MLC Resign: ಇಂದಿನ ಮರಿತಿಬ್ಬೇಗೌಡ ಸೇರಿ ಈವರೆಗೆ 11 ನಾಯಕರ ರಾಜೀನಾಮೆ: ಸ್ಪೀಕರ್
ಹುಬ್ಬಳ್ಳಿ, ಮಾರ್ಚ್ 21: ಕುಟುಂಬ ರಾಜಕಾರಣಕ್ಕೆ ಬೇಸತ್ತು ಸ್ವ ಇಚ್ಛೆಯಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ ನೀಡಿದರು. ಈ ಮೂಲಕ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿರುವಾಗಲೇ ಒಟ್ಟು 11 ಜನ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಂತಾಗಿದೆ. ಈ ಕುರಿತು ಸ್ವತಃ ಇಬ್ಬರು ನಾಯಕರು ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ ಅವರು, ನಾನು ಸ್ವಇಚ್ಛೆಯಿಂದ ವೈಯಕ್ತಿಕ ಕಾರಣಕ್ಕೆ ರಾಜಿನಾಮೆ ನೀಡಿದ್ದೆನೆ. ಪಕ್ಷದಲ್ಲಿ ನಿಷ್ಠಾವಂತ ಶಾಸಕನಾಗಿ ಕೆಲಸ ಮಾಡಿದ್ದೇನೆ. ಶಿಕ್ಷಕ ಸಮುದಾಯ ಹಿತವನ್ನು ನಾಲ್ಕು ಬಾರಿ ಆರಿಸಿ ಬಂದು ಕಾಪಾಡಿದ್ದೇನೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಯವರು ನಮ್ಮಲ್ಲಿ ಭಿನ್ನಾಭಿಪ್ರಾಯ ತಂದು ನಮ್ಮನ್ನು ಕಡೆಗಣೆ ಮಾಡಿದರು ಎಂದು ಸುದ್ದಿಗಾರರ ಎದುರು ಅವರು ದೂರಿದರು.
ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಬೇಡ ಎಂದಿದ್ದೆ
ನಾನು ಭಿನ್ನಾಭಿಪ್ರಾಯಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದೆ ಆದರೆ ಅದು ಅವರಿಗೆ ಇಷ್ಟವಾಗಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಂಡ್ಯದ ಟಿಕೆಟ್ ನೀಡದೇ ಸ್ಥಳೀಯ ಸಾಮಾನ್ಯ ಕಾರ್ಯಕರ್ತರಿಗೆ ನೀಡುವಂತೆ ಕೋರಿದ್ದೆ. ಇದು ಸಹ ನಮ್ಮ ನಾಯಕರಿಗೆ ಇಷ್ಟವಾಗಿಲ್ಲ.
ನನ್ನ ಮೇಲೆ ಸಂಶಯಾಸ್ಪದವಾಗಿ ದೃಷ್ಟಿಯಿಂದ ಪಕ್ಷದ ವರಿಷ್ಠರು ನೋಡುತ್ತಿದ್ದರು. ಪಕ್ಷದ ಸಂಘಟನೆಗೂ ನನ್ನನ್ನು ಪರಿಗಣಿಗಿಸಿಲ್ಲ. ನನ್ನ ಕ್ಷೇತ್ರದ ಶಿಕ್ಷಕ ಮತದಾರ ಅಭಿಪ್ರಾಯದಂತೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಮೊಸಳೆ ಇದ್ದಂತೆ: ಮರಿತಿಬ್ಬೇಗೌಡ
ಇನ್ನೂ ಕೆಲವೇ ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ. ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜಿನಾಮೆ ನೀಡಿದ್ದೆನೆ. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನಮ್ಮ ನಾಯಕರು ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಇದು ಬಹಳಷ್ಟು ಅಪಾಯಕಾರಿ. ಮೊಸಳೆ ಅಂದರೆ ಬಿಜೆಪಿ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಕುಮಾರಸ್ವಾಮಿ, ದೇವೆಗೌಡ, ರೇವಣ್ಣ ಮಾತ್ರ ಪಕ್ಷದ ಬಗ್ಗೆ ನಿರ್ಧಾರ ಮಾಡುತ್ತಾರೆ. ಸಾಮಾನ್ಯ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಜೆಡಿಎಸ್ ಒಂದು ಕುಟುಂಬದ ಪಕ್ಷ ಅಂತ ಎಲ್ಲರಿಗೂ ಗೊತ್ತು. ಈ ಕುಟುಂಬ ಪಕ್ಷದ ಮುಖಂಡರಾದ ಕುಮಾರಸ್ವಾಮಿ ಮತ್ತು ದೇವೆಗೌಡರಿಗೆ ಜನರೇ ತಕ್ಕ ಪಾಠ ಕಲಿಸತ್ತಾರೆ ಎಂದು ಅವರು ಭವಿಷ್ಯ ನುಡಿದರು.
ನಾನು ಸಭಾಪತಿ ಇದ್ದಾಗಲೇ 11 ರಾಜೀನಾಮೆ
ಮರಿತಿಬ್ಬೇಗೌಡ ಅವರು ರಾಜೀನಾಮ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ, ಸಭಾಪತಿ ಬಸವರಾಜ ಹೊರಟ್ಟಿ ಅವರು,
ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಕಿ ನೀಡಿದ್ದಾರೆ. ಇದು ಕರ್ನಾಟಕ ಇತಿಹಾಸದಲ್ಲಿಯೇ ದಾಖಲೆಯಾಗಿದೆ ಎಂದು ಅವರು ತಿಳಿಸಿದರು.
11 ಜನರ ರಾಜೀನಾಮೆ ದಾಖಲೆಯಾಗಿದೆ. ಇನ್ನೂ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ಪೋಟಕ ಹೇಳಿಕೆ ಕೊಟ್ಟರು.
2018ರಲ್ಲಿ ವಿ.ಎಸ್.ಉಗ್ರಪ್ಪ, 2021ರಲ್ಲಿ ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, 2022ರಲ್ಲಿ ಸಿ.ಎಂ.ಇಬ್ರಾಹಿಂ, 2023ರಲ್ಲಿ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಸವದಿ ಲಕ್ಷ್ಮಣ, ಆಯನೂರು ಮಂಜುನಾಥ್, 2024ರಲ್ಲಿ ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ ಸೇರಿದಂತೆ ಒಟ್ಟು ಹನ್ನೊಂದು ಜನರು ರಾಜೀನಾಮೆ ನೀಡಿದ್ದಾರೆ ಎಂದು ಅವರು ರಾಜೀನಾಮೆ ನೀಡಿದವರ ಲೆಕ್ಕ ಕೊಟ್ಟರು.












Click it and Unblock the Notifications