ ಮಾಡಲು ಸಾಧ್ಯವಿಲ್ಲ. ಸಂವಿಧಾನ ಬಂದು 72 ವರ್ಷದಿಂದ ಬದಲಾವಣೆ ಆಗುತ್ತಿಲ್ಲ. ನರೇಂದ್ರ ಮೋದಿ ಅವರು ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದರು. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆಯಾ? ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದು ಇದೆ. ತರಾತುರಿಯಲ್ಲಿ ಇದನ್ನು ಒಂದೇ ದಿನದಲ್ಲಿ ಪಾಸ್ ಮಾಡಿದರು. ಇದು ಬಂದಮೇಲೆ ಮೀಸಲಾತಿ ಯಾಕೆ ಎಂದು ಕೇಳೋರು ಕಡಿಮೆಯಾಗಿದ್ದಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು.

Recommended Video

ಮೊದಲ ಮಗುವಿನ ನಿರೀಕ್ಷೆಯಲ್ಲಿ Aliya Bhat: ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್ | *Entertainment | OneIndia
ಮಹಿಳೆಯರಿಗೆ ಪಂಚಾಯತ್‌ ರಾಜ್‌ನಲ್ಲಿ ಮೀಸಲಾತಿ

ಮಹಿಳೆಯರಿಗೆ ಪಂಚಾಯತ್‌ ರಾಜ್‌ನಲ್ಲಿ ಮೀಸಲಾತಿ

ಬಹಳಷ್ಟು ಜನ ವಿದ್ಯಾವಂತರು ಸಂವಿಧಾನದ ಪೀಠಿಕೆಯನ್ನೂ ಓದಿಕೊಂಡಿಲ್ಲ. ಕನಿಷ್ಠ ಇದನ್ನಾದರೂ ಓದಿಕೊಳ್ಳಿ. ಇದೂ ನಮಗೆ ಗೊತ್ತಿಲ್ಲದೆ ಹೋದರೆ ನಾವು ಈ ದೇಶದ ಪ್ರಜೆಯಾಗಿರಲು ಅರ್ಹರಾ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಸಂವಿಧಾನಕ್ಕೆ 73- 74ನೇ ತಿದ್ದುಪಡಿ ಆಗುವ ವರೆಗೆ ಮಹಿಳೆಯರಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ರಾಜಕೀಯ ಮೀಸಲಾತಿ ಇರಲಿಲ್ಲ. ಈ ತಿದ್ದುಪಡಿ ನಂತರ ಮಹಿಳೆಯರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಸಿಕ್ಕಿದ್ದು. 1994-95 ರ ವರೆಗೆ ಈ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಇರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದು ರಾಮಾ ಜೋಯಿಸ್‌ ಅವರು, ಅವರೇ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ವಾದವನ್ನು ಮಾಡಿದರು. ಅದೃಷ್ಟವಶಾತ್ ಸುಪ್ರೀಂ ಕೋರ್ಟ್‌ ನಲ್ಲಿ ತೀರ್ಪು ಮೀಸಲಾತಿ ಪರವಾಗಿ ಬಂತು. ಮತ್ತೆ ಈಗ ನಮ್ಮ ಬಳಿ ಯಾವುದೇ ನಂಬಿಕಾರ್ಹ ಮಾಹಿತಿ ಇಲ್ಲ ಎಂದು ಈ ರಾಜಕೀಯ ಮೀಸಲಾತಿಯನ್ನು ತೆಗೆದುಹಾಕಿದ್ದಾರೆ. ಆದರೂ ನಾವು ಸುಮ್ಮನಿದ್ದೇವೆ.

ಬಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು

ಬಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು

ಒಮ್ಮೆ 2004 ರಲ್ಲಿ ಆಂಧ್ರ ಪ್ರದೇಶದವರು ಒಳ ಮೀಸಲಾತಿ ಸಂಬಂಧ ಪರಿಶಿಷ್ಟ ಜಾತಿಯಲ್ಲಿ ಎ.ಬಿ.ಸಿ.ಡಿ ಎಂದು ವಿಂಗಡನೆ ಮಾಡಿದರು. ಆಗ ಸುಪ್ರೀಂ ಕೋರ್ಟ್‌ ರಾಜ್ಯಕ್ಕೆ ಈ ಸಂಬಂಧ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿತು. ನಂತರ ಮತ್ತೆ ರಾಜ್ಯಗಳಿಗೆ ಅಧಿಕಾರ ಇದೆ ಸುಪ್ರೀಂ ಕೋರ್ಟ್ ಹೇಳಿತು. ಹೀಗೆ ಒಂದೊಂದು ಬಾರಿ ಒಂದೊಂದು ರೀತಿ ಆಗುತ್ತದೆ. ಹಿಂದೆ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು, ನಮ್ಮ ಸರ್ಕಾರ ಬಂದಮೇಲೆ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಬಡ್ತಿ ಮೀಸಲಾತಿ ಜಾರಿ ಮಾಡಬೇಕು ಎಂದು ಕಾನೂನು ಮಾಡಿದ ಮೇಲೆ ಸುಪ್ರೀಂ ಕೋರ್ಟ್‌ ನಮ್ಮ ಕಾನೂನನ್ನು ಎತ್ತಿಹಿಡಿಯಿತು.

ಕರ್ನಾಟಕದಲ್ಲಿ 2 ಲಕ್ಷ 59 ಸಾವಿರ ಹುದ್ದೆಗಳು ಖಾಲಿ

ಕರ್ನಾಟಕದಲ್ಲಿ 2 ಲಕ್ಷ 59 ಸಾವಿರ ಹುದ್ದೆಗಳು ಖಾಲಿ

ಒಂದು ಒಪ್ಪಂದದ ಮೇರೆಗೆ ಉದ್ಯೋಗಕ್ಕೆ ತೆಗೆದುಕೊಳ್ಳುವುದು, ಇನ್ನೊಂದು ಖಾಸಗಿಯವರಿಗೆ ಹೊರ ಗುತ್ತಿಗೆಯನ್ನು ನೀಡುವುದು ಹೀಗಾದರೆ ಅಲ್ಲಿ ಮೀಸಲಾತಿ ಕೇಳುವ ಹಾಗಿರಲ್ಲ. ಇರುವ 2% ಮೀಸಲಾತಿಗಾಗಿ ಚರ್ಚೆ, ಗುದ್ದಾಟ ಆಗುತ್ತಿದೆ. ಕೇಂದ್ರ ಸರ್ಕಾರದ 60 ಲಕ್ಷ ಹುದ್ದೆಗಳ ಖಾಲಿ ಇವೆ, ಕರ್ನಾಟಕ ಒಂದರಲ್ಲೇ 2 ಲಕ್ಷ 59 ಸಾವಿರ ಹುದ್ದೆಗಳು ಖಾಲಿ ಇವೆ. 72 ವರ್ಷ ಆದರೂ ಈ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಸಿಗುತ್ತಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು ಶೇ 17.1 ಇದ್ದಾರೆ, ಪರಿಶಿಷ್ಟ ವರ್ಗದವರು ಶೇ 7 ಇದ್ದಾರೆ. ಅಂದ್ರೆ ಮೀಸಲಾತಿ ಪ್ರಮಾಣ ಶೇ 24.1 ಆಗಬೇಕಲ್ವಾ? ಅಷ್ಟು ಆಗಿದೆಯಾ ಈಗ? ನಮಗಿನ್ನೂ ಗುಲಾಮಗಿರಿ ಮನಸ್ಥಿತಿಯೇ ಹೋಗಿಲ್ಲ. ಅಡುಗೆ ಮಾಡುವ ಒಬ್ಬ ಬ್ರಾಹ್ಮಣನಿಗೆ ನೀಡುವ ಗೌರವವನ್ನು ವಿದ್ಯಾವಂತ, ಶ್ರೀಮಂತ ದಲಿತನಿಗೆ ನೀಡಲ್ಲ. ಒಬ್ಬರಿಗೆ ನಮಸ್ಕಾರ ಸ್ವಾಮಿ ಎನ್ನುತ್ತೇವೆ, ಇನ್ನೊಬ್ಬರಿಗೆ ಏಕ ವಚನದಲ್ಲಿ ಮಾತನಾಡಿಸುತ್ತೇವೆ. ಮೊದಲು ಇದನ್ನು ಕಿತ್ತೆಸೆದು ಸ್ವಾಭಿಮಾನ ಬರಬೇಕು. ಆಗ ಮಾತ್ರ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೀಸಲಾತಿ ಭಿಕ್ಷೆಯಲ್ಲ, ಇದು ಸಂವಿಧಾನಾತ್ಮಕ ಹಕ್ಕು. ನಮ್ಮಿಂದ ಕಿತ್ತುಕೊಂಡದ್ದನ್ನೇ ನಮಗೆ ಸ್ವಲ್ಪ ಸ್ವಲ್ಪ ವಾಪಾಸು ಕೊಡಿ ಎಂದು ಕೇಳುವುದು ಮೀಸಲಾತಿ. ಇದನ್ನು ಗಟ್ಟಿಯಾಗಿ ಕೇಳೋಕೆ ಯಾಕೆ ಭಯ. ನಾವು ಇಷ್ಟು ವರ್ಷ ಸುಮ್ಮನಿದ್ದಿದ್ದು ಸಾಕು, ಇನ್ನೂ ನಾವು ಸುಮ್ಮನೆ ಕೂತರೆ ಸಮಾನತೆಯ ಸಮಾಜ ನಿರ್ಮಾಣ ಆಗಲ್ಲ. ನಮ್ಮ ಜೊತೆ ಸುತ್ತಲಿನ ಸಮಾಜವನ್ನು ಬೆಳೆಸುವ ಕೆಲಸವನ್ನು ನಾವು ಮಾಡಬೇಕು. ಇದು ನಮ್ಮ ಕರ್ತವ್ಯ ಕೂಡ ಎಂದು ಸಿದ್ದರಾಮಯ್ಯ ಸುದೀರ್ಘವಾಗಿ ಮೀಸಲಾತಿ ಸಂಬಂಧ ಮಾತನಾಡಿದರು.

English summary
Justice Nagamohan Das book "Misalathi Brame mathu Vasthava' Released by siddaramaiah in Ravindra kala kshethra and he said Every citizen of the country should know about the constitution, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X